ADVERTISEMENT

ಪಂದ್ಯಕ್ಕೆ ಮಳೆ ಅಡ್ಡಿ; ಆತಂಕದಲ್ಲಿ ಮುಂಬೈ ಇಂಡಿಯನ್ಸ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST
ಪಂದ್ಯಕ್ಕೆ ಮಳೆ ಅಡ್ಡಿ; ಆತಂಕದಲ್ಲಿ ಮುಂಬೈ ಇಂಡಿಯನ್ಸ್
ಪಂದ್ಯಕ್ಕೆ ಮಳೆ ಅಡ್ಡಿ; ಆತಂಕದಲ್ಲಿ ಮುಂಬೈ ಇಂಡಿಯನ್ಸ್   

ಡರ್ಬನ್ (ಪಿಟಿಐ): ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಿಂದ ಭಾರತದ ಮತ್ತೊಂದು ತಂಡ ಹೊರ ಬೀಳುವ ಆತಂಕದಲ್ಲಿದೆ. ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಗುರುವಾರ ಅದೃಷ್ಟ ಕೈಕೊಟ್ಟಿತು. 

 ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಯಾರ್ಕ್‌ಷೈರ್ ವಿರುದ್ಧ ಗುರುವಾರ ರಾತ್ರಿ ನಡೆಯಬೇಕಿದ್ದ `ಬಿ~ ಗುಂಪಿನ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಹಾಗಾಗಿ ಈ ಪಂದ್ಯವನ್ನು ರದ್ದುಗೊಳಿಸಲಾಯಿತು. ಉಭಯ ತಂಡಗಳಿಗೆ ತಲಾ ಎರಡು ಪಾಯಿಂಟ್ ನೀಡಲಾಯಿತು. ಇಂಡಿಯನ್ಸ್ ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. 

  ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದಿದ್ದ ಮುಂಬೈ ಇಂಡಿಯನ್ಸ್ ತಂಡವು ಸಚಿನ್ ತೆಂಡೂಲ್ಕರ್ ವಿಕೆಟ್ ಬೇಗನೇ ಕಳೆದುಕೊಂಡಿತು. ಅವರು ರನ್‌ಔಟ್ ಆದರು. ಆದರೆ ಡ್ವೇನ್ ಸ್ಮಿತ್ (30; 26 ಎಸೆತ) ಹಾಗೂ ರೋಹಿತ್ ಶರ್ಮ (25; 23 ಎ.) ತಂಡದ ನೆರವಿಗೆ ನಿಂತರು. ಬಳಿಕ ಕೀರನ್ ಪೊಲಾರ್ಡ್ (ಔಟಾಗದೆ 37; 20 ಎ, 3 ಬೌಂ, 2 ಸಿ.) ಬಿರುಸಿನ ಆಟದ ಮೂಲಕ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಆದರೆ ಈ ಹಂತದಲ್ಲಿ ಬಂದ ಮಳೆ ತಂಡದ ಗೆಲುವಿನ ಆಸೆಗೆ ಅಡ್ಡಿಯಾಯಿತು. 

  ಹರಭಜನ್ ಸಿಂಗ್ ಸಾರಥ್ಯದ ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯದಲ್ಲಿ ಹೈವೆಲ್ಡ್ ಲಯನ್ಸ್ ಎದುರು ಸೋಲು ಕಂಡಿತ್ತು. ಈಗಾಗಲೇ ಭಾರತದ ಮತ್ತೊಂದು ತಂಡ ಕೋಲ್ಕತ್ತ ನೈಟ್ ರೈಡರ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಎರಡು ಪಂದ್ಯದಲ್ಲಿ ಸೋಲು ಕಂಡಿದ್ದ ಈ ತಂಡದ ಮತ್ತೊಂದು ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. 

 ಸ್ಕೋರ್: ಮುಂಬೈ ಇಂಡಿಯನ್ಸ್: 17.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 (ಡ್ವೇನ್ ಸ್ಮಿತ್ 37, ಸಚಿನ್ ತೆಂಡೂಲ್ಕರ್ 7, ರೋಹಿತ್ ಶರ್ಮ 25, ಅಂಬಟಿ ರಾಯುಡು 15, ಕೀರನ್ ಪೊಲಾರ್ಡ್ ಔಟಾಗದೆ 37; ಅಜೀಮ್ ರಫಿಕ್ 36ಕ್ಕೆ2, ಅದಿಲ್ ರಶೀದ್ 42ಕ್ಕೆ2). ಫಲಿತಾಂಶ: ಮಳೆಯ ಕಾರಣ ಪಂದ್ಯ ರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.