ADVERTISEMENT

ಪಿ.ಎನ್.ಬಿ. ಪರಿಬಾಸ್ ಟೆನಿಸ್ ಟೂರ್ನಿ: ಮೂರನೇ ಸುತ್ತಿಗೆ ಸೋಮ್

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2011, 16:15 IST
Last Updated 13 ಮಾರ್ಚ್ 2011, 16:15 IST

ಇಂಡಿಯನ್ ವೆಲ್ಸ್, ಕ್ಯಾಲಿಫೋರ್ನಿಯಾ (ಐಎಎನ್‌ಎಸ್): ಭಾರತದ ಅಗ್ರ ಶ್ರೇಯಾಂಕದ ಆಟಗಾರ ಸೋಮ್‌ದೇವ್ ದೇವವರ್ಮನ್ ಇಲ್ಲಿ ನಡೆಯುತ್ತಿರುವ ಪಿ.ಎನ್.ಬಿ. ಪರಿಬಾಸ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಎರಡನೇ ಸುತ್ತಿನ ಪಂದ್ಯದಲ್ಲಿ ಸೋಮ್‌ದೇವ್ 7-5, 6-0ನೇರ ಸೆಟ್‌ಗಳಿಂದ 19ನೇ ಶ್ರೇಯಾಂಕದ ಮಾರ್ಕೊಸ್ ಬಾಗ್ಟಾಟಿಸ್ ಅವರನ್ನು ಮಣಿಸಿ ಮೂರನೇ ಸುತ್ತು ಪ್ರವೇಶಿಸಿದರು.

ಮೊದಲ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಎದುರಿಸಿದ ಸೋಮ್ ಕೆಲ ಉತ್ತಮ ಸರ್ವ್ ಹಾಗೂ ಸ್ಟ್ರೋಕ್‌ಗಳ ಮೂಲಕ ಮುನ್ನಡೆ ಪಡೆದರು. ಎರಡನೇ ಸೆಟ್‌ನಲ್ಲಿ ಚುರುಕಿನ ಆಟವಾಡಿದ ಸೋಮ್ ಸುಲಭ ಗೆಲುವನ್ನು ತಮ್ಮದಾಗಿಸಿಕೊಂಡರು.

ಒಂದು ಹಂತದಲ್ಲಿ ಭಾರತದ ಅಗ್ರ ಶ್ರೇಯಾಂಕದ ಆಟಗಾರ ಸೋಮ್‌ದೇವ್ ದೇವವರ್ಮನ್‌ಗೆ ಪ್ರಬಲ ಪ್ರತಿರೋಧ ತೋರಿದ  ಮಾರ್ಕೊಸ್ ಮೊದಲ ಸೆಟ್‌ನಲ್ಲಿ ಮುನ್ನಡೆ ಸಾಧಿಸುವ ಹಂತದಲ್ಲಿದ್ದರು. ಆಗ ಜಾಣ್ಮೆಯ ಆಟ ಪ್ರದರ್ಶಿಸಿದ ಸೋಮ್ ಕರಾರುವಕ್ಕಾದ ಹೊಡೆತಗಳ ಮೂಲಕ ಎದುರಾಳಿ ಆಟಗಾರನನ್ನು ಕಟ್ಟಿ ಹಾಕಿದರು.

ಮೊದಲ ಸುತ್ತಿನ ಪಂದ್ಯದಲ್ಲಿ ಸೋಮ್ 6-2, 6-3ರಲ್ಲಿ ಅಡ್ರಿಯಾನ್ ಮನ್ನರೆನೊ ಅವರನ್ನು  ಮಣಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದರು. ಮೊದಲ ಸುತ್ತಿನಲ್ಲಿ ಅವರಿಗೆ ಪ್ರಬಲ ಪೈಪೋಟಿ ಎದುರಾಗಿರಲಿಲ್ಲ. ಆದರೆ ಎರಡನೇ ಸೆಟ್‌ನಲ್ಲಿ ಸುಲಭ ಗೆಲುವನ್ನು ತಮ್ಮದಾಗಿಸಿಕೊಂಡರು.

ಸೋಮ್ ಮೂರನೇ ಸುತ್ತಿನಲ್ಲಿ ಎಕ್ಸವೇರ್ ಮಿಲಿಸ್ಸೆ ಅವರ ಸವಾಲನ್ನು ಎದುರಿಸಲಿದ್ದಾರೆ. ಎಕ್ಸವೇರ್ 7-6, 7-5ರಲ್ಲಿ 15ನೇ ಶ್ರೇಯಾಂಕಿತ ವಿಲ್ಪ್ರೀಡ್ ಸೋಂಗಾ ಅವರನ್ನು ಮಣಿಸಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.