ADVERTISEMENT

ಪಂಟರ್ 13000 ರನ್‌ಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಅಡಿಲೇಡ್ (ಪಿಟಿಐ): ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 13000 ರನ್‌ಗಳ ಮೈಲಿಗಲ್ಲು ಮುಟ್ಟಿ, ಮುನ್ನುಗ್ಗಿದ್ದಾರೆ.

ಪ್ರವಾಸಿ ಭಾರತ ವಿರುದ್ಧ ಮಂಗಳವಾರ ಇಲ್ಲಿ ಆರಂಭವಾದ `ಬಾರ್ಡರ್-ಗಾವಸ್ಕರ್ ಟ್ರೋಫಿ~ ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ನ ಮೊದಲ ದಿನವೇ ಶತಕ (137; 254 ಎಸೆತ, 13 ಬೌಂಡರಿ) ಗಳಿಸಿದ ಅವರು ದಿನದಾಟದ ಕೊನೆಗೆ ಔಟಾಗದೆ ಉಳಿದರು.

ತಮ್ಮ ತಂಡಕ್ಕೆ ಉತ್ತಮ ರನ್ ಕೊಡುಗೆ ನೀಡಿದ ಸಂತಸದ ಜೊತೆಗೆ ಹದಿಮೂರು ಸಹಸ್ರ ರನ್‌ಗಳ ಸಂಭ್ರಮವೂ ಸೇರಿಕೊಂಡಿತು. ಅಷ್ಟೇ ಅಲ್ಲ ಅತಿ ಕಡಿಮೆ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

 ಭಾರತದ ಸಚಿನ್ ತೆಂಡೂಲ್ಕರ್ (266 ಇನಿಂಗ್ಸ್) ಅವರಿಗೆ ಹೋಲಿಸಿದಲ್ಲಿ ಪಾಂಟಿಂಗ್ (275) ಇಷ್ಟೊಂದು ರನ್ ಗಳಿಸಲು ಸ್ವಲ್ಪ ಹೆಚ್ಚು ಇನಿಂಗ್ಸ್‌ಗಳೇ ಬಾಕಾದವು. ಆದರೆ ಪಂದ್ಯಗಳ ಲೆಕ್ಕಾಚಾರದಲ್ಲಿ `ಪಂಟರ್~ (162)ಗಿಂತ `ಲಿಟಲ್ ಚಾಂಪಿಯನ್~ (163) ಹಿಂದೆ ಉಳಿಯುತ್ತಾರೆ.

ಭಾರತದ ಇನ್ನೊಬ್ಬ ಅನುಭವಿ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ (160 ಪಂದ್ಯ) ಇವರಿಬ್ಬರಿಗಿಂತ ಕಡಿಮೆ ಮೇಲಿದ್ದಾರೆ. ಆದರೆ ಅವರು ಹದಿಮೂರು ಸಾವಿರ ರನ್‌ಗಳ ಮೈಲಿಗಲ್ಲು ಮುಟ್ಟಿದ್ದು 277 ಇನಿಂಗ್ಸ್‌ನಲ್ಲಿ. ಆಡಿದ ಅವಧಿಯ ನಿಟ್ಟಿನಿಂದ ನೋಡಿದಾಗ ದ್ರಾವಿಡ್ ಹೆಚ್ಚು ವೇಗವಾಗಿ ಇಷ್ಟೊಂದು ರನ್ ಗಳಿಸಿದ್ದಾರೆಂದು ಅನಿಸುವುದು ಸಹಜ. ಈ ರೀತಿಯಲ್ಲಿ ಪಟ್ಟಿಯನ್ನು ಮಾಡಿದಾಗ ಪಾಂಟಿಂಗ್ ಹಾಗೂ ಸಚಿನ್ ಕ್ರಮವಾಗಿ ನಂತರದ ಸ್ಥಾನದಲ್ಲಿ ನಿಲ್ಲುತ್ತಾರೆ.

ವಿಶೇಷವೆಂದರೆ ಹದಿಮೂರು ಸಾವಿರ ರನ್‌ಗಳ ದಾಖಲೆ ಮಾಡಿದ ಆಸ್ಟ್ರೇಲಿಯಾದ ಏಕಮಾತ್ರ ಕ್ರಿಕೆಟಿಗ ಎನಿಸಿದ್ದಾರೆ ಪಾಂಟಿಂಗ್. 1995ರಿಂದ ಇಲ್ಲಿಯವರೆಗೆ ಅವರು 13056 ರನ್ ಗಳಿಸಿದ್ದಾರೆ.
ಟೆಸ್ಟ್‌ನಲ್ಲಿ ಒಟ್ಟಾರೆಯಾಗಿ ಅತಿ ಹೆಚ್ಚು ರನ್ ಗಳಿಸಿದ ಕಾಂಗರೂಗಳ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎತ್ತರದಲ್ಲಿದ್ದಾರೆ. ಆ್ಯಲನ್ ಬಾರ್ಡರ್ (11174) ಮತ್ತು ಸ್ಟೀವ್ ವಾ (10927) ಅವರು ರಿಕಿಗಿಂತ ಹಿಂದಿದ್ದಾರೆ.

37 ವರ್ಷ ವಯಸ್ಸಿನ ಈ ಬ್ಯಾಟ್ಸ್‌ಮನ್ ಭಾರತದ ವಿರುದ್ಧ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ಕ್ರಿಕೆಟಿಗ ಎನ್ನುವ ಸಾಧನೆಯ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಕ್ಲೈವ್ ಲಾಯ್ಡ (28 ಪಂದ್ಯಗಳಲ್ಲಿ 2344 ರನ್) ಅವರನ್ನು ಈ ದಾಖಲೆ ಪಟ್ಟಿಯಲ್ಲಿ ಪಾಂಟಿಂಗ್ (29 ಪಂದ್ಯಗಳಲ್ಲಿ 2411 ರನ್) ಹಿಂದೆಹಾಕಿದ್ದಾರೆ.

ಭಾರತದ ವಿರುದ್ಧ ಹೆಚ್ಚು ಟೆಸ್ಟ್ ಶತಕ ಗಳಿಸಿದವರ ಪಟ್ಟಿಯಲ್ಲಿ ಗ್ಯಾರಿ ಸೋಬರ್ಸ್ ಮತ್ತು ವಿವಿಯನ್ ರಿಚರ್ಡ್ಸ್ ಅವರನ್ನು ಪಾಂಟಿಂಗ್ ಸರಿಗಟ್ಟಿದ್ದಾರೆ. ಈ ಮೂವರೂ ಭಾರತದ ಎದುರು ತಲಾ ಎಂಟು ಶತಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.