ADVERTISEMENT

ಪಾಕ್ ದೇಸಿ ಕ್ರಿಕೆಟ್: ನೂತನ ಗುತ್ತಿಗೆ ಪದ್ಧತಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ಕರಾಚಿ (ಪಿಟಿಐ): ಆಟಗಾರರ ಆತ್ಮ ವಿಶ್ವಾಸವನ್ನು ಎದೆಗುಂದಿಸಿರುವ ಫಿಕ್ಸಿಂಗ್‌ಗೆ ಅಂತ್ಯ ಕಾಣಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ದೇಶಿಯ ಕ್ರಿಕೆಟ್‌ನಲ್ಲಿ ನೂತನ ಗುತ್ತಿಗೆ ಪದ್ಧತಿಯನ್ನು ಜಾರಿಗೆ ತಂದಿದೆ.

ದೇಶಿಯ ಪಂದ್ಯಗಳನ್ನು ನಡೆಸುವ ವೇಳೆ 20 ಆಟಗಾರರನ್ನು ಒಳಗೊಂಡ ತಂಡವನ್ನು ಆರು ತಿಂಗಳ ಅವಧಿಗೆ ಗುತ್ತಿಗೆ ಪಡೆಯುವುದು. ಶ್ರೇಣಿಕೃತ ವ್ಯವಸ್ಥೆಯ ಆಧಾರದ ಮೇಲೆ  ಹಣ ನೀಡುವ ಪದ್ಧತಿಯನ್ನು ಪಿಸಿಬಿ ಕಾರ್ಯರೂಪಕ್ಕೆ ತಂದಿದೆ ಎಂದು ಹೈದರಾಬಾದ್ ತಂಡದ ಕೋಚ್ ತೌಸೀಫ್ ಅಹ್ಮದ್ ಹೇಳಿದ್ದಾರೆ.

ಪ್ರಾದೇಶಿಕ ವಲಯದಲ್ಲಿ ಅಗ್ರಸ್ಥಾನದಲ್ಲಿರುವ ತಂಡದ ಐದು ಆಟಗಾರರಿಗೆ ಕ್ರಿಕೆಟ್ ಮಂಡಳಿ ಪ್ರತಿ ತಿಂಗಳು 20,000 ರೂಪಾಯಿ ಪಾವತಿಸುತ್ತದೆ. ದ್ವಿತೀಯ ಸ್ಥಾನದ ತಂಡದಲ್ಲಿರುವ ಹತ್ತು ಆಟಗಾರರಿಗೆ  15,000 ಹಾಗೂ ಮೂರನೆ ಸ್ಥಾನ ಹೊಂದಿರುವ ತಂಡದ ಐದು ಆಟಗಾರರಿಗೆ  10,000 ರೂ. ನೀಡಲಾಗುತ್ತದೆ ಎಂದು ಅವರು ವಿವರಿಸಿದರು. ಈ ಪದ್ಧತಿ ಅಕ್ಟೋಬರ್ 6ರಿಂದ ಜಾರಿಗೆ ಬಂದಿದೆ.

ADVERTISEMENT

ಪಿಸಿಬಿ ಹೊಸ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಆರ್ಥಿಕವಾಗಿ ಹಿಂದುಳಿದ ಆಟಗಾರರನ್ನು ಪ್ರೇರೇಪಿಸಲು ಇದು ಉತ್ತಮ ಯೋಜನೆ. ದೇಶಿಯ ಕ್ರಿಕೆಟ್‌ನಲ್ಲಿ ಪ್ರೋತ್ಸಾಹ ಸಿಕ್ಕರೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಸಹಾಯಕವಾಗಬಹುದು ಎಂದು ಅವರು ಹೇಳಿದರು.

ಪಿಸಿಬಿ ಪ್ರಾದೇಶಿಕ ವಲಯದ ತಂಡಗಳನ್ನು ಆಯ್ಕೆ ಮಾಡುತ್ತಿದೆ. ಈ ಪದ್ಧತಿಯ ಮೂಲಕ ಭ್ರಷ್ಟಾಚಾರದ ಬಗ್ಗೆಯು ಆಟಗಾರರಲ್ಲಿ ತಿಳಿವಳಿಗೆ ಮೂಡಿಸಲು ಸಾಧ್ಯವಾಗುತ್ತದೆ. ಆಟಗಾರರಿಗೆ ಭದ್ರತೆ  ಒದಗಿಸಿದಂತಾಗುತ್ತದೆ ಎಂದು ಅಹ್ಮದ್ ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.