ADVERTISEMENT

ಪಾಕ್-ಆಸೀಸ್ ಹೋರಾಟ ಇಂದು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 19:30 IST
Last Updated 1 ಅಕ್ಟೋಬರ್ 2012, 19:30 IST

ಕೊಲಂಬೊ (ಪಿಟಿಐ): ಪಾಕಿಸ್ತಾನ ತಂಡಕ್ಕಿದು `ಮಾಡು ಇಲ್ಲವೇ ಮಡಿ~ ಪಂದ್ಯ. ಆಸ್ಟ್ರೇಲಿಯಾ ಎದುರಿನ ಈ ಪಂದ್ಯದಲ್ಲಿ ಉತ್ತಮ ರನ್‌ರೇಟ್‌ನಲ್ಲಿ ಗೆದ್ದರೆ ಸೆಮಿಫೈನಲ್ ತಲುಪಲೂ ಅವಕಾಶವಿದೆ. ಆದರೆ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಫಲಿತಾಂಶದ ಮೇಲೆ ಈ ತಂಡದ ಭವಿಷ್ಯ ನಿರ್ಧಾರವಾಗಲಿದೆ.

ಹಾಗಾಗಿ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ `ಸೂಪರ್ 8~ ಹಂತದ ಆಸ್ಟ್ರೇಲಿಯಾ ಹಾಗೂ ಪಾಕ್ ನಡುವಿನ ಹೋರಾಟ ಕುತೂಹಲ ಕೆರಳಿಸಿದೆ. ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಮಂಗಳವಾರ ಮಧ್ಯಾಹ್ನ ನಡೆಯಲಿರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾವೇ    ನೆಚ್ಚಿನ ತಂಡ.

ಸತತ ಎರಡು ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ತಂಡದ ಸೆಮಿಫೈನಲ್ ಪ್ರವೇಶದ ಸಾಧ್ಯತೆಗಳು ಹೆಚ್ಚಿವೆ. ಆದರೆ ಇನ್ನೊಂದು ಸ್ಥಾನಕ್ಕಾಗಿ ಭಾರತ ಹಾಗೂ ಪಾಕ್ ನಡುವೆ ಪೈಪೋಟಿ ಇದೆ. ಎರಡು ಪಂದ್ಯ ಸೋತಿರುವ ದಕ್ಷಿಣ ಆಫ್ರಿಕಾದ ಮುಂದಿನ ಹಾದಿ ತುಂಬಾ ಕಷ್ಟವಿದೆ. ಹಾಗಾಗಿ ಈಗ ಗೆಲುವಿನ ಜೊತೆ ರನ್‌ರೇಟ್ ಲೆಕ್ಕಾಚಾರವೂ ಮುಖ್ಯ.

ಆಸ್ಟ್ರೇಲಿಯಾ ತಂಡವೀಗ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಅದರಲ್ಲೂ ಶೇನ್ ವ್ಯಾಟ್ಸನ್ ಅವರು ಎದುರಾಳಿ ತಂಡಕ್ಕೆ ತಲೆನೋವಾಗಿ ಪರಿಣಮಿಸ್ದ್ದಿದಾರೆ.`ವ್ಯಾಟ್ಸನ್ ಆಹಾರದಲ್ಲಿ ವಿಷ ಹಾಕಬೇಕು~ ಎಂದು ಪಾಕ್ ತಂಡದ ಕೋಚ್ ಡೇವ್ ವಾಟ್ಮೋರ್ ತಮಾಷೆಯಾಗಿ ಹೇಳಿದ್ದು ಇದೇ ಕಾರಣಕ್ಕಾಗಿ.  ಏಕೆಂದರೆ ಆಲ್‌ರೌಂಡರ್ ವ್ಯಾಟ್ಸನ್ ಈ ಟೂರ್ನಿಯಲ್ಲಿ ಇದುವರೆಗೆ ಬ್ಯಾಟಿಂಗ್‌ನಲ್ಲಿ 234 ರನ್ ಹಾಗೂ ಬೌಲಿಂಗ್‌ನಲ್ಲಿ 10 ವಿಕೆಟ್ ಕಬಳಿಸಿದ್ದಾರೆ. ಜೊತೆಗೆ ನಾಲ್ಕು ಬಾರಿ `ಪಂದ್ಯ ಶ್ರೇಷ್ಠ~ ಗೌರವ ಪಡೆದಿದ್ದಾರೆ.

ಹಾಗಾಗಿ ಪಾಕ್‌ಗೆ ಭಾರಿ ಸವಾಲು ಎದುರಿದೆ. ಈ ತಂಡದ ಬೌಲಿಂಗ್ ಚೆನ್ನಾಗಿಯೇ ಇದೆ. ಆದರೆ ಬ್ಯಾಟ್ಸ್‌ಮನ್‌ಗಳು ಸ್ಥಿರ ಆಟ ತೋರುವಲ್ಲಿ ಎಡವುತ್ತಿದ್ದಾರೆ. ಇದು ನಾಯಕ ಮೊಹಮ್ಮದ್ ಹಫೀಜ್ ಅವರ ಚಿಂತೆಗೆ ಕಾರಣವಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ: 3.30ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.