ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡದವರು ಇಲ್ಲಿ ನಡೆಯುತ್ತಿರುವ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.
ಬಿಡಿಎಫ್‌ಎ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೀಗ್‌ನ ಈ ಪಂದ್ಯದಲ್ಲಿ ಸೋಮವಾರ ಕೆಎಸ್‌ಪಿ 3-1 ಗೋಲುಗಳಿಂದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ತಂಡವನ್ನು ಮಣಿಸಿತು.
ವಿಜಯಿ ತಂಡದ ಸಂಪತ್ ಕುಮಾರ್ ಪಂದ್ಯ ಆರಂಭವಾದ ಎರಡನೇ ನಿಮಿಷದಲ್ಲಿ ಫ್ರೀ ಕಿಕ್ ಮೂಲಕ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಬಳಿಕ ಅರುಣ್ ಕುಮಾರ್ (18ನೇ ನಿ.) ಹಾಗೂ ಬಿ.ವಿ.ಪ್ರದೀಪ್ ಕುಮಾರ್ (82ನೇ ನಿ.) ಚೆಂಡನ್ನು ಗುರಿ ಸೇರಿಸಿ ಮುನ್ನಡೆಯ ಅಂತರವನ್ನು ಹೆಚ್ಚಿಸಿದರು. ಬಿಇಎಲ್‌ನ ಅರವಿಂದ್ 78ನೇ ನಿಮಿಷದಲ್ಲಿ ಗೋಲು ತಂದಿತ್ತರು. ಕೊನೆ ನಿಮಿಷಗಳಲ್ಲಿ ಕೆಎಸ್‌ಪಿ ರಕ್ಷಣೆಗೆ ಹೆಚ್ಚು ಒತ್ತು ನೀಡಿತು.
ಬಿಯುಎಫ್‌ಸಿಗೆ ಜಯ: ಬಿಯುಎಫ್‌ಸಿ ತಂಡದವರು `ಎ~ ಡಿವಿಷನ್ ಲೀಗ್‌ನ ಪಂದ್ಯದಲ್ಲಿ ಜಯ ಗಳಿಸಿದರು.
ಈ ತಂಡದವರು 2-0 ಗೋಲುಗಳಿಂದ ಇಸ್ರೋ ತಂಡಕ್ಕೆ ಸೋಲುಣಿಸಿದರು. ವಿಜಯಿ ತಂಡದ ಕ್ಲಿವರ್ಟ್ (18ನೇ ನಿ.) ಹಾಗೂ ಆನಂದ್ (7ನೇ ನಿ.) ಗೋಲು ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.