ADVERTISEMENT

ಪುಟಿದೆದ್ದು ನಿಲ್ಲುವ ವಿಶ್ವಾಸದಲ್ಲಿ ನೈಟ್ ರೈಡರ್ಸ್, ಡೇರ್ ಡೆವಿಲ್ಸ್

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST
ಪುಟಿದೆದ್ದು ನಿಲ್ಲುವ ವಿಶ್ವಾಸದಲ್ಲಿ ನೈಟ್ ರೈಡರ್ಸ್, ಡೇರ್ ಡೆವಿಲ್ಸ್
ಪುಟಿದೆದ್ದು ನಿಲ್ಲುವ ವಿಶ್ವಾಸದಲ್ಲಿ ನೈಟ್ ರೈಡರ್ಸ್, ಡೇರ್ ಡೆವಿಲ್ಸ್   

ಕೋಲ್ಕತ್ತ (ಪಿಟಿಐ): ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ತಂಡಗಳು ಕಳೆದ ನಾಲ್ಕು ಐಪಿಎಲ್ ಟೂರ್ನಿಗಳಲ್ಲಿ ಹೆಚ್ಚಿನ ಸಾಧನೆ ಏನೂ ಮಾಡಿಲ್ಲ. ಪ್ರಮುಖ ಆಟಗಾರರನ್ನು ಒಳಗೊಂಡಿದ್ದರೂ ಈ ತಂಡಗಳಿಗೆ ಪ್ರಶಸ್ತಿ ಗೆಲ್ಲುವ ಅದೃಷ್ಟ ಕೈಗೂಡಿ ಬಂದಿಲ್ಲ.

ಇದೀಗ ಹಳೆಯ ಕಹಿ ನೆನಪನ್ನು ಮರೆತು ಐದನೇ ಋತುವಿನ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲು ಈ ತಂಡಗಳು ಸಜ್ಜಾಗಿವೆ. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯುವ ಪಂದ್ಯದಲ್ಲಿ ನೈಟ್ ರೈಡರ್ಸ್ ಮತ್ತು ಡೇರ್‌ಡೆವಿಲ್ಸ್ ಎದುರಾಗಲಿವೆ. ಭಾರತ ತಂಡದ ಇಬ್ಬರು ಆರಂಭಿಕ ಬ್ಯಾಟ್ಸ್‌ಮನ್‌ಗಳು ಮುನ್ನಡೆಸುವ ತಂಡಗಳ ನಡುವಿನ ಹಣಾಹಣಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಗೌತಮ್ ಗಂಭೀರ್ ನೇತೃತ್ವದ ನೈಟ್ ರೈಡರ್ಸ್ ಮತ್ತು ವೀರೇಂದ್ರ ಸೆಹ್ವಾಗ್ ಮುನ್ನಡೆಸುವ ಡೇರ್‌ಡೆವಿಲ್ಸ್ ಈ ಬಾರಿಯ ಟೂರ್ನಿಯಲ್ಲಿ ಗೆಲುವನ್ನು `ಹವ್ಯಾಸ~ವನ್ನಾಗಿಕೊಳ್ಳಬೇಕು. ಹಾಗಾದಲ್ಲಿ ಮಾತ್ರ ಬಲಿಷ್ಠ ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂ ಜರ್ಸ್ ತಂಡಗಳಿಗೆ ಸವಾಲಾಗಿ ಪರಿಣಮಿಸಲು ಸಾಧ್ಯ.

ಗಂಭೀರ್‌ಗೆ ಈ ಟೂರ್ನಿ ವೈಯಕ್ತಿಕವಾಗಿಯೂ ಮಹತ್ವದ್ದೆನಿಸಿದೆ. ಭಾರತ ತಂಡದ ಉಪನಾಯಕನ ಸ್ಥಾನ ಕಳೆದುಕೊಂಡಿರುವ ಅವರು ಟೀಕಾಕಾರರ ಬಾಯಿ ಮುಚ್ಚಿಸಬೇಕಿದೆ. ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಕೊಡುಗೆ ನೀಡುವ ಜೊತೆಗೆ ತನ್ನಲ್ಲಿರುವ ನಾಯಕತ್ವದ ಗುಣಗಳು ಏನೆಂಬುದನ್ನು ತೋರಿಸಿಕೊಡುವ ಅನಿವಾರ್ಯತೆ ಗಂಭೀರ್ ಮುಂದಿದೆ.

ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಮ್ ಮತ್ತು ವೆಸ್ಟ್ ಇಂಡೀಸ್‌ನ ಆಫ್ ಸ್ಪಿನ್ನರ್ ಸುನಿಲ್ ನರೇನ್ ಈ ಬಾರಿ ಕೋಲ್ಕತ್ತ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಸ್ಪಿನ್‌ಗೆ ನೆರವು ನೀಡುವ ಭಾರತದ ಪಿಚ್‌ಗಳಲ್ಲಿ ನರೇನ್ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಯಿದೆ.

ಮೆಕ್ಲಮ್ ಮತ್ತು ಜಾಕ್ ಕಾಲಿಸ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯೇ ಅಧಿಕ. ಹಾಗಾದಲ್ಲಿ ಗಂಭೀರ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವರು. ಮಧ್ಯಮ ಕ್ರಮಾಂಕದಲ್ಲಿ ಮನೋಜ್ ತಿವಾರಿ, ಯೂಸುಫ್ ಪಠಾಣ್ ಮತ್ತು ರಜತ್ ಭಾಟಿಯಾ ತಂಡದ ಇನಿಂಗ್ಸ್‌ಗೆ ಬಲ ನೀಡಲಿದ್ದಾರೆ. ಈ ತಂಡದ ಬೌಲಿಂಗ್ ವಿಭಾಗ ಕೂಡಾ ಸಮತೋಲನದಿಂದ ಕೂಡಿದೆ.

ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ತಂಡದಲ್ಲಿದ್ದಾರೆ. ಹೊಸ ಕೋಚ್ ಟ್ರೆವರ್ ಬೇಲಿಸ್ ಮಾರ್ಗದರ್ಶನದಲ್ಲಿ ಪಳಗಿರುವ ನೈಟ್ ರೈಡರ್ಸ್ ಮೊದಲ ಪಂದ್ಯದಲ್ಲಿ ಗೆಲುವನ್ನು ಮಾತ್ರ ಎದುರು ನೋಡುತ್ತಿದೆ.
ಮತ್ತೊಂದೆಡೆ ಡೇರ್‌ಡೆವಿಲ್ಸ್ ತಂಡ ಪುಟಿದೆದ್ದು ನಿಲ್ಲಲು ಶಪಥ ಮಾಡಿದೆ. ಕಳೆದ ವರ್ಷ ಈ ತಂಡ ಕೇವಲ ನಾಲ್ಕು ಗೆಲುವುಗಳೊಂದಿಗೆ ಕೊನೆಯ ಸ್ಥಾನ ಪಡೆದಿತ್ತು. ಅಂತಹ ಮುಖಭಂಗ ಎದುರಾಗದಂತೆ ಎಚ್ಚರಿಕೆಯ ಆಟವಾಡುವುದು ಖಚಿತ.

ಆರಂಭದ ಕೆಲವು ಪಂದ್ಯಗಳಲ್ಲಿ ಪ್ರಮುಖ ಆಟಗಾರರಾದ ಮಾಹೇಲ ಜಯವರ್ಧನೆ, ಕೆವಿನ್ ಪೀಟರ್‌ಸನ್ ಮತ್ತು ಡೇವಿಡ್ ವಾರ್ನರ್ ಆಡುತ್ತಿಲ್ಲ. ಇದು ತಂಡಕ್ಕೆ ಅಲ್ಪ ಹಿನ್ನಡೆ ಎನಿಸಿದೆ. ಈ ಆಟಗಾರರು ತಮ್ಮ ತಮ್ಮ ದೇಶದ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ನ್ಯೂಜಿಲೆಂಡ್‌ನ ರಾಸ್ ಟೇಲರ್ ಕೂಡಾ ಆಡುತ್ತಿಲ್ಲ. ಗಾಯದ ಸಮಸ್ಯೆಯ ಕಾರಣ ಅವರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ಕಾರಣ ನಾಯಕ ಸೆಹ್ವಾಗ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ತಂಡಗಳು
ಕೋಲ್ಕತ್ತ ನೈಟ್ ರೈಡರ್ಸ್: ಗೌತಮ್ ಗಂಭೀರ್ (ನಾಯಕ), ಮನೋಜ್ ತಿವಾರಿ, ಲಕ್ಷ್ಮೀ ರತನ್ ಶುಕ್ಲಾ, ಯೂಸುಫ್ ಪಠಾಣ್, ರಜತ್ ಭಾಟಿಯಾ, ಚಿರಾಗ್ ಜಾನಿ, ದೇವವ್ರತ ದಾಸ್, ಇಕ್ಬಾಲ್ ಅಬ್ದುಲ್ಲಾ, ಇರೇಶ್ ಸಕ್ಸೇನಾ, ಜೈದೇವ್ ಉನದ್ಕಟ್, ಲಕ್ಷ್ಮೀಪತಿ ಬಾಲಾಜಿ, ಮನ್ವಿಂದರ್ ಬಿಸ್ಲಾ, ಪ್ರದೀಪ್     ಸಂಗ್ವಾನ್, ಸಂಜು ಸ್ಯಾಮ್ಸನ್, ಸರಬ್ಜಿತ್ ಸಿಂಗ್ ಲಡ್ಡಾ, ಮೊಹಮ್ಮದ್ ಶಮೀ ಅಹ್ಮದ್, ಬ್ರಾಡ್    ಹಡಿನ್, ಜಾಕ್ ಕಾಲಿಸ್, ಬ್ರೆಂಡನ್ ಮೆಕ್ಲಮ್, ಎಯೊನ್ ಮಾರ್ಗನ್, ರ‌್ಯಾನ್ ಟೆನ್ ಡಾಶೆಟ್, ಶಕೀಬ್ ಅಲ್ ಹಸನ್, ಸುನಿಲ್ ನರೇನ್, ಮರ್ಚಂಟ್ ಡಿ ಲಾಂಜ್

ಡೆಲ್ಲಿ ಡೇರ್‌ಡೆವಿಲ್ಸ್: ವೀರೇಂದ್ರ ಸೆಹ್ವಾಗ್ (ನಾಯಕ), ಅಜಿತ್ ಅಗರ್‌ಕರ್, ಇರ್ಫಾನ್ ಪಠಾಣ್, ಉಮೇಶ್ ಯಾದವ್, ಪುನೀತ್ ಬಿಸ್ಟ್, ರಾಬಿನ್ ಬಿಸ್ಟ್, ನಮನ್ ಓಜಾ, ಶಹಬಾಜ್ ನದೀಮ್, ವೇಣುಗೋಪಾಲ್ ರಾವ್, ವಿಕಾಸ್ ಮಿಶ್ರಾ, ಯೋಗೇಶ್ ನಗರ್, ಸನ್ನಿ ಗುಪ್ತಾ, ತೇಜಸ್ವಿ ಯಾದವ್, ಆವಿಷ್ಕರ್ ಸಾಳ್ವಿ, ವರುಣ್ ಆ್ಯರನ್, ಕುಲ್‌ದೀಪ್ ರಾವಲ್, ಮನ್‌ಪ್ರೀತ್ ಜುನೇಜಾ, ಪವನ್ ನೇಗಿ, ಪ್ರಶಾಂತ್ ನಾಯ್ಕ, ಆ್ಯರನ್ ಫಿಂಚ್, ಆಂಡ್ರೆ ರಸೆಲ್, ಡಗ್ ಬ್ರೇಸ್‌ವೆಲ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ನ್ ಮಾರ್ಕೆಲ್, ರೆಲೋಫ್ ವಾನ್ ಡೆರ್ ಮೆರ್ವ್.
ಪಂದ್ಯದ ಆರಂಭ: ರಾತ್ರಿ 8.00ಕ್ಕೆ ನೇರ ಪ್ರಸಾರ: ಸೆಟ್ ಮ್ಯಾಕ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.