ADVERTISEMENT

ಪದಕ ಗೆದ್ದವರಿಗೆ ಭಾರಿ ಬಹುಮಾನ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಜೈಪುರ (ಪಿಟಿಐ): ಈ ಸಲದ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಿಗೆ ರಾಜಸ್ತಾನ ಸರ್ಕಾರ ಬಹುಮಾನ ಪ್ರಕಟಿಸಿದೆ.
`ಬೆಳ್ಳಿ ಗೆದ್ದವರಿಗೆ ತಲಾ 50 ಲಕ್ಷ ರೂಪಾಯಿ ಹಾಗೂ ಕಂಚು ಜಯಿಸಿದ ಕ್ರೀಡಾಳುಗಳಿಗೆ ತಲಾ 25 ಲಕ್ಷ ರೂಪಾಯಿ ನೀಡಲು ಸರ್ಕಾರ ನಿರ್ಧರಿಸಿದೆ~ ಎಂದು ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ತಿಳಿಸಿದರು.

ಬೆಳ್ಳಿ ಗೆದ್ದ ಶೂಟರ್ ವಿಜಯ್ ಕುಮಾರ್ ಹಾಗೂ `ಪೈಲ್ವಾನ್~  ಸುಶೀಲ್ ಕುಮಾರ್ ಅವರಿಗೆ ತಲಾ 50 ಲಕ್ಷ ರೂ. ಹಾಗೂ ಕಂಚು ಗೆದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಶೂಟರ್ ಗಗನ್ ನಾರಂಗ್, ಬಾಕ್ಸರ್ ಎಂ.ಸಿ. ಮೇರಿಕೋಮ್ ಹಾಗೂ ಕುಸ್ತಿ ಪಟು ಯೋಗಿಶ್ವರ್ ದತ್ ಅವರಿಗೆ ತಲಾ 25 ಲಕ್ಷ ರೂ. ಲಭಿಸಲಿದೆ. ಡಿಸ್ಕಸ್ ಥ್ರೋ ಸ್ಪರ್ಧಿ ಕೃಷ್ಣಾ ಪೂನಿಯಾ ಕೂಡಾ ಫೈನಲ್ ಪ್ರವೇಶಿಸಿದ್ದರಿಂದ ಅವರಿಗೂ 21 ಲಕ್ಷ ರೂ. ಬಹುಮಾನ ನೀಡುವುದಾಗಿ ಅವರು ತಿಳಿಸಿದ್ದಾರೆ.

ಮೇರಿಗೆ 40 ಲಕ್ಷ ರೂ: ನಾರ್ಥ್ ಈಸ್ಟರ್ನ್ ಕೌನ್ಸಿಲ್ ಮೇರಿ ಕೋಮ್‌ಗೆ 40 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿದೆ.

ಇಫ್ಕೊನಿಂದಲೂ ಬಹುಮಾನ: ಒಲಿಂಪಿಕ್ಸ್‌ನಲ್ಲಿ ಚಾರಿತ್ರಿಕ ಸಾಧನೆಗೆ ಕಾರಣವಾಗಿರುವ ಸುಶೀಲ್‌ಗೆ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕಾರ್ಪೊರೇಟಿವ್ ಲಿಮಿಟೆಡ್ (ಇಫ್ಕೊ) ಹತ್ತು ಲಕ್ಷ  ರೂ. ಬಹುಮಾನ ನೀಡುವುದಾಗಿ ಹೇಳಿದೆ.

`ಮೇರಿ ಕೋಮ್ ಹಾಗೂ ಯೋಗಿಶ್ವರ್‌ಗೆ ತಲಾ ಏಳು ಲಕ್ಷ ರೂಪಾಯಿ. ಕುಸ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನರಸಿಂಗ್ ಯಾದವ್, ಅಮಿತ್ ಕುಮಾರ್ ಮತ್ತು ಗೀತಾ ಪೋಗೆಟ್ ಅವರಿಗೂ ಎರಡು ಲಕ್ಷ ರೂ. ಸುಶೀಲ್ ಅವರ ಕೋಚ್‌ಗೆ 5 ಲಕ್ಷ ರೂ. ಮತ್ತು ಮೇರಿ ಅವರ ಕೋಚ್‌ಗೆ 2 ಲಕ್ಷ ರೂ. ನೀಡಲಾಗುವುದು~ ಎಂದು ಇಫ್ಕೊದ ಕಾರ್ಯನಿರ್ವಾಹಕ ನಿರ್ದೇಶಕ ಯು.ಎಸ್. ಅವಸ್ತಿ ತಿಳಿಸಿದ್ದಾರೆ.

ಇಂದು ಸನ್ಮಾನ:
ಸೋಮವಾರ ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವ ವಿ. ಕಿಶೋರ್ ಚಂದ್ರ ಅವರು ಬಾಕ್ಸರ್ ಮೇರಿ ಕೋಮ್ ಅವರನ್ನು ಸನ್ಮಾನಿಸಿ  ಹತ್ತು ಲಕ್ಷ ರೂ. ಬಹುಮಾನ ನೀಡಲಿದ್ದಾರೆ.

 ಮೇರಿ ಅವರ ಕೋಚ್‌ಗೂ ಸನ್ಮಾನಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಮೇರಿ ಅವರ ಪತಿ ಹಾಗೂ ಕುಟುಂಬದವರೂ ಪಾಲ್ಗೊಳ್ಳಲಿದ್ದಾರೆ.

ಸಾಧಕರಿಗೆ ಸಂಸತ್ತಿನಲ್ಲಿ ಅಭಿನಂದನೆ

ನವದೆಹಲಿ (ಪಿಟಿಐ):
ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಸಾಧಕರಿಗೆ ಸೋಮವಾರ ಸಂಸತ್ತಿನಲ್ಲಿ ಅಭಿನಂದನೆ ಸಲ್ಲಿಸಲಾಯಿತು.

`ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಿದ ಈ ಕ್ರೀಡಾಳುಗಳು ಮುಂದೆ ಕ್ರೀಡೆಯಲ್ಲಿ ಸಾಧನೆ ಮಾಡಬಯಸುವವರಿಗೆ ಸ್ಫೂರ್ತಿ. ಆರು ಪದಕಗಳನ್ನು ಜಯಿಸಿ ಐತಿಹಾಸಿಕ ಸಾಧನೆ ಮಾಡಿರುವ ಈ ಒಲಿಂಪಿಕ್ಸ್ ಎಂದೂ ಮರೆಯಲು ಸಾಧ್ಯವಿಲ್ಲ~ ಎಂದು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಹೇಳಿದರು. 

ಮದ್ದು ಸೇವನೆ: ಚಿನ್ನದ ಪದಕ ವಾಪಸ್
ಲಂಡನ್ (ರಾಯಿಟರ್ಸ್):
ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನ ಮಹಿಳೆಯರ ಶಾಟ್‌ಪಟ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದ ಬೆಲಾರಸ್‌ನ ನದ್ಜೆಯಾ ಒಸ್ಟ್ಯಾಪ್‌ಚುಕ್ ನಿಷೇಧಿತ ಮದ್ದು ಸೇವಿಸಿದ್ದು ಸಾಬೀತಾಗಿದೆ. ಈ ಕಾರಣ ಬಂಗಾರದ ಪದಕವನ್ನು ಅವರಿಂದ ಹಿಂದಕ್ಕೆ ಪಡೆಯಲಾಗಿದೆ.

ಮಹಿಳೆಯರ ಶಾಟ್‌ಪಟ್ ಸ್ಪರ್ಧೆ ಕಳೆದ ಸೋಮವಾರ ನಡೆದಿತ್ತು. ಸ್ಪರ್ಧೆಗೆ ಮುನ್ನ ಹಾಗೂ ಬಳಿಕ ಒಸ್ಟ್ಯಾಪ್‌ಚುಕ್ ಅವರ ಮೂತ್ರದ ಸ್ಯಾಂಪಲ್ ಪಡೆಯಲಾಗಿತ್ತು. ಅವರು ಉದ್ದೀಪನ ಮದ್ದು ಸೇವಿಸಿದ್ದು ಪರೀಕ್ಷೆಯಲ್ಲಿ ಖಚಿತವಾಗಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ತಿಳಿಸಿದೆ.

`ಮಹಿಳೆಯರ ಶಾಟ್‌ಪಟ್ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದ್ದ ಒಸ್ಟ್ಯಾಪ್‌ಚುಕ್ ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಗಿದೆ~ ಎಂದು ಐಒಸಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. `ಚಿನ್ನದ ಪದಕ ಹಿಂದಕ್ಕೆ ನೀಡುವಂತೆ ಬೆಲಾರಸ್ ಒಲಿಂಪಿಕ್ ಸಮಿತಿಗೆ ಸೂಚಿಸಲಾಗಿದೆ~ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.