ADVERTISEMENT

ನ್ಯೂಜಿಲೆಂಡ್‌ ತಂಡಕ್ಕೆ ಜಯದ ‘ಹೊನಲು’

ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯ: ಬೌಲ್ಟ್‌, ವಾಗ್ನರ್‌, ಆಸ್ಟಿ ದಾಳಿಗೆ ಕುಸಿದ ಇಂಗ್ಲೆಂಡ್‌

ಏಜೆನ್ಸೀಸ್
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ಇಂಗ್ಲೆಂಡ್ ಪತನಕ್ಕೆ ಕಾರಣರಾದ ಟ್ರೆಂಟ್ ಬೌಲ್ಟ್ ಅವರ ಬೌಲಿಂಗ್‌ ಶೈಲಿ ಎಎಫ್‌ಪಿ ಚಿತ್ರ
ಇಂಗ್ಲೆಂಡ್ ಪತನಕ್ಕೆ ಕಾರಣರಾದ ಟ್ರೆಂಟ್ ಬೌಲ್ಟ್ ಅವರ ಬೌಲಿಂಗ್‌ ಶೈಲಿ ಎಎಫ್‌ಪಿ ಚಿತ್ರ   

ಆಕ್ಲೆಂಡ್‌, ನ್ಯೂಜಿಲೆಂಡ್‌: ಎರಡು ದಿನ ಮಳೆ ಕಾಡಿದರೂ ಅಮೋಘ ಸಾಮರ್ಥ್ಯ ಮೆರೆದ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್‌ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 49 ರನ್‌ಗಳಿಂದ ಗೆದ್ದಿತು.

ನ್ಯೂಜಿಲೆಂಡ್‌ಗೆ ಇದು ಮೊತ್ತಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಆಗಿತ್ತು. ಮೊದಲ ಇನಿಂಗ್ಸ್‌ನಲ್ಲಿ ಎದುರಾಳಿಗಳನ್ನು 58 ರನ್‌ಗಳಿಗೆ ಕೆಡವಿದ್ದ ತಂಡ ನಂತರ ಎಂಟು ವಿಕೆಟ್‌ಗಳಿಗೆ 427 ರನ್‌ಗಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 320 ರನ್‌ಗಳಿಗೆ ಆಲೌಟಾಯಿತು.

ಕೊನೆಯ ದಿನವಾದ ಸೋಮವಾರ ಇನಿಂಗ್ಸ್ ಸೋಲಿನಿಂದ ತಪ್ಪಿಸಿಕೊಳ್ಳಲು ಇಂಗ್ಲೆಂಡ್‌ 369 ರನ್‌ ಗಳಿಸಬೇಕಾಗಿತ್ತು. ಆದರೆ ಎಡಗೈ ವೇಗಿಗಳಾದ ಟ್ರೆಂಟ್ ಬೌಲ್ಟ್‌, ನೀಲ್‌ ವಾಗ್ನರ್‌ ಮತ್ತು ಲೆಗ್ ಸ್ಪಿನ್ನರ್‌ ಟಾಡ್ ಆ್ಯಶ್ಲೆ ಅವರ ದಾಳಿಗೆ ನಲುಗಿದ ಇಂಗ್ಲೆಂಡ್‌ ದಿನದಾಟದಲ್ಲಿ 18.5 ಓವರ್‌ಗಳು ಬಾಕಿ ಇದ್ದಾಗಲೇ ಪತನ ಕಂಡಿತು.

ADVERTISEMENT

ನ್ಯೂಜಿಲೆಂಡ್ ಭಾನುವಾರ ಗಳಿಸಿದ್ದ ಮೊತ್ತಕ್ಕೇ ಸೋಮವಾರ ಬೆಳಿಗ್ಗೆ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ನಂತರ ಪಂದ್ಯ ಕುತೂಹಲಕಾರಿ ತಿರುವುಗಳಿಗೆ ಸಾಕ್ಷಿಯಾಯಿತು. ಇಂಗ್ಲೆಂಡ್‌ನ ಮೊದಲ ವಿಕೆಟ್‌ ಕೇವಲ ಆರು ರನ್‌ಗಳಿಗೆ ಉರುಳಿತು. ಅಲೆಸ್ಟರ್ ಕುಕ್ ಎರಡು ರನ್‌ ಗಳಿಸಿ ಟ್ರೆಂಟ್‌ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು.

ಸ್ಟೋನ್‌ಮ್ಯಾನ್ ಮತ್ತು ಜೋ ರೂಟ್‌ 88 ರನ್‌ ಸೇರಿಸಿದರು. ಕೊನೆಯ ಅವಧಿಯಲ್ಲಿ ಪರಿಣಾಮ ಬೀರಿದ ಬೌಲರ್‌ಗಳು ಆತಿಥೇಯರ ಇನಿಂಗ್ಸ್ ಜಯಕ್ಕೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌, ಮೊದಲ ಇನಿಂಗ್ಸ್‌: 20.4 ಓವರ್‌ಗಳಲ್ಲಿ 58; ನ್ಯೂಜಿಲೆಂಡ್‌, ಮೊದಲ ಇನಿಂಗ್ಸ್‌: 141 ಓವರ್‌ಗಳಲ್ಲಿ 8ಕ್ಕೆ 427 ಡಿಕ್ಲೇರ್ಡ್‌; ಇಂಗ್ಲೆಂಡ್‌, ಎರಡನೇ ಇನಿಂಗ್ಸ್‌: 126.1 ಓವರ್‌ಗಳಲ್ಲಿ 320ಕ್ಕೆ ಆಲೌಟ್‌ (ಮಾರ್ಕ್ ಸ್ಟೋನ್‌ಮ್ಯಾನ್‌ 55, ಜೋ ರೂಟ್ 51, ಡೇವಿಡ್ ಮಲಾನ್‌ 23, ಬೆನ್ ಸ್ಟೋಕ್ಸ್‌ 66, ಜಾನಿ ಬೇಸ್ಟೊ 26, ಮೊಯಿನ್ ಅಲಿ 28, ಕ್ರಿಸ್ ವೋಕ್ಸ್‌ 52; ಟ್ರೆಂಟ್‌ ಬೌಲ್ಟ್‌ 67ಕ್ಕೆ3, ನೀಲ್‌ ವಾಗ್ನರ್‌ 77ಕ್ಕೆ3, ಟಾಡ್ ಆ್ಯಶ್ಲೆ 39ಕ್ಕೆ3). ಫಲಿತಾಂಶ: ನ್ಯೂಜಿಲೆಂಡ್‌ಗೆ ಇನಿಂಗ್ಸ್ ಮತ್ತು 49 ರನ್‌ಗಳ ಜಯ; 2 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ. ಪಂದ್ಯಶ್ರೇಷ್ಠ: ಟ್ರೆಂಟ್ ಬೌಲ್ಟ್‌ (ನ್ಯೂಜಿಲೆಂಡ್‌).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.