ADVERTISEMENT

ಪ್ರೀ ಕ್ವಾರ್ಟರ್‌ಗೆ ಅಲೆಕ್ಸಾಂಡರ್‌ ಜ್ವೆರೆವ್‌

ಏಜೆನ್ಸೀಸ್
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST
ಡೆನ್ಮಾರ್ಕ್‌ನ ಕ್ಯಾರೋಲಿನ್ ವೋಜ್ನಿಯಾಕಿ ಚೆಂಡನ್ನು ಹಿಂತಿರುಗಿಸಲು ಮುಂದಾದರು. -ರಾಯಿಟರ್ಸ್‌ ಚಿತ್ರ
ಡೆನ್ಮಾರ್ಕ್‌ನ ಕ್ಯಾರೋಲಿನ್ ವೋಜ್ನಿಯಾಕಿ ಚೆಂಡನ್ನು ಹಿಂತಿರುಗಿಸಲು ಮುಂದಾದರು. -ರಾಯಿಟರ್ಸ್‌ ಚಿತ್ರ   

ಪ್ಯಾರಿಸ್‌: ಅಂತಿಮ ಸೆಟ್‌ನಲ್ಲಿ ‘ಮ್ಯಾಚ್‌ ಪಾಯಿಂಟ್’ ಉಳಿಸಿಕೊಂಡ ಅಲೆಕ್ಸಾಂಡರ್‌ ಜ್ವೆರೆವ್‌, ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಹಣಾಹಣಿಯಲ್ಲಿ ಜರ್ಮನಿಯ ಜ್ವೆರೆವ್‌ 6–2, 3–6, 4–6, 7–6, 7–5ರಲ್ಲಿ ಬೋಸ್ನಿಯಾದ ದಮಿರ್‌ ಜುಮಹುರ್‌ ಅವರನ್ನು ಸೋಲಿಸಿದರು. ಈ ಹೋರಾಟ ಸುಮಾರು ನಾಲ್ಕು ಗಂಟೆ ನಡೆಯಿತು.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಜ್ವೆರೆವ್‌ ಮೊದಲ ಸೆಟ್‌ನಲ್ಲಿ ನಿರಾಯಾಸವಾಗಿ ಎದುರಾಳಿಯ ಸವಾಲು ಮೀರಿದರು.

ADVERTISEMENT

ಆರಂಭಿಕ ಹಿನ್ನಡೆಯಿಂದ ದಮಿರ್‌ ಎದೆಗುಂದಲಿಲ್ಲ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 29ನೇ ಸ್ಥಾನದಲ್ಲಿರುವ ಅವರು ಎರಡು ಮತ್ತು ಮೂರನೇ ಸೆಟ್‌ಗಳಲ್ಲಿ ಮೋಡಿ ಮಾಡಿದರು. ಇದರೊಂದಿಗೆ 3–1ರ ಮುನ್ನಡೆ ಗಳಿಸಿದರು.

ನಂತರ ಜ್ವೆರೆವ್‌ ಪ್ರಾಬಲ್ಯ ಮೆರೆದರು. ನಾಲ್ಕನೇ ಸೆಟ್‌ನಲ್ಲಿ ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತು. ಇಬ್ಬರೂ ಸರ್ವ್‌ ಉಳಿಸಿಕೊಂಡಿದ್ದರಿಂದ 6–6ರ ಸಮಬಲ ಕಂಡುಬಂತು. ‘ಟೈ ಬ್ರೇಕರ್‌’ನಲ್ಲಿ ಒತ್ತಡ ಮೀರಿ ನಿಂತು ಆಡಿದ 21ರ ಹರೆಯದ ಜ್ವೆರೆವ್‌, ಸೆಟ್‌ ತಮ್ಮದಾಗಿಸಿಕೊಂಡರು.

ನಿರ್ಣಾಯಕ ಎನಿಸಿದ್ದ ಐದನೇ ಸೆಟ್‌ನಲ್ಲೂ ಉಭಯ ಆಟಗಾರರು ಮಿಂಚಿನ ಆಟ ಆಡಿದರು. ಹೀಗಾಗಿ 10 ಗೇಮ್‌ಗಳವರೆಗೆ ಸಮಬಲದ ಪೈಪೋಟಿ ಕಂಡುಬಂತು. 11ನೇ ಗೇಮ್‌ನಲ್ಲಿ ಸರ್ವ್‌ ಕಾಪಾಡಿಕೊಂಡ ಜ್ವೆರೆವ್‌, ಮರು ಗೇಮ್‌ನಲ್ಲಿ ದಮಿರ್‌ ಅವರ ಸರ್ವ್‌ ಮುರಿದು ಜಯದ ತೋರಣ ಕಟ್ಟಿದರು.

ಜಪಾನ್‌ನ ಕೀ ನಿಶಿಕೋರಿ ಅವರು ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 19ನೇ ಸ್ಥಾನದಲ್ಲಿರುವ ನಿಶಿಕೋರಿ 6–3, 6–1, 6–3ರಲ್ಲಿ ಫ್ರಾನ್ಸ್‌ನ ಗಿಲ್ಲೆಸ್‌ ಸಿಮನ್‌ ವಿರುದ್ಧ ಗೆದ್ದರು.

ಇನ್ನೊಂದು ಹೋರಾಟದಲ್ಲಿ ಸ್ಪೇನ್‌ನ ಫರ್ನಾಂಡೊ ವರ್ಡಾಸ್ಕೊ 7–6, 6–2, 6–4ರಲ್ಲಿ ಬಲ್ಗೇರಿಯಾದ ಗ್ರಿಗರ್‌ ದಿಮಿಟ್ರೋವ್ ಅವರನ್ನು ಸೋಲಿಸಿದರು.

ಸರ್ಬಿಯಾದ ಆಟಗಾರ ನೊವಾಕ್‌ ಜೊಕೊವಿಚ್‌ ಮೂರನೇ ಸುತ್ತಿನ ಹಣಾಹಣಿಯಲ್ಲಿ 6–4, 6–7, 7–6, 6–2ರಲ್ಲಿ ರಾಬರ್ಟೊ ಬಟಿಸ್ಟಾ ಅಗತ್‌ ಅವರ ಸವಾಲು ಮೀರಿದರು.

ಸ್ವಿಟೋಲಿನಾಗೆ ಸೋಲು: ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಸೋತರು.

ರುಮೇನಿಯಾದ ಮಿಹಾಯೆಲಾ ಬುಜಾರ್ನೆಸ್ಕು 6–3, 7–5ರಲ್ಲಿ ಎಲಿನಾ ವಿರುದ್ಧ ವಿಜಯಿಯಾದರು.

ಕ್ಯಾರೋಲಿನ್‌ ವೋಜ್ನಿಯಾಕಿ 6–0, 6–3ರಲ್ಲಿ ಪೌಲಿನ್‌ ಪಾರ್ಮೆಂಟೀಯರ್‌ ಅವರನ್ನು ಸೋಲಿಸಿದರು.

ಇತರ ಪಂದ್ಯಗಳಲ್ಲಿ ಬಾರ್ಬರಾ ಸ್ಟ್ರೈಕೋವಾ 6–2, 6–3ರಲ್ಲಿ ಕ್ಯಾತರಿನ್‌ ಸಿನಿಯಾಕೊವಾ ಎದುರೂ, ಯೂಲಿಯಾ ಪುಟಿನ್‌ತ್ಸೆವಾ 1–6, 7–5, 6–4ರಲ್ಲಿ ಕ್ವಿಯಾಂಗ್ ವಾಂಗ್‌ ಮೇಲೂ, ಮ್ಯಾಡಿಸನ್‌ ಕೀಸ್‌ 6–1, 7–6ರಲ್ಲಿ ನವೋಮಿ ಒಸಾಕ ವಿರುದ್ಧವೂ, ಡೇರಿಯಾ ಕಸಾತ್ಕಿನಾ 6–1, 1–6, 6–3ರಲ್ಲಿ ಮರಿಯಾ ಸಕ್ಕಾರಿ ಮೇಲೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.