ADVERTISEMENT

ನಿರಾಸೆ ಕಂಡ ರಾಯಲ್‌ ಚಾಲೆಂಜರ್ಸ್‌

ಮೊದಲ ಓವರ್‌ನ ಎರಡು ಎಸೆತಗಳಲ್ಲಿ ವಿಕೆಟ್ ಉರುಳಿಸಿದ ವೇಗಿ ಉಮೇಶ್ ಯಾದವ್‌;

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST

ಮುಂಬೈ: ಆರಂಭದಲ್ಲಿ ಆಘಾತ ಅನುಭವಿಸಿದರೂ ನಾಯಕ ರೋಹಿತ್ ಶರ್ಮಾ ಮತ್ತು ಎವಿನ್ ಲ್ಯೂವಿಸ್ ಅವರ ಅಮೋಘ ಜೊತೆಯಾಟದ ಬಲದಿಂದ ಮುಂಬೈ ಇಂಡಿಯನ್ಸ್ ತಂಡ ಭಾರಿ ಮೊತ್ತ ಕಲೆ ಹಾಕಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ಈ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 214 ರನ್‌ಗಳ ಗುರಿ ನೀಡಿದೆ.

ಗುರಿ ಬೆನ್ನಟ್ಟಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು 46 ರನ್‌ಗಳಿಂದ ಸೋತಿತು.

ADVERTISEMENT

ಆಡಿದ ಮೂರೂ ಪಂದ್ಯಗಳನ್ನು ಸೋತಿದ್ದ ಮುಂಬೈ ಇಂಡಿ‌ಯನ್ಸ್ ಜಯದ ಕನಸು ಹೊತ್ತು ತವರಿನಲ್ಲಿ ಕಣಕ್ಕೆ ಇಳಿದಿತ್ತು. ಆದರೆ ಟಾಸ್‌ ಸೋತು ಬ್ಯಾಟಿಂಗ್ ಮಾಡಿದ ತಂಡ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು.

ಮೊದಲ ಓವರ್ ಮಾಡಿದ ವೇಗಿ ಉಮೇಶ್ ಯಾದವ್‌ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸಿ ವಿರಾಟ್ ಕೊಹ್ಲಿ ಬಳಗದಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು. ಉಮೇಶ್ ಹಾಕಿದ ಮೊದಲ ಎಸೆತ ಸೂರ್ಯಕುಮಾರ್ ಯಾದವ್‌ ಅವರ ಆಫ್ ಸ್ಟಂಪ್‌ನ ಬೇಲ್ಸ್‌ ಎಗರಿಸಿತು. ಮುಂದಿನ ಎಸೆತ ಈಶಾನ್‌ ಕಿಶನ್‌ ಅವರ ಆಫ್‌ಸ್ಟಂಪ್‌ ಉರುಳಿಸಿತು.

ಖಾತೆ ತೆರೆಯುವ ಮೊದಲೇ ಎರಡು ವಿಕೆಟ್ ಕಳೆದುಕೊಂಡ ಮುಂಬೈ ತಂಡದ ಇನಿಂಗ್ಸ್‌ಗೆ ಆರಂಭಿಕ ಆಟಗಾರ ಎವಿನ್‌ ಲ್ಯೂವಿಸ್‌ ಮತ್ತು ನಾಯಕ ರೋಹಿತ್ ಶರ್ಮಾ ಜೀವ ತುಂಬಿದರು. ಕ್ರಿಸ್ ವೋಕ್ಸ್‌, ವಾಷಿಂಗ್ಟನ್ ಸುಂದರ್ ಮತ್ತು ಮಹಮ್ಮದ್ ಸಿರಾಜ್‌ ಅವರ ದಾಳಿಯನ್ನು ನಿರಾತಂಕವಾಗಿ ಎದುರಿಸಿದ ಈ ಜೋಡಿ ಮೂರನೇ ವಿಕೆಟ್‌ಗೆ 108 ರನ್‌ ಸೇರಿಸಿದರು.

ಐದು ಸಿಕ್ಸರ್ ಮತ್ತು ಆರು ಬೌಂಡರಿ ಸಿಡಿಸಿದ ಲ್ಯೂವಿಸ್‌ 42 ಎಸೆತಗಳಲ್ಲಿ 65 ರನ್‌ ಗಳಿಸಿದರು. 12ನೇ ಓವರ್‌ನಲ್ಲಿ ಕೋರಿ ಆ್ಯಂಡರ್ಸನ್ ಎಸೆತದಲ್ಲಿ ವಿಕೆಟ್ ಕೀಪರ್‌ ಕ್ವಿಂಟನ್ ಡಿ ಕಾಕ್‌ ಪಡೆದ ಉತ್ತಮ ಕ್ಯಾಚ್‌ಗೆ ಅವರು ಬಲಿಯಾದರು.

ನಾಯಕನ ಜೊತೆಗೂಡಿದ ಕೃಣಾಲ್ ಪಾಂಡ್ಯ 40 ರನ್ ಸೇರಿಸಿ ನಿರ್ಗಮಿಸಿದರು. ಕೀರನ್ ಪೊಲಾರ್ಡ್‌ಗೆ ಮಿಂಚಲು ಆಗಲಿಲ್ಲ. 19ನೇ ಓವರ್‌ನಲ್ಲಿ ಪೊಲಾರ್ಡ್ ಔಟಾದ ನಂತರ ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ ನಾಯಕನಿಗೆ ಉತ್ತಮ ಸಹಕಾರ ನೀಡಿದರು. ಶತಕದತ್ತ ಹೆಜ್ಜೆ ಹಾಕಿದ್ದ ರೋಹಿತ್ ಶರ್ಮಾ (94; 52 ಎ, 5 ಸಿ, 10 ಬೌಂ) ಅಂತಿಮ ಓವರ್‌ನ ಐದನೇ ಎಸೆತದಲ್ಲಿ ಕೋರಿ ಆ್ಯಂಡರ್ಸನ್‌ಗೆ ವಿಕೆಟ್ ಒಪ್ಪಿಸಿದರು.

ಸಂಕ್ಷಿಪ್ತ ಸ್ಕೋರ್‌: ಮುಂಬೈ ಇಂಡಿಯನ್ಸ್‌: 20 ಓವರ್‌ಗಳಲ್ಲಿ 6ಕ್ಕೆ 213 (ಎವಿನ್ ಲ್ಯೂವಿಸ್‌ 65, ರೋಹಿತ್ ಶರ್ಮಾ 94, ಕೃಣಾಲ್ ಪಾಂಡ್ಯ 15, ಹಾರ್ದಿಕ್‌ ಪಾಂಡ್ಯ 17; ಉಮೇಶ್‌ ಯಾದವ್‌ 36ಕ್ಕೆ2, ಕ್ರಿಸ್ ವೋಕ್ಸ್‌ 31ಕ್ಕೆ1, ಕೋರಿ ಆ್ಯಂಡರ್ಸನ್‌ 47ಕ್ಕೆ2). ರಾಯಲ್‌ ಚಾಲೆಂಜರ್ಸ್ ಎದುರಿನ ಪಂದ್ಯ
(ವಿವಿರ ಅಪೂರ್ಣ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.