ADVERTISEMENT

ನೂರನೇ ಟೆಸ್ಟ್ ಪಂದ್ಯದ ಸಂಭ್ರಮಕ್ಕೆ ಭಜ್ಜಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2013, 19:59 IST
Last Updated 20 ಫೆಬ್ರುವರಿ 2013, 19:59 IST
ನೂರನೇ ಟೆಸ್ಟ್ ಪಂದ್ಯದ ಸಂಭ್ರಮಕ್ಕೆ ಭಜ್ಜಿ ಸಿದ್ಧತೆ
ನೂರನೇ ಟೆಸ್ಟ್ ಪಂದ್ಯದ ಸಂಭ್ರಮಕ್ಕೆ ಭಜ್ಜಿ ಸಿದ್ಧತೆ   

ಚೆನ್ನೈ: ಸ್ವದೇಶದಲ್ಲಿ ನಡೆದ ಹಿಂದಿನ ಟೆಸ್ಟ್ ಕ್ರಿಕೆಟ್ ಸರಣಿಗಳಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮೇಲುಗೈ ಸಾಧಿಸಿರುವ ಹರಭಜನ್ ಸಿಂಗ್ ಈಗ ಮತ್ತೊಂದು ಸವಾಲಿಗೆ ಸಿದ್ಧರಾಗುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈ ಆಫ್ ಸ್ಪಿನ್ನರ್ ಹೇಳಿಕೊಳ್ಳುವಂಥ ಫಾರ್ಮ್‌ನ್ಲ್ಲಲಿಲ್ಲ. ದೇಶಿ ಕ್ರಿಕೆಟ್‌ನ್ಲ್ಲಲೂ ಅಷ್ಟಾಗಿ ಮಿಂಚಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿ ಮಧ್ಯೆ ಅವರನ್ನು ಕೈಬಿಡಲಾಗಿತ್ತು. ಆದರೆ ಕಾಂಗರೂ ಪಡೆಯ ವಿರುದ್ಧದ ಸರಣಿ ಎಂಬ ಕಾರಣಕ್ಕೆ ಭಜ್ಜಿಗೆ ಮತ್ತೆ ಸ್ಥಾನ ನೀಡಲಾಗಿದೆ. ಅವರು ಆಸ್ಟ್ರೇಲಿಯಾ ವಿರುದ್ಧ ಆಡಿರುವ 16 ಟೆಸ್ಟ್‌ಗಳಲ್ಲಿ 90 ವಿಕೆಟ್ ಕಬಳಿಸಿದ್ದಾರೆ.

ಜಲಂಧರ್‌ನ ಹರಭಜನ್ (99 ಟೆಸ್ಟ್) ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕದ ಪಂದ್ಯಗಳ ಹೊಸ್ತಿಲಲ್ಲಿದ್ದಾರೆ. ಚೆಪಾಕ್ ಕ್ರೀಡಾಂಗಣದಲ್ಲಿ ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಪಂದ್ಯ ಅವರ ಪಾಲಿಗೆ ನೂರನೆಯದ್ದು.
ಭಾರತ ತಂಡ ಮೊದಲ ಪಂದ್ಯಕ್ಕೆ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಯೋಚನೆಯಲ್ಲಿದೆ. ಆಫ್ ಸ್ಪಿನ್ನರ್ ಆರ್.ಅಶ್ವಿನ್ ಹಾಗೂ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಜೊತೆಗೆ ಭಜ್ಜಿ ಕೂಡ ಆಡುವ ಸಾಧ್ಯತೆ ಇದೆ. ಬುಧವಾರ ಅಭ್ಯಾಸದ ವೇಳೆ ಹರಭಜನ್ ನೆಟ್ಸ್‌ನಲ್ಲಿ ತುಂಬಾ ಹೊತ್ತು ಬೌಲ್ ಮಾಡಿದರು.

ಭಾರತದ ಪರ ಟೆಸ್ಟ್‌ನಲ್ಲಿ ಒಂಬತ್ತು ಆಟಗಾರರು ಮಾತ್ರ 100 ಹಾಗೂ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಈಗ ಆ ಪಟ್ಟಿಗೆ ಭಜ್ಜಿ ಕೂಡ ಸೇರುವ ನಿರೀಕ್ಷೆ ಇದೆ.

`ನನ್ನ ನೆಚ್ಚಿನ ತಂಡದ ವಿರುದ್ಧ ಬೌಲ್ ಮಾಡಲು ಕಾತರದಿಂದ ಕಾಯುತ್ತಿದ್ದೇನೆ. ಆಸ್ಟ್ರೇಲಿಯಾ ತಂಡ ಈಗ ಅನನುಭವಿಗಳಿಂದ ಕೂಡಿದೆ. ಅವರಿಗೆ ಈ ಸರಣಿ ಸವಾಲಿನದ್ದು' ಎಂದು ಹರಭಜನ್ ಕೆಲ ದಿನಗಳ ಹಿಂದೆ ನುಡಿದಿದ್ದರು.

ಭಜ್ಜಿ 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ವದೇಶದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 32 ವಿಕೆಟ್ ಪಡೆದಿದ್ದರು. ಕೋಲ್ಕತ್ತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಲಭಿಸಿದ್ದ ಹ್ಯಾಟ್ರಿಕ್ ವಿಕೆಟ್ ಕೂಡ ಅದರಲ್ಲಿ ಸೇರಿದೆ. 2008ರ ಸಿಡ್ನಿ ಟೆಸ್ಟ್‌ನಲ್ಲಿ ಆ್ಯಂಡ್ರ್ಯೂ ಸೈಮಂಡ್ಸ್ ಜೊತೆಗಿನ `ಮಂಕಿಗೇಟ್' ಪ್ರಕರಣ ಹರಭಜನ್ ಅವರ ಆಕ್ರಮಣಕಾರಿ ಮನೋವೃತ್ತಿಗೆ ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.