ADVERTISEMENT

ಪದಕದ ಸನಿಹ ಸೇತುರಾಮನ್‌

ವಿಶ್ವ ಜೂನಿಯರ್‌ ಚೆಸ್‌

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 19:59 IST
Last Updated 26 ಸೆಪ್ಟೆಂಬರ್ 2013, 19:59 IST

ಕೊಜಾಯೆಲಿ, ಟರ್ಕಿ (ಪಿಟಿಐ):  ಭಾರತದ ಗ್ರ್ಯಾಂಡ್‌ಮಾಸ್ಟರ್‌ಗಳಾದ ಎಸ್‌.ಪಿ.ಸೇತುರಾಮನ್‌ ಹಾಗೂ ವಿದಿತ್‌ ಗುಜರಾತಿ ಇಲ್ಲಿ ನಡೆಯುತ್ತಿ­ರುವ ವಿಶ್ವ ಜೂನಿಯರ್‌ ಚೆಸ್‌ ಚಾಂಪಿ­ಯನ್‌ಷಿಪ್‌ನಲ್ಲಿ ಪದಕ ಗೆಲ್ಲುವ ಅವಕಾಶ ಹೆಚ್ಚಿಸಿಕೊಂಡಿದ್ದಾರೆ.

12ನೇ ಸುತ್ತಿನ ಪಂದ್ಯದಲ್ಲಿ ಸೇತುರಾಮನ್‌ ಪುರುವಿನ ಜಾರ್ಜ್‌ ಕೋರಿ ಎದುರು ಗೆದ್ದು ಪೂರ್ಣ ಪಾಯಿಂಟ್‌ ಸಂಪಾದಿಸಿದರು. ವಿದಿತ್‌ ಬೆಲಾರಸ್‌ನ ವ್ಲಾಡಿಸ್ಲೇವ್‌ ಕೊವಲೇವ್‌ಗೆ ಆಘಾತ ನೀಡಿದರು. ಈ ಮೂಲಕ ಈ ಆಟಗಾರರು ತಲಾ 9 ಪಾಯಿಂಟ್‌ ಹೊಂದಿದ್ದಾರೆ. ಹಾಗಾಗಿ ಇಬ್ಬರಲ್ಲಿ ಒಬ್ಬರಿಗೆ ಪದಕ ಗೆಲ್ಲುವ ಅವಕಾಶವಿದೆ. ಶುಕ್ರವಾರ 12ನೇ ಹಾಗೂ ಕೊನೆಯ ಸುತ್ತಿನ ಪೈಪೋಟಿ ನಡೆಯಲಿದ್ದು ಕುತೂಹಲ ಹೆಚ್ಚಿಸಿದೆ.

ವಿದಿತ್‌ ಈ ಪಂದ್ಯದಲ್ಲಿ ಗನ್‌ಫೆಲ್ಡ್‌ ಡಿಫೆನ್ಸ್‌ ಮಾದರಿ ಆಟಕ್ಕೆ ಮುಂದಾ­ದರು. ಅವರ ಎದುರಾಳಿ ಜಾರ್ಜ್‌ ಕೋರಿ ಆರಂಭದಲ್ಲೇ ಎಡವಟ್ಟು ಮಾಡಿಕೊಂಡರು. 37ನೇ ನಡೆಯಲ್ಲಿ ಭಾರತದ ಆಟಗಾರ ಗೆಲುವಿನ ನಗು ಬೀರಿದರು. ಆದರೆ ಸೇತುರಾಮನ್‌ ಕಠಿಣ ಪ್ರಯತ್ನ ಹಾಕಬೇಕಾಯಿತು. ಅವರು ಕಿಂಗ್ಸ್‌ ಇಂಡಿಯನ್‌ ಡಿಫೆನ್ಸ್‌ ಮಾದರಿ ಆಟಕ್ಕೆ ಮುಂದಾದರು. 45ನೇ ನಡೆಯ ಬಳಿಕ ಅವರಿಗೆ ಗೆಲುವು ಒಲಿಯಿತು.

ಚೀನಾದ ಯು ಯಿಯಾಂಗಿ 10.5 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಚಿನ್ನದ ಪದಕವನ್ನು ಬಹುತೇಕ ಖಚಿತಪಡಿಸಿಕೊಂಡಿದ್ದಾರೆ. ಅವರು 12ನೇ ಸುತ್ತಿನ ಪಂದ್ಯದಲ್ಲಿ ಅರ್ಮೇನಿಯಾದ ಸಾಮ್ವೆಲ್‌ ಟರ್‌ ಸಹಾಕಿಯಾನ್‌ ಎದುರು ಗೆದ್ದರು. ಯಿಯಾಂಗಿ ಕೊನೆಯ ಸುತ್ತಿನ ಪಂದ್ಯದಲ್ಲಿ ವಿದಿತ್‌ ಎದುರು ಪೈಪೋಟಿ ನಡೆಸಲಿದ್ದು ಡ್ರಾ ಮಾಡಿಕೊಂಡರೆ ಸಾಕು.

ಟರ್ಕಿಯ ಅಲೆಕ್ಸಾಂಡರ್‌ ಇಪಾಟೋವ್‌ (9.5 ಪಾಯಿಂಟ್‌) ಎರಡನೇ ಸ್ಥಾನದಲ್ಲಿದ್ದಾರೆ. ಅವರು ಗುರುವಾರ ಚೀನಾದ ವೀ ಯಿ ಎದುರು ಡ್ರಾ ಸಾಧಿಸಿದರು. ಕೊನೆಯ ಸುತ್ತಿನ ಪಂದ್ಯದಲ್ಲಿ ಡ್ರಾ ಮಾಡಿಕೊಂಡರೂ ಅವರಿಗೆ ಬೆಳ್ಳಿ ಪದಕ ಒಲಿಯಲಿದೆ.

ಆದರೆ ಭಾರತದ ಮತ್ತೊಬ್ಬ ಗ್ರ್ಯಾಂಡ್‌ಮಾಸ್ಟರ್‌ ಸಹಜ್‌ ಗ್ರೋವರ್‌ ಸರ್ಬಿಯಾದ ಅಲೆಕ್ಸಾಂಡರ್‌ ಇಂಡಿಜಿಕ್‌ ಎದುರು ಪರಾಭವಗೊಂಡರು. ಆದರೆ ದೆಬಾಶಿಶ್‌ ದಾಸ್‌ ಉಜ್ಬಿಕಿಸ್ತಾನದ ಸಿಮೋನ್‌ ಡಿ ಫಿಲೊಮೆನೊ ಎದುರು ಗೆದ್ದರು. ಅವರೀಗ ಗ್ರ್ಯಾಂಡ್‌ಮಾಸ್ಟರ್ ಪದವಿ ಪಡೆಯುವ ಸನಿಹದಲ್ಲಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಪದ್ಮನಿ ರಾವತ್‌ ರಷ್ಯಾದ ಅಲಿನಾ ಕಾಶ್ಲಿನ್ಸ್‌ಕಯಾ ಎದುರು ಡ್ರಾ ಸಾಧಿಸಿದರು. ರಾವತ್‌ ಸದ್ಯ 8 ಪಾಯಿಂಟ್‌ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.