ADVERTISEMENT

ಪುರುಷರ ವಿಭಾಗದ ಹಾಕಿ: ವೇಲ್ಸ್‌ಗೆ ಸೋಲುಣಿಸಿದ ಭಾರತ

ನಿರ್ಣಾಯಕ ಹಂತದಲ್ಲಿ ಗೋಲು ಗಳಿಸಿ ಮಿಂಚಿದ ಸುನಿಲ್‌

ಪಿಟಿಐ
Published 8 ಏಪ್ರಿಲ್ 2018, 20:30 IST
Last Updated 8 ಏಪ್ರಿಲ್ 2018, 20:30 IST
ಗೋಲು ಗಳಿಸಿದ ಭಾರತ ತಂಡದ ಆಟಗಾರರ ಸಂಭ್ರಮ
ಗೋಲು ಗಳಿಸಿದ ಭಾರತ ತಂಡದ ಆಟಗಾರರ ಸಂಭ್ರಮ   

ಗೋಲ್ಡ್ ಕೋಸ್ಟ್‌: ಅನುಭವಿ ಆಟಗಾರ, ಕರ್ನಾಟಕದ ಎಸ್‌.ವಿ.ಸುನಿಲ್‌ ನಿರ್ಣಾಯಕ ಹಂತದಲ್ಲಿ ಮಿಂಚಿದರು. 59ನೇ ನಿಮಿಷದಲ್ಲಿ ಅವರು ಗಳಿಸಿದ ಗೋಲಿನ ಪರಿಣಾಮ ಭಾರತ ತಂಡ ಪುರುಷರ ಹಾಕಿಯಲ್ಲಿ ವೇಲ್ಸ್ ವಿರುದ್ಧ ರೋಚಕ ಜಯ ಗಳಿಸಿತು. ಭಾನುವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ 4–3ರಿಂದ ಗೆದ್ದಿತು.

ರೋಚಕ ಹಣಾಹಣಿಯಲ್ಲಿ ಭಾರತಕ್ಕೆ ಭಾರಿ ಪೈ‍ಪೋಟಿ ನೀಡಿದ ವೇಲ್ಸ್ ತಂಡದ ಗರೆತ್ ಫರ್ಲಾಂಗ್ ಅವರ ಹ್ಯಾಟ್ರಿಕ್ ಬಲದಿಂದ 58ನೇ ನಿಮಿಷದಲ್ಲಿ 3–3ರ ಸಮಬಲ ಸಾಧಿಸಿತ್ತು. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದ ಕೊನೆಯ ನಿಮಿಷದಲ್ಲಿ ಗೋಲು ಬಿಟ್ಟುಕೊಟ್ಟು ಸಮಬಲ ಸಾಧಿಸಿದ್ದ ಭಾರತ ವೇಲ್ಸ್ ವಿರುದ್ಧವೂ ನಿರಾಸೆ ಅನುಭವಿಸುವತ್ತ ಸಾಗಿತ್ತು. ಆದರೆ ಸುನಿಲ್‌ ತಂಡವನ್ನು ಗೆಲುವಿನ ದಡ ಸೇರಿಸಿದರು. ರೂಪಿಂದರ್ ಪಾಲ್‌ ಸಿಂಗ್ ಅವರ ಡ್ರ್ಯಾಗ್ ಫ್ಲಿಕ್‌ ಅನ್ನು ನಿಯಂತ್ರಿಸಿ ಮಿಂಚಿನ ವೇಗದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಅವರು ಭಾರತದ ಸಂಭ್ರಮಕ್ಕೆ ಕಾರಣರಾದರು.

16ನೇ ನಿಮಿಷದಲ್ಲಿ ಗೋಲು ಗಳಿಸಿ ದಿಲ್‌ಪ್ರೀತ್ ಸಿಂಗ್ ಭಾರತಕ್ಕೆ ಮುನ್ನಡೆ ಗಳಿಸಿಕೊಟ್ಟರು. ಆದರೆ ಮರು ನಿಮಿಷದಲ್ಲಿ ಗರೆತ್ ಫರ್ಲಾಂಗ್ ಚೆಂಡನ್ನು ಗುರಿ ಸೇರಿಸಿ ಸಮಬಲ ಸಾಧಿಸಿತು. 28ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್‌ ಭಾರತಕ್ಕೆ ಮುನ್ನಡೆ ಗಳಿಸಿಕೊಟ್ಟರು. ಆದರೆ ಗರೆತ್‌ 45ನೇ ನಿಮಿಷದಲ್ಲಿ ತಿರುಗೇಟು ನೀಡಿದರು. 57ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಮತ್ತೆ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 58ನೇ ನಿಮಿಷದಲ್ಲಿ ಗರೆತ್‌ ಹ್ಯಾಟ್ರಿಕ್ ಪೂರೈಸಿ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದರು.

ADVERTISEMENT

’ಪಂದ್ಯ ಇಷ್ಟು ರೋಚಕವಾಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಗೆಲುವು ಸಾಧಿಸಿದರೂ ಕೆಲವು ಉತ್ತಮ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಲು ಆಗದೇ ಇದ್ದದ್ದು ಮತ್ತು ಎದುರಾಳಿಗಳಿಗೆ ಪೆನಾಲ್ಟಿ ಬಿಟ್ಟುಕೊಟ್ಟದ್ದು ನಮ್ಮ ವೈಫಲ್ಯ. ಕೊನೆಯಲ್ಲಿ ಸುನಿಲ್ ತಂಡದ ಕೈ ಹಿಡಿದರು’ ಎಂದು ಭಾರತ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಹೇಳಿದರು.

ಆಕ್ರಮಣಕಾರಿ ಆಟ: ಭಾರತ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿತ್ತು. ಆಕಾಶದೀಪ್‌ ಸಿಂಗ್ ಮತ್ತು ಗುರ್ಜಂತ್ ಸಿಂಗ್ ಅವರ ಅಮೋಘ ಆಟಕ್ಕೆ ಭಾರತ ಆರಂಭದಲ್ಲೇ ಪೆನಾಲ್ಟಿ ಕಾರ್ನರ್‌ ಅವಕಾಶ ಗಳಿಸಿತು. ಆದರೆ ಹರ್ಮನ್ ಪ್ರೀತ್ ಸಿಂಗ್ ಅವರಿಗೆ ಯಶಸ್ಸು ಸಿಗಲಿಲ್ಲ.

ದ್ವಿತೀಯಾರ್ಧದಲ್ಲಿ ಸುನಿಲ್ ಕುಮಾರ್ ಮಿಂಚಿನ ಆಟದ ಮೂಲಕ ಗಮನ ಸೆಳೆದರು. ಅವರ ಸುಂದರ ಪಾಸ್‌ನಿಂದ ದಿಲ್‌ಪ್ರೀತ್ ಗೋಲು ಗಳಿಸಿ ತಂಡದ ಮುನ್ನಡೆಗೆ ಕಾರಣರಾದರು. ಎರಡನೇ ಗೋಲಿನಲ್ಲೂ ಸುನಿಲ್ ಮಹತ್ವದ ಪಾತ್ರ ವಹಸಿದರು. ಕೆಲವು ಅವಕಾಶಗಳನ್ನು ವೇಲ್ಸ್ ಗೋಲ್ ಕೀಪರ್‌ ವಿಫಲಗೊಳಿಸಿದರು.

ಗುಂಪು ಹಂತದಲ್ಲಿ ಭಾರತದ ಕೊನೆಯ ಪಂದ್ಯ ಮಂಗಳವಾರ ನಡೆಯಲಿದ್ದು ಮಲೇಷ್ಯಾವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.