ADVERTISEMENT

ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿ ಭಾರತ

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 19:30 IST
Last Updated 16 ಜೂನ್ 2011, 19:30 IST

ಬೆಂಗಳೂರು: `ಇಂಗ್ಲೆಂಡ್‌ನ ನೆಲದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಲಿದೆ. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇವೆ. ಅಲ್ಲಿ ಪ್ರಶಸ್ತಿ ಜಯಿಸುವ ನಂಬಿಕೆಯಿದೆ~ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಜೂಲನ್ ಗೋಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಟ್ವೆಂಟಿ-20 ಹಾಗೂ ಏಕದಿನ ಕ್ರಿಕೆಟ್ ಟೂರ್ನಿಯನ್ನಾಡಲು ಭಾರತ ಮಹಿಳಾ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅವರು ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.
`ದೇಸಿ ಕ್ರಿಕೆಟ್‌ನಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಇಂಗ್ಲೆಂಡ್ ಪ್ರವಾಸದಲ್ಲಿಯೂ ಅದೇ ಪ್ರದರ್ಶನವನ್ನು ಮುಂದುವರಿಸಲಿದೆ. ಖಂಡಿತವಾಗಿಯೂ ಪ್ರಶಸ್ತಿ ಜಯಿಸುವ ನಂಬಿಕೆ ಇದೆ. ವರ್ಷದಿಂದ ವರ್ಷಕ್ಕೆ ಅಂತರರಾಷ್ಟ್ರೀಯ ಟೂರ್ನಿಗಳು ಹೆಚ್ಚೆಚ್ಚು ನಡೆದಂತೆಲ್ಲಾ ಮಹಿಳಾ ಕ್ರಿಕೆಟ್‌ಗೂ ಸಹ ಉತ್ತಮ ಬೆಂಬಲ ಸಿಗಲಿದೆ. ಹೊಸ ಪ್ರತಿಭೆಗಳಿಗೆ ಅನುಕೂಲವಾಗಲಿದೆ~ ಎಂದು ಹೇಳಿದರು.

ಇಂಗ್ಲೆಂಡ್ ಪಿಚ್‌ಗಳು ವೇಗದ ಬೌಲರ್‌ಗಳಿಗೆ ನೆರವು ನೀಡುತ್ತಿದ್ದರೂ, ತಂಡದಲ್ಲಿ  ಮೂವರು ಹೊಸ ಸ್ಪಿನ್ನರ್‌ಗಳಿಗೆ ಅವಕಾಶ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಜೂಲನ್, `ವೇಗದ ಪಿಚ್‌ಗಳು ಸಾಕಷ್ಟು ಸಲ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡಿವೆ. ಆದ ಕಾರಣ ಹೊಸ ಸ್ಪಿನ್ನರ್‌ಗಳಿಗೆ ಅವಕಾಶ ನೀಡಲಾಗಿದೆ~ ಎಂದರು.

ADVERTISEMENT

ಇಂಗ್ಲೆಂಡ್ ಪ್ರವಾಸದ ವೇಳೆ ಭಾರತ ಆಡಲಿರುವ ಪಂದ್ಯಗಳ ವೇಳಾಪಟ್ಟಿ: ಟ್ವೆಂಟಿ-20: ಭಾರತ-ಆಸ್ಟ್ರೇಲಿಯಾ (ಜೂನ್ 23), ಭಾರತ- ನ್ಯೂಜಿಲೆಂಡ್ (ಜೂನ್ 25) ಹಾಗೂ ಭಾರತ- ಇಂಗ್ಲೆಂಡ್ (ಜೂನ್ 26). ಜೂನ್ 27ರಂದು ಫೈನಲ್ ಪಂದ್ಯ ನಡೆಯಲಿದೆ; ಏಕದಿನ ಪಂದ್ಯಗಳು: ಭಾರತ-ಇಂಗ್ಲೆಂಡ್ (ಜೂನ್ 30), ಭಾರತ-ಆಸ್ಟ್ರೇಲಿಯ (ಜುಲೈ 2), ಭಾರತ-ನ್ಯೂಜಿಲೆಂಡ್ (ಜು. 5). ಜುಲೈ 7ರಂದು ಫೈನಲ್.

ಭಾರತ ಮಹಿಳಾ ತಂಡ ಇಂತಿದೆ

ಜೂಲನ್ ಗೋಸ್ವಾಮಿ (ನಾಯಕಿ), ಅಮಿತಾ ಶರ್ಮ (ಉಪ ನಾಯಕಿ), ಮಿಥಾಲಿ ರಾಜ್, ಸ್ನೇಹಾಲ್ ಪ್ರಧಾನ್, ಪೂನಮ್ ರಾವತ್, ಪ್ರಿಯಾಂಕ್ ರಾಯ್, ಹರ್ಮನ್ ಪ್ರೀತ್ ಕೌರ್, ನೇಹಾ ತನ್ವಾರ್, ಸಮಂತಾ ಲೊಬೊಟ್ಟೊ, ಅನಘಾ ದೇಶಪಾಂಡೆ (ವಿಕೆಟ್ ಕೀಪರ್), ಗೌಹರ್ ಸುಲ್ತಾನ, ಡಯಾನಾ ಡೇವಿಡ್, ವೇದಾ ಕೃಷ್ಣಮೂರ್ತಿ, ಇಕ್ತಾ ಬಿಸ್ತಾ ಹಾಗೂ ಶಿಲ್ಪಾ ಗುಪ್ತಾ. ಅಂಜು ಜೈನ್ (ಕೋಚ್) ಎಂ.ಜೆ. ಶೀಲಾ (ಪಿಸಿಯೊ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.