ADVERTISEMENT

ಪೇಸ್‌–ಸ್ಟೆಪನೆಕ್‌ಗೆ ಜಯ

ಟೆನಿಸ್‌: ರಫೆಲ್‌ ನಡಾಲ್‌, ಶರ್ಪೋವಾಗೆ ಆಘಾತ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ನ್ಯೂಯಾರ್ಕ್‌ (ಐಎಎನ್‌ಎಸ್‌/ ರಾಯಿಟರ್ಸ್‌): ಲಿಯಾಂಡರ್‌ ಪೇಸ್‌ ಮತ್ತು ರಾಡೆಕ್‌ ಸ್ಟೆಪನೆಕ್‌ ಜೋಡಿ ಇಲ್ಲಿ ನಡೆಯುತ್ತಿರುವ ಬಿಎನ್‌ಪಿ ಪಾರಿ ಬಾಸ್‌ ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಸೋಮವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತ- ಜೆಕ್ ಗಣರಾಜ್ಯದ ಜೋಡಿ 6-3, 7-5 ರಲ್ಲಿ  ಇಸ್ರೇಲ್‌ನ ಜೊನಾಥನ್‌ ಎಲ್ರಿಚ್‌ ಮತ್ತು ಫ್ರಾನ್ಸ್‌ನ ರಿಚರ್ಡ್‌ ಗ್ಯಾಸ್ಕೆಟ್‌ ವಿರುದ್ಧ ಜಯ ಸಾಧಿಸಿತು.

ಇಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಪೇಸ್‌ ಮತ್ತು ಸ್ಟೆಪನೆಕ್‌ ಎಂಟರಘಟ್ಟದ ಪಂದ್ಯದಲ್ಲಿ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಹಾಗೂ ಸ್ಟಾನಿಸ್ಲಾಸ್‌ ವಾವ್ರಿಂಕಾ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. ಇಸ್ರೇಲ್‌- ಫ್ರಾನ್ಸ್‌ ಜೋಡಿಯ ವಿರುದ್ಧದ ಪಂದ್ಯದಲ್ಲಿ ಪೇಸ್‌ ಮತ್ತು ಸ್ಟೆಪನೆಕ್‌ ಒಂದು ಗಂಟೆ 16 ನಿಮಿಷಗಳಲ್ಲಿ ಗೆಲುವು ಪಡೆದರು. ಭಾರತ- ಜೆಕ್‌ ಜೋಡಿ ತನಗೆ ಲಭಿಸಿದ ಎಂಟು ಬ್ರೇಕ್‌ ಪಾಯಿಂಟ್‌ ಅವಕಾಶಗಳಲ್ಲಿ ಐದರಲ್ಲಿ ಯಶಸ್ಸು ಪಡೆಯಿತು.

ನಡಾಲ್‌, ಶರ್ಪೋವಾಗೆ ನಿರಾಸೆ: ವಿಶ್ವದ ಅಗ್ರ ರ್‍್ಯಾಂಕ್‌ನ ಆಟಗಾರ ಸ್ಪೇನ್‌ನ ರಫೆಲ್‌ ನಡಾಲ್‌ ಪುರುಷರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನಲ್ಲಿ ಸೋಲು ಅನುಭವಿಸಿದರು. ಉಕ್ರೇನ್‌ನ ಅಲೆಕ್ಸಾಂಡರ್‌ ಡೊಗೊಪೊಲೊವ್‌ 6-3, 3-6, 7-6 ರಲ್ಲಿ ನಡಾಲ್‌ ಅವರನ್ನು ಮಣಿಸಿ ಟೂರ್ನಿಯ ಅತಿದೊಡ್ಡ ಅಚ್ಚರಿಗೆ ಕಾರಣರಾದರು.

ಹೋದ ತಿಂಗಳು ನಡೆದ ರಿಯೊ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ ನಲ್ಲಿ ನಡಾಲ್‌ ಅವರು ಉಕ್ರೇನ್‌ನ ಆಟಗಾರನನ್ನು ಮಣಿಸಿದ್ದರು. ಅಂದು ಎದುರಾದ ಸೋಲಿಗೆ ಡೊಗೊಪೊಲೊವ್‌ ಮುಯ್ಯಿ ತೀರಿಸುವಲ್ಲಿ ಯಶಸ್ವಿಯಾದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನಲ್ಲಿ ಪಂದ್ಯದಲ್ಲಿ ಶರ್ಪೋವಾ 3-6, 6-4, 5-7 ರಲ್ಲಿ ಇಟಲಿಯ ಕ್ಯಾಮಿಲಾ ಜಾರ್ಜಿ ಕೈಯಲ್ಲಿ ಪರಾಭವಗೊಂಡರು. ವಿಶ್ವ ರ್‍್ಯಾಂಕಿಂಗ್‌ನಲ್ಲಿ 79ನೇ ಸ್ಥಾನದಲ್ಲಿರುವ ಜಾರ್ಜಿ ವೃತ್ತಿಜೀವನದಲ್ಲಿ ಪಡೆದ ಅತಿದೊಡ್ಡ ಗೆಲುವು ಇದಾಗಿದೆ.

ವಿಂಬಲ್ಡನ್‌ ಚಾಂಪಿಯನ್‌ ಆ್ಯಂಡಿ ಮರ್ರೆ ಮತ್ತು ವಿಶ್ವದ ಮಾಜಿ ಅಗ್ರ ರ್‍್ಯಾಂಕ್‌ನ ಆಟಗಾರ ರೋಜರ್‌ ಫೆಡರರ್‌ ಮೂರನೇ ಸುತ್ತಿನಲ್ಲಿ ಜಯ ಸಾಧಿಸಿದರು. ಬ್ರಿಟನ್‌ನ ಮರ್ರೆ 6-7, 6-4, 6-4 ರಲ್ಲಿ ಜೆಕ್‌ ಗಣರಾಜ್ಯದ ಜಿರಿ ವೆಸೆಲಿ ವಿರುದ್ಧ ಗೆದ್ದರೆ, ಫೆಡರರ್‌ 7-6, 7-6ರಲ್ಲಿ ರಷ್ಯಾದ ದಿಮಿತ್ರಿ ತುರ್ಸುನೊವ್‌ ಅವರನ್ನು ಸೋಲಿಸಿದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಇತರ ಪಂದ್ಯಗಳಲ್ಲಿ ಅಮೆರಿಕದ ಸ್ಲೊವಾನೆ ಸ್ಟೀಫನ್ಸ್‌ 7-6, 6-4 ರಲ್ಲಿ ಸರ್ಬಿಯದ ಅನಾ ಇವನೊವಿಚ್‌ ಎದುರೂ, ಚೀನಾದ ಲೀ ನಾ 6-3, 6-4 ರಲ್ಲಿ ಜೆಕ್‌ ಗಣರಾಜ್ಯದ ಕ್ಯಾರೊಲಿನಾ ಪಿಸ್ಕೋವಾ ಮೇಲೂ, ಇಟಲಿಯ ಫ್ಲೇವಿಯಾ ಪೆನೆಟಾ 6-4, 3-6, 6-1 ರಲ್ಲಿ ಸಮಂತಾ ಸ್ಟಾಸರ್‌ ವಿರುದ್ಧವೂ, ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ 6-3, 2-6, 6-0 ರಲ್ಲಿ ರಷ್ಯಾದ ಸ್ವೆಟ್ಲಾನಾ ಕುಜ್ನೆಟ್ಸೋವಾ ಮೇಲೂ ಜಯ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.