ADVERTISEMENT

ಪೂವಮ್ಮಗೆ ಬೆಳ್ಳಿ, ಪ್ರಜ್ಞಾಗೆ ಕಂಚು

ಫೆಡರೇಷನ್ ಕಪ್ ಅಥ್ಲೆಟಿಕ್ಸ್‌

ಪಿಟಿಐ
Published 4 ಜೂನ್ 2017, 19:30 IST
Last Updated 4 ಜೂನ್ 2017, 19:30 IST
ಎಂ.ಆರ್. ಪೂವಮ್ಮ
ಎಂ.ಆರ್. ಪೂವಮ್ಮ   

ಪಟಿಯಾಲ: ಕರ್ನಾಟಕದ ಎಮ್‌.ಆರ್ ಪೂವಮ್ಮ ಹಾಗೂ ಪ್ರಜ್ಞಾ ಎಸ್. ಪ್ರಕಾಶ್ ಭಾನುವಾರ ಇಲ್ಲಿ ಮುಕ್ತಾಯಗೊಂಡ 21ನೇ ಫೆಡರೇಷನ್ ಕಪ್‌ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಎತ್ತಿಹಿಡಿದಿದ್ದಾರೆ.

ಮಹಿಳೆಯರ 400ಮೀ ಓಟ ವಿಭಾಗದಲ್ಲಿ ರಾಜ್ಯದ ಆಟಗಾರ್ತಿ ಪೂವಮ್ಮ ಎರಡನೇಯವರಾಗಿ ಗುರಿ ಮುಟ್ಟಿದರು. ರಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಹರಿಯಾಣದ ನಿರ್ಮಲಾ ದೇವಿ ಈ ವಿಭಾಗದಲ್ಲಿ ಚಿನ್ನ ಗೆದ್ದರು. ನಿಗದಿತ ದೂರವನ್ನು ಅವರು 51.28 ಸೆಕೆಂಡುಗಳಲ್ಲಿ ಕ್ರಮಿಸಿದರು

ನಿರ್ಮಲಾ ತಮ್ಮ ಹಳೆಯ ದಾಖಲೆಯನ್ನು ಮುರಿದು ನೂತನ ಕೂಟ ದಾಖಲೆ ನಿರ್ಮಿಸಿದರು. ಅಲ್ಲದೇ ಆಗಸ್ಟ್‌ ತಿಂಗಳಿನಲ್ಲಿ ಲಂಡನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದರು.

ADVERTISEMENT

ಈ ವಿಭಾಗದ ವಿಶ್ವ ಚಾಂಪಿಯನ್‌ಷಿಪ್ ಅರ್ಹತಾ ಸಮಯ 52.10 ಸೆಕೆಂಡ್ ಆಗಿದೆ.  ‘ಇಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸುವ ನಿರೀಕ್ಷೆ ಇತ್ತು. ಇದರಿಂದಾಗಿ ಮುಂದಿನ ಟೂರ್ನಿಗಳಲ್ಲೂ ಉತ್ತಮ ಸಾಮರ್ಥ್ಯ ತೋರುವ ಭರವಸೆ ಹೆಚ್ಚಿದೆ’ ಎಂದು ನಿರ್ಮಲಾ ಹೇಳಿದ್ದಾರೆ.

ರಾಜ್ಯದ ಪೂವಮ್ಮ 52.70ಸೆಕೆಂಡುಗಳಲ್ಲಿ ಗುರಿ ಸೇರಿದರು. ಈ ವಿಭಾಗದ ಕಂಚು ಪಶ್ಚಿಮ ಬಂಗಾಳದ ದೇವಶ್ರೀ ಮಜುಂದಾರ್ (53.59) ಅವರಿಗೆ ಸೇರಿತು. ಮಹಿಳೆಯರ 100ಮೀ ಹರ್ಡಲ್ಸ್‌ ವಿಭಾಗದಲ್ಲಿ ರಾಜ್ಯದ ಪ್ರಜ್ಞಾ ಪ್ರಕಾಶ್ (14;03ಸೆ) ಕಂಚು ಜಯಿಸಿದರು.

ಈ ವಿಭಾಗದಲ್ಲಿ ಆಂಧ್ರಪ್ರದೇಶದ ನಯನಾ ಜೇಮ್ಸ್‌ (13.96ಸೆ) ಚಿನ್ನ ಗೆದ್ದರೆ, ಮಹಾರಾಷ್ಟ್ರದ ಅಂಕಿತಾ ಗೋ ಸ್ವಾಮಿ (14.00) ಬೆಳ್ಳಿಗೆ ಕೊರಳೊಡ್ಡಿದರು.

ಅನುರಾಣಿ ದಾಖಲೆ: ಜಾವೆಲಿನ್ ಥ್ರೋ ವಿಭಾಗದಲ್ಲಿ ಉತ್ತರಪ್ರದೇಶದ ಅನು ರಾಣಿ ತಮ್ಮದೇ ಹೆಸರಿನಲ್ಲಿ ಇದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮ ಪಡಿಸಿಕೊಂಡರು. ಜತೆಗೆ ವಿಶ್ವ ಚಾಂಪಿ ಯನ್‌ಷಿಪ್‌ಗೆ ಅರ್ಹತೆ ಪಡೆದು ಗಮನ ಸೆಳೆದರು.

ಇಲ್ಲಿ 61.86ಮೀ ಜಾವೆಲಿನ್‌ ಎಸೆದ ರಾಣಿ ಚಿನ್ನ ಗೆದ್ದುಕೊಂಡರು. ಎನ್‌ಐಎಸ್ ಪಟಿಯಾಲದಲ್ಲಿ ನಡೆದ ಹಿಂದಿನ ಟೂರ್ನಿಯಲ್ಲಿ ಅವರು 60.01ಮೀಟರ್‌ ಎಸೆಯುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.

ಈ ವಿಭಾಗದಲ್ಲಿ ಹರಿಯಾಣದ ರಾಣಿ ಸಿಂಗ್‌ (61.86) ಬೆಳ್ಳಿ ಹಾಗೂ ಉತ್ತರ ಪ್ರದೇಶದ ಸುಮನ್ ದೇವಿ (55.03) ಕಂಚು ಗೆದ್ದರು.  ಜಿ. ಲಕ್ಷ್ಮಣನ್‌ (ಕಾಲ: 29;23.46) ಪುರುಷರ 10,000 ಮೀಟರ್‌ ವಿಭಾಗದಲ್ಲಿ ಚಿನ್ನ ಗೆದ್ದರು.

ಕೇರಳದ ಗೋಪಿ ತೊಂಗಕಲ್‌ (29;55.67) ಬೆಳ್ಳಿ ಹಾಗೂ ಮಹಾ  ರಾಷ್ಟ್ರದ ಕಾಳಿದಾಸ್ ಹಿರಾವೆ (29;57.94) ಕಂಚು ಎತ್ತಿಹಿಡಿದರು.  ಎಲ್‌. ಸುರಿಯಾ ಮಹಿಳೆಯರ 10,000 ಮೀ ವಿಭಾಗದಲ್ಲಿ 33ನಿ.12.67  ಸೆಕೆಂಡುಗಳಲ್ಲಿ ಗುರಿ ಸೇರುವ ಮೂಲಕ ಚಿನ್ನ ಜಯಿಸಿದರು.

ಈ ವಿಭಾಗದಲ್ಲಿ ಮಹಾರಾಷ್ಟ್ರದ ಸಂಜೀವಿನಿ ಜಾಧವ್ ಹಾಗೂ ದೆಹಲಿಯ ಮೀನು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಕ್ಕೆ ಕೊರಳೊಡ್ಡಿದರು. 400ಮೀ ಪುರುಷರ ವಿಭಾಗದಲ್ಲಿ ದೆಹಲಿಯ ಅಮೋಜ್ ಜಾಕೋಬ್‌ (46.26ಸೆ) ಚಿನ್ನ ಗೆದ್ದರು.

ಈ ವಿಭಾಗದಲ್ಲಿ ತಮಿಳುನಾಡಿನ ಅರೋಕಿಯಾ ರಾಜೀವ್ (46.64ಸೆ) ಮತ್ತು ಕೇರಳದ ಸಚಿನ್ ರೋಬಿ  (46.87ಸೆ)ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.