ಮಡಗಾಂವ್ (ಪಿಟಿಐ): ಪಂದ್ಯದ ಅಂತಿಮ ಕ್ಷಣದಲ್ಲಿ ನಾಯಕ ಸುನಿಲ್ ಚೆಟ್ರಿ ತಂದಿತ್ತ ಗೋಲಿನ ನೆರವಿನಿಂದ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆದ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ನಿಟ್ಟುಸಿರು ಬಿಟ್ಟಿತು.
ಫಟೋರ್ಡ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯ ಅಂತಿಮ ಕ್ಷಣದವರೆಗೂ ರೋಚಕತೆಯನ್ನು ಕಾಯ್ದುಕೊಂಡಿತ್ತು. ಇನ್ನೇನು ಪಂದ್ಯ ಭಾರತದ ಕೈತಪ್ಪಿ ಹೋಯಿತು ಎನ್ನುವಷ್ಟರಲ್ಲಿ ನಾಯಕ ಚೆಟ್ರಿ ಮಿಂಚಿನ ಆಟವಾಡಿ ಗೋಲು ಬಾರಿಸಿದರು. ಹೀಗಾಗಿ ಪಂದ್ಯ 2–2ರಲ್ಲಿ ಡ್ರಾ ಕಂಡಿತು.
ಪಂದ್ಯದ 14ನೇ ನಿಮಿಷದಲ್ಲಿ ಚೆಟ್ರಿ ಗೋಲು ಗಳಿಸಿ ಭಾರತಕ್ಕೆ ಮುನ್ನಡೆ ತಂದಿತ್ತರು. ಆದರೆ ಬಾಂಗ್ಲಾ ತಂಡದ ಮಿಥುನ್ ಚೌಧರಿ 52ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲಕ್ಕೆ ಕಾರಣರಾದರು.
64ನೇ ನಿಮಿಷದಲ್ಲಿ ಹೇಮಂತ ಬಿಸ್ವಾಸ್ ತಂದಿತ್ತ ಗೋಲಿನ ಸಹಾಯದಿಂದ ಬಾಂಗ್ಲಾ 2–1ರಲ್ಲಿ ಮುನ್ನಡೆ ಪಡೆದುಕೊಂಡಿತು. ಆಗ ಪಂದ್ಯ ಭಾರತದ ಕೈತಪ್ಪಿತು ಎಂದುಕೊಂಡವರೆ ಹೆಚ್ಚು. ಆದರೆ ನಾಯಕ ಚೆಟ್ರಿ ಇದಕ್ಕೆ ಅವಕಾಶ ನೀಡಲಿಲ್ಲ. ಅವರು ಪಂದ್ಯದ 88ನೇ ನಿಮಿಷದಲ್ಲಿ ಗೋಲು ಬಾರಿಸಿ ಡ್ರಾ ಸಾಧಿಸಲು ಕಾರಣರಾದರಲ್ಲದೇ, ಭಾರತವನ್ನು ಸೋಲಿನಿಂದ ಪಾರುಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.