ADVERTISEMENT

ಪಾಕಿಸ್ತಾನ ಕ್ರಿಕೆಟ್‌ ಮೇಲೆ ಬುಕ್ಕಿಗಳ ಕಣ್ಣು: ಮ್ಯಾಚ್‌ ಫಿಕ್ಸಿಂಗ್‌ಗಾಗಿ ನಾಯಕ ಸರ್ಫರಾಜ್‌ಗೆ ಭಾರೀ ಆಫರ್‌

ಏಜೆನ್ಸೀಸ್
Published 21 ಅಕ್ಟೋಬರ್ 2017, 11:19 IST
Last Updated 21 ಅಕ್ಟೋಬರ್ 2017, 11:19 IST
ಸರ್ಫರಾಜ್ ಅಹಮ್ಮದ್‌. –ರಾಯಿಟರ್ಸ್‌ ಚಿತ್ರ
ಸರ್ಫರಾಜ್ ಅಹಮ್ಮದ್‌. –ರಾಯಿಟರ್ಸ್‌ ಚಿತ್ರ   

ಕರಾಚಿ: ‘ದುಬೈನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಭಾಗಿಯಾಗುವಂತೆ, ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್‌ ಅಹಮ್ಮದ್‌ಗೆ ಬುಕ್ಕಿಗಳಿಂದ ಲಾಭದಾಯಕ ಆಫರ್‌ ಬಂದಿದೆ. ಆದರೆ ಇದನ್ನು ನಿರಾಕರಿಸಿರುವ ಅವರು, ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ಘಟಕದ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ’ ಎಂದು ವರದಿಯಾಗಿದೆ.

ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ)ಯ ಹಿರಿಯ ಅಧಿಕಾರಿಯೊಬ್ಬರು, ‘ಈ ವಿಚಾರ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ಆದರೆ, ನಮ್ಮ ತಂಡದ ನಾಯಕನ ಮೇಲೆ ನಮಗೆ ಸಂಪೂರ್ಣ ಗೌರವವಿದೆ. ತಂಡದ ನಾಯಕನಾಗಿ ಹಾಗೂ ಆಟಗಾರನಾಗಿ ಭ್ರಷ್ಟಾಚಾರವನ್ನು ಕ್ರೀಡೆಯಿಂದ ನಿಯಂತ್ರಿಸುವುದು ಹೇಗೆ ಎಂಬುದಕ್ಕೆ ಉತ್ತಮ ಉದಾಹರಣೆಯನ್ನು ಸಹ ಆಟಗಾರರಿಗೆ ತೋರಿಸಿಕೊಟ್ಟಿದ್ದಾರೆ’ ಎಂದು ಹೇಳಿದ್ದಾರೆ.

‘ಈ ತರಹದ ಪ್ರಕರಣಗಳಲ್ಲಿ ಆಟಗಾರರನ ಹೆಸರು ಬಹಿರಂಗ ಪಡಿಸುವುದಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ)ಯ ನಿಯಮಗಳು ಅವಕಾಶ ನೀಡುವುದಿಲ್ಲ. ಆದರೆ, ಸರ್ಫರಾಜ್‌ ತಮಗೆ ಬುಕ್ಕಿಗಳಿಂದ ಆಫರ್‌ ಬಂದಿದ್ದ ಕುರಿತು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ’ ಎಂದೂ ಹೇಳಿದ್ದಾರೆ.

ADVERTISEMENT

‘ಆಡಳಿತ ಮಂಡಳಿ ತಂಡದ ಎಲ್ಲಾ ಆಟಗಾರರ ಮೇಲೆ ಹೆಚ್ಚಿನ ನಿಗಾವಹಿಸಲಿದ್ದು, ಆಟಗಾರರ ವಿಶ್ರಾಂತಿ ಸಮಯ ಹಾಗೂ ಮತ್ತಿತರ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

‘ಸದ್ಯ ಇಲ್ಲಿ ನಡೆಯುತ್ತಿರುವ ಸರಣಿಯ ಮಧ್ಯದಲ್ಲಿ ಮುಖ್ಯ ತರಬೇತುದಾರ ಮಿಕ್ಕಿ ಆರ್ಥರ್‌ ಅವರ ಒತ್ತಾಯದ ಮೇರೆಗೆ, ಆಟಗಾರರಿಗೆ ಸ್ವಲ್ಪ ವಿಶ್ರಾಂತಿ ನೀಡಲಾಗಿತ್ತು. ಆಟಗಾರರು ತಮ್ಮ ಸ್ನೇಹಿತರನ್ನು ಭೇಟಿಯಾಗಲು, ಶಾಪಿಂಗ್ ಮತ್ತು ಔತಣಕೂಟಕ್ಕೆ ಹೋಗಲು ಅನುಮತಿ ನೀಡಲಾಗಿತ್ತು. ಆದರೆ ಬುಕ್ಕಿಂಗ್‌ ಸಂಬಂಧಿ ಬೆಳವಣಿಗೆಯ ನಂತರ ಮತ್ತೆ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೊಳಿಸಲಾಗಿದೆ’ ಪಿಸಿಬಿಯ ಅಧಿಕೃತ ಮೂಲಗಳು ತಿಳಿಸಿವೆ.

ಫೆಬ್ರುವರಿಯಲ್ಲಿ ನಡೆದ ಪಾಕಿಸ್ತಾನ ಸೂಪರ್‌ ಲೀಗ್‌ ಸರಣಿಯ ವೇಳೆ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳಾದ ಶಾರ್ಜೀಲ್‌ ಖಾನ್‌ ಹಾಗೂ ಖಲೀದ್‌ ಲತೀಫ್‌ ಅವರನ್ನು ಐದು ವರ್ಷಗಳ ಕಾಲ ಕ್ರಿಕೆಟ್‌ನಿಂದ ಪಿಸಿಬಿ ಅಮಾನತು ಮಾಡಿದೆ.

ಈ ಘಟನೆಯ ಕಾರಣದಿಂದ ಪಾಕಿಸ್ತಾನ ತಂಡ ದುಬೈನಲ್ಲಿ ನಡೆಯುವ ಸರಣಿಗಳ ಸಂದರ್ಭ ಪ್ರತೀ ಬಾರಿ ಉಳಿದುಕೊಳ್ಳುತ್ತಿದ್ದ ಹೋಟೆಲ್‌ ಅನ್ನೂ ಬದಲಿಸಲಾಗಿದೆ. ಸದ್ಯ ಪಾಕಿಸ್ತಾನ ತಂಡದ ನಾಯಕನಿಗೆ ಮೌಖಿಕ ಆಫರ್‌ ನೀಡಿದ ವ್ಯಕ್ತಿ ದುಬೈ ಮೂಲದವನೇ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.