ADVERTISEMENT

ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ಶ್ರೇಯಸ್‌

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 19:30 IST
Last Updated 23 ಡಿಸೆಂಬರ್ 2013, 19:30 IST
ಶ್ರೇಯಸ್‌ ಗೋಪಾಲ್‌
ಶ್ರೇಯಸ್‌ ಗೋಪಾಲ್‌   

ಬೆಂಗಳೂರು: ‘ಇದೇ ವರ್ಷದಲ್ಲಿ ರಣಜಿ ಆಡಬೇಕೆನ್ನುವ ಗುರಿ ಹೊಂದಿದ್ದೆ. ಆ ಕನಸು ಈಗ ನನಸಾಗಿದೆ. ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಿದ್ದು ಖುಷಿ ನೀಡಿದೆ’ ಎಂದು ಮುಂಬೈ ಎದುರಿನ ಪಂದ್ಯದಲ್ಲಿ ರಣಜಿಗೆ ಪದಾರ್ಪಣೆ ಮಾಡಿದ ಸ್ಪಿನ್ನರ್‌ ಶ್ರೇಯಸ್‌  ಹೇಳಿದರು.

2006–07ರಲ್ಲಿ ಬಿಸಿಸಿಐ ಆಯೋಜಿಸಿದ್ದ ದಕ್ಷಿಣ ವಲಯ 15 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯಲ್ಲಿ ಶ್ರೇಯಸ್‌ ಆಡಿದ್ದರು. ಆ ಟೂರ್ನಿಗೆ ಆಗ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಕಿರಿಯ (13 ವರ್ಷ) ಆಟಗಾರ ಎನ್ನುವ ಕೀರ್ತಿಯನ್ನೂ ಅವರು ಹೊಂದಿದ್ದಾರೆ. 16 ವರ್ಷದೊಳಗಿನವರ ಕರ್ನಾಟಕ ತಂಡಕ್ಕೆ ಉಪನಾಯಕರಾಗಿದ್ದರು.

ಪ್ರೆಸಿಡೆನ್ಸಿ ಶಾಲೆ ಎದುರಿನ ಪಂದ್ಯದಲ್ಲಿ ಫ್ರಾಂಕ್‌ ಅಂಥೋಣಿ ಪಬ್ಲಿಕ್‌ ಶಾಲಾ ತಂಡವನ್ನು ಪ್ರತಿನಿಧಿಸಿದ್ದ 20 ವರ್ಷದ ಶ್ರೇಯಸ್‌ ಎರಡು ಸಲ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಸಾಧನೆಯೂ ಮಾಡಿದ್ದಾರೆ. ಸೋಮವಾರ 38.5ನೇ ಓವರ್‌ನಲ್ಲಿ ಶ್ರೇಯಸ್‌ ಮುಂಬೈ ತಂಡದ ಹಿಕೇನ್‌ ಷಾ ವಿಕೆಟ್‌ ಪಡೆದರು. ರಣಜಿಯಲ್ಲಿ ಮೊದಲ ವಿಕೆಟ್‌ ಪಡೆದ ಖುಷಿಯಲ್ಲಿ ಕುಣಿದಾಡಿ ಸಂಭ್ರಮಿಸಿದರು. ಸಹ ಆಟಗಾರರು ಬೆನ್ನು ತಟ್ಟಿ ಹುರಿದುಂಬಿಸಿದರು.

‘ರಾಜ್ಯ ತಂಡವನ್ನು ಪ್ರತಿನಿಧಿಸಲು ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವುದು ನನ್ನ ಮುಂದಿರುವ ಸವಾಲು’ ಎಂದು ಜೈನ್‌ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ಶ್ರೇಯಸ್ ನುಡಿದರು. ಮೊದಲ ಪಂದ್ಯದಲ್ಲಿ ಮಗ ತೋರಿದ ಪ್ರದರ್ಶನದ ಬಗ್ಗೆ ಶ್ರೇಯಸ್‌ ತಂದೆ ಗೋಪಾಲ್‌ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.

‘ಶ್ರೇಯಸ್‌ ತನ್ನ ಕರ್ತವ್ಯವನ್ನು ಮಾಡಿದ್ದಾನೆ. ಮಂಗಳವಾರ ಕರ್ನಾಟಕ ಇನಿಂಗ್ಸ್‌ ಮುನ್ನಡೆ ಸಾಧಿಸಿದರೆ, ಆತನ ಶ್ರಮ ಸಾರ್ಥಕವಾದಂತೆ. ಯಾವುದೇ ಸಂದರ್ಭವಾಗಲಿ, ತಂಡದ ಹಿತಕ್ಕಾಗಿ ಆಡಬೇಕು’ ಎಂದು ಕ್ಲಬ್‌ ಮಟ್ಟದ ಕ್ರಿಕೆಟ್‌ನಲ್ಲಿ ಆಡಿರುವ ಗೋಪಾಲ್‌ ನುಡಿದರು. ಶ್ರೇಯಸ್‌ ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ ತಂಡವನ್ನು ಪ್ರತಿನಿಧಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.