ADVERTISEMENT

ಪಾಕ್‌ನ ಆಸಿಫ್, ಬಟ್‌ಗೆ ಭಾರಿ ಹಿನ್ನಡೆ

ಕ್ರಿಕೆಟ್: ಸ್ಪಾಟ್ ಫಿಕ್ಸಿಂಗ್ ಪ್ರಕರಣ; ಮೇಲ್ಮನವಿ ತಿರಸ್ಕರಿಸಿದ ಸಿಎಎಸ್

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST

ಕರಾಚಿ (ಪಿಟಿಐ): ಐಸಿಸಿ ಹೇರಿರುವ ನಿಷೇಧ ಶಿಕ್ಷೆಯನ್ನು ಪ್ರಶ್ನಿಸಿ ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಆಸಿಫ್ ಹಾಗೂ ಮಾಜಿ ನಾಯಕ ಸಲ್ಮಾನ್ ಬಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್   ಸ್ಪೋರ್ಟ್ಸ್ (ಸಿಎಎಸ್) ತಿರಸ್ಕರಿಸಿದೆ.

ನಿಷೇಧ ಶಿಕ್ಷೆಯಿಂದ ಪಾರಾಗಲು ಯತ್ನಿಸುತ್ತಿದ್ದ ಆಸಿಫ್ ಹಾಗೂ ಸಲ್ಮಾನ್‌ಗೆ ಈ ತೀರ್ಪು ಭಾರಿ ಆಘಾತ ಉಂಟು ಮಾಡಿದೆ. 2010 ರಲ್ಲಿ ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ `ಸ್ಪಾಟ್ ಫಿಕ್ಸಿಂಗ್' ನಡೆಸಿದ್ದಕ್ಕೆ ಈ ಆಟಗಾರರ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಭ್ರಷ್ಟಾಚಾರ ತಡೆ ಘಟಕ ನಿಷೇಧ ಶಿಕ್ಷೆ ವಿಧಿಸಿತ್ತು.
ಹಾಗಾಗಿ ಸಲ್ಮಾನ್ 10 ವರ್ಷ ಹಾಗೂ ಆಸಿಫ್ ಏಳು ವರ್ಷಗಳ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದರು. ಬಳಿಕ ಆ ಶಿಕ್ಷೆಯ ಪ್ರಮಾಣವನ್ನು ಕ್ರಮವಾಗಿ ಏಳು ಹಾಗೂ ಐದು ವರ್ಷಕ್ಕೆ ಕಡಿತಗೊಳಿಸಲಾಗಿತ್ತು. ಆ ಪಂದ್ಯದಲ್ಲಿ ಉದ್ದೇಶ ಪೂರ್ವಕವಾಗಿ ವೇಗಿ ಆಸಿಫ್ ನೋಬಾಲ್ ಹಾಕಿದ್ದರು. ಆಗ ಬಟ್ ತಂಡದ ಸಾರಥ್ಯ ವಹಿಸಿದ್ದರು. ಗೋಪ್ಯ ಕಾರ್ಯಾಚರಣೆಯಲ್ಲಿ ಬ್ರಿಟನ್‌ನ ಅಂದಿನ ಪತ್ರಿಕೆ `ನ್ಯೂಸ್ ಆಫ್   ದಿ ವರ್ಲ್ಡ್' ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ಬಯಲಿಗೆಳೆದಿತ್ತು.

ಐಸಿಸಿಯ ಈ ನಿರ್ಧಾರ ಪ್ರಶ್ನಿಸಿ ಈ ಆಟಗಾರರು ಸ್ವಿಟ್ಜರ್‌ಲೆಂಡ್‌ನ ಲೂಸಾನ್‌ನಲ್ಲಿರುವ ಸಿಎಎಸ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮತ್ತೊಬ್ಬ ಬೌಲರ್ ಮೊಹಮ್ಮದ್ ಅಮೆರ್ ಕೂಡ ಶಿಕ್ಷೆಗೆ ಗುರಿಯಾಗಿದ್ದರು. ಆದರೆ ಈ ತೀರ್ಪನ್ನು ಅವರು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರಲಿಲ್ಲ. ಆಸಿಫ್ ಮತ್ತು ಬಟ್ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬ್ರಿಟನ್‌ನಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾರೆ.

`ಐಸಿಸಿ ಹೇರಿದ್ದ ಶಿಕ್ಷೆಯ ವಿರುದ್ಧ ಆಸಿಫ್ ಹಾಗೂ ಬಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಲಾಗಿದೆ' ಎಂದು ಸಿಎಎಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮೂವರು ಸದಸ್ಯರ ಪೀಠ  ಈ ಆಟಗಾರರ ಮೇಲ್ಮನವಿಯ ವಿಚಾರಣೆ ನಡೆಸಿತ್ತು. ಕೆನಡಾದ ಗ್ರೇಮ್ ಮ್ಯೂ , ಬ್ರಿಟನ್/ಬೆಲ್ಜಿಯಂನ ರೊಮಾನೊ ಸುಬಿಯೊಟ್ಟೊ ಹಾಗೂ ಬ್ರಿಟನ್‌ನ ನ್ಯಾಯಾಧೀಶ ರಾಬರ್ಟ್ ರೀಡ್ ವಿಚಾರಣೆ ನಡೆಸಿದ್ದರು. ಬಟ್ ಹಾಗೂ ಆಸಿಫ್ ಫೆಬ್ರುವರಿಯಲ್ಲಿ ಲಾಸನ್‌ಗೆ ತೆರಳಿ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು.

ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಬಟ್ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಶಿಕ್ಷೆಯಿಂದ ತಮ್ಮನ್ನು ಪೂರ್ಣವಾಗಿ ಮುಕ್ತಗೊಳಿಸುವಂತೆ ಆಸಿಫ್ ಕೋರಿದ್ದರು. `ಆಸಿಫ್ ಕೋರಿದಂತೆ ತೀರ್ಪು ನೀಡಲು ನಮಗೆ ಅವರು ಸೂಕ್ತ ಪುರಾವೆ ಒದಗಿಸಿಲ್ಲ. ಹಾಗೇ, ಬಟ್ ನೀಡಿದ ಹೇಳಿಕೆ ನಮಗೆ ತೃಪ್ತಿ ನೀಡಲಿಲ್ಲ' ಎಂದು ಸಿಎಎಸ್ ಹೇಳಿದೆ.
ಸಿಎಎಸ್ ನೀಡಿರುವ ಈ ತೀರ್ಪನ್ನು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವ್ ರಿಚರ್ಡ್ಸನ್ ಸ್ವಾಗತಿಸಿದ್ದಾರೆ. `ಇದೊಂದು ಸ್ವಾಗತಾರ್ಹ ತೀರ್ಪು. ಕ್ರೀಡೆಯನ್ನು ಭ್ರಷ್ಟಾಚಾರದಿಂದ ಮುಕ್ತವಾಗಿಡಲು ನಾವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಗೆ ಬಲ ತುಂಬಿದೆ' ಎಂದಿದ್ದಾರೆ.

ಈ ತೀರ್ಪು ಅಸಮಾಧಾನಕ್ಕೆ ಕಾರಣವಾಗಿದೆ ಎಂದಿರುವ ಆಸಿಫ್ ಹಾಗೂ ಬಟ್ ಪರ ವಕೀಲರು, ಈ ಆಟಗಾರರನ್ನು ಶಿಕ್ಷೆ ಮುಕ್ತಗೊಳಿಸಲು ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಈ ನಡುವೆಯೂ ಬಟ್ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡುವ ಆಶಾವಾದ ವ್ಯಕ್ತಪಡಿಸಿದ್ದಾರೆ. `ಸಿಎಎಸ್ ನೀಡುವ ತೀರ್ಪಿನ ಬಗ್ಗೆ ನಾನು 50-50ರಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಈಗ ನಾನು ಶಿಕ್ಷೆಯ ಉಳಿದ ಅವಧಿಯನ್ನು ಪೂರ್ಣಗೊಳಿಸಬೇಕು. ಮತ್ತೆ ಆಡುವ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ನನಗೀಗ ಕೇವಲ 28 ವರ್ಷ ವಯಸ್ಸು. ಈಗ ಪಾಕ್ ತಂಡವನ್ನು ಮುನ್ನಡೆಸುತ್ತಿರುವ ನಾಯಕನಿಗೆ 39 ವರ್ಷ (ಮಿಸ್ಬಾ ಉಲ್ ಹಕ್) ಹಾಗೂ ಉಪನಾಯಕನಿಗೆ 33 ವರ್ಷ (ಮೊಹಮ್ಮದ್ ಹಫೀಜ್' ಎಂದಿದ್ದಾರೆ.

ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ), ತಮ್ಮ ಆಟಗಾರರು ಮೋಸದಾಟದಲ್ಲಿ ಪಾಲ್ಗೊಳ್ಳುವುದನ್ನು ತಡೆಗಟ್ಟಲು ಇನ್ನು ಮುಂದೆ ತಂಡದೊಂದಿಗೆ ಗುಪ್ತಚರ ದಳದ ಪರಿಣತರನ್ನು ಕಳುಹಿಸಲು ಯೋಚಿಸುತ್ತಿದೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದಲೇ ಈ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.