ADVERTISEMENT

‘ಪಕಿಯಾವೊ ಇನ್ನು ಬಾಕ್ಸಿಂಗ್‌ ನಿಲ್ಲಿಸಲಿ’

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 19:30 IST
Last Updated 3 ಜುಲೈ 2017, 19:30 IST
ಫಿಲಿಪ್ಪಿನ್ಸ್‌ನ  ಬಾಕ್ಸರ್‌ ಮ್ಯಾನಿ ಪಕಿಯಾವೊ (ಎಡ) ಅವರಿಗೆ ಬಲವಾದ ಪಂಚ್ ಮಾಡಿದ ಆಸ್ಟ್ರೇಲಿಯಾದ ಜೆಫ್ ಹಾರ್ನ್
ಫಿಲಿಪ್ಪಿನ್ಸ್‌ನ ಬಾಕ್ಸರ್‌ ಮ್ಯಾನಿ ಪಕಿಯಾವೊ (ಎಡ) ಅವರಿಗೆ ಬಲವಾದ ಪಂಚ್ ಮಾಡಿದ ಆಸ್ಟ್ರೇಲಿಯಾದ ಜೆಫ್ ಹಾರ್ನ್   

ಬ್ರಿಸ್ಬೇನ್‌ : ‘ಫಿಲಿಪ್ಪಿನ್ಸ್‌ನ ದಿಗ್ಗಜ ಬಾಕ್ಸರ್‌ ಮ್ಯಾನಿ ಪಕಿಯಾವೊ ಅವರು ಇನ್ನೆಂದೂ  ರಿಂಗ್‌ಗೆ ಇಳಿಯ ಬಾರದು. ವೃತ್ತಿಪರ ಬಾಕ್ಸಿಂಗ್‌ಗೆ ವಿದಾಯ ಹೇಳಲು ಅವರಿಗೆ ಇದು ಸಕಾಲ’ ಎಂದು ಪಕಿಯಾವೊ ಅವರ ಟ್ರೈನರ್‌ ಫೆಡ್ಡಿ ರೋಚ್‌  ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಬಾಕ್ಸಿಂಗ್‌ ಸಂಸ್ಥೆ ಆಶ್ರಯದಲ್ಲಿ ಭಾನುವಾರ ಇಲ್ಲಿನ ಸನ್‌ ಕಾರ್ಪ್‌ ಕ್ರೀಡಾಂಗಣದಲ್ಲಿ ನಡೆದಿದ್ದ ವಿಶ್ವ ವೆಲ್ಟರ್‌ವೇಟ್‌ ಹೋರಾಟದಲ್ಲಿ 38 ವರ್ಷದ ಪಕಿಯಾವೊ ಅವರು  111–117 , 113–115 , 113–115 ರಲ್ಲಿ ಆಸ್ಟ್ರೇಲಿಯಾದ 29 ವರ್ಷದ ಬಾಕ್ಸರ್‌ ಜೆಫ್‌ ಹಾರ್ನ್‌ ವಿರುದ್ಧ ಸೋತಿದ್ದರು.

‘ಪಕಿಯಾವೊ ಅವರು ಬಾಕ್ಸಿಂಗ್‌ ಲೋಕ ಕಂಡ ಅಪ್ರತಿಮ ಬಾಕ್ಸರ್‌. ಅವರು ತಮ್ಮ 22 ವರ್ಷಗಳ ವೃತ್ತಿ ಬದುಕಿನಲ್ಲಿ ಎಂಟು ವಿವಿಧ ತೂಕದ ವಿಭಾಗಗಳಲ್ಲಿ ವಿಶ್ವ ಚಾಂಪಿಯನ್‌ ಆಗಿದ್ದಾರೆ. ವಯ ಸ್ಸಾದಂತೆ ಅವರ ಸಾಮರ್ಥ್ಯ ಕ್ಷೀಣಿಸುತ್ತಿದೆ. ಭಾನುವಾರದ ಹೋರಾಟ ಇದಕ್ಕೊಂದು ನಿದರ್ಶನ’ ಎಂದು ಫೆಡ್ಡಿ ನುಡಿದಿದ್ದಾರೆ.

ADVERTISEMENT

‘ನಿವೃತ್ತಿ ಪ್ರಕಟಿಸಲು ಮ್ಯಾನಿಗೆ ಇದು ಸೂಕ್ತ ಸಮಯ. ಈ ವಿಚಾರವಾಗಿ ಅವರ ಜೊತೆ ಖುದ್ದಾಗಿ ಮಾತನಾಡುತ್ತೇನೆ’ ಎಂದಿದ್ದಾರೆ. ಭಾನುವಾರದ ಹೋರಾಟ ದಲ್ಲಿ ಸೋತಿರುವ ಮ್ಯಾನಿ ಅವರು ಮರು ಪಂದ್ಯದಲ್ಲಿ (ರಿಟರ್ನ್‌ ಮ್ಯಾಚ್‌) ಜೆಫ್‌ ವಿರುದ್ಧ ಸೆಣಸುವುದಾಗಿ ಘೋಷಿಸಿದ್ದಾರೆ.
ಆದರೆ ಪಕಿಯಾವೊ ಅವರ ಈ ನಿರ್ಧಾರವನ್ನು ಆಸ್ಟ್ರೇಲಿಯಾದ ಬಾಕ್ಸರ್‌, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬಾರಿ ಪ್ರಶಸ್ತಿ ಜಯಿಸಿರುವ ಜೆಫ್‌ ಫೆನೆಚೆ ಟೀಕಿಸಿದ್ದಾರೆ.

‘ಪಕಿಯಾವೊಗೆ ಮರು ಹೋರಾಟ ದಲ್ಲಿ ಸೆಣಸಲು ಆಯೋಜಕರು ಅವಕಾಶ ನೀಡಬಾರದರು. ಒಂದೊಮ್ಮೆ ಅವಕಾಶ ಕೊಟ್ಟರೆ ಅದು ಮೂರ್ಖತನವಾಗಲಿದೆ. ಬಾಕ್ಸಿಂಗ್‌ನಿಂದ ಮ್ಯಾನಿ  ಸಾಕಷ್ಟು ಹಣ ಗಳಿಸಿದ್ದಾರೆ.   ಈಗ ಖುಷಿಯಿಂದ ವಿದಾಯ ಹೇಳಿ ಕುಟುಂಬದೊಂದಿಗೆ ಸಂತಸದಿಂದ ಕಾಲ ಕಳೆಯಲಿ’ ಎಂದು ಜೆಫ್‌ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.