ADVERTISEMENT

ಫೆಡರರ್‌ಗೆ ಪ್ರಯಾಸದ ಗೆಲುವು

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 19:30 IST
Last Updated 19 ಜನವರಿ 2011, 19:30 IST

ಮೆಲ್ಬರ್ನ್ (ಎಪಿ/ಪಿಟಿಐ): ಎರಡನೇ ಶ್ರೇಯಾಂಕದ ಆಟಗಾರ ಸ್ವಿಜ್ಜರ್‌ಲೆಂಡ್‌ನ ರೋಜರ್ ಫೆಡರರ್ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಯಾಸಕರ ಗೆಲುವು ಪಡೆದು ಮೂರನೇ ಸುತ್ತಿಗೆ ಪ್ರವೇಶ ಪಡೆದರು.ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ರೋಜರ್ ಫೆಡರರ್ 6-2, 6-3, 4-6, 4-6, 6-3ರಲ್ಲಿ ಫ್ರಾನ್ಸ್‌ನ 34ನೇ ರ್ಯಾಂಕ್‌ನ ಆಟಗಾರ ಗೈಲ್ಸ್ ಸಿಮೊನ್ ಅವರನ್ನು ಮಣಿಸಿದರು.

ಮೊದಲ ಎರಡು ಸೆಟ್‌ಗಳಲ್ಲಿ ಸುಲಭ ಗೆಲುವು ಪಡೆದ ಫೆಡರರ್ ಮೂರು ಹಾಗೂ ನಾಲ್ಕನೇ ಸೆಟ್‌ನಲ್ಲಿ ಸೋಲು ಅನುಭವಿಸಿದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಮತ್ತೆ ಲಯ ಕಂಡುಕೊಂಡು ಮುಂದಿನ ಹಂತ ಪ್ರವೇಶಿಸಿದರು. ಈ ಪೈಪೋಟಿ ಮೂರು ಗಂಟೆ 13 ನಿಮಿಷಗಳ ಕಾಲ ನಡೆಯಿತು. ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಇತರ ಪಂದ್ಯಗಳಲ್ಲಿ ಅಮೆರಿಕದ ಆಯಂಡಿ ರಾಡಿಕ್ 7-6, 6-2, 6-3ರಲ್ಲಿ ರಷ್ಯಾದ ಇಗೋರ್ ಕುನಿಸ್ತಿನ್ ಮೇಲೂ, ಸರ್ಬಿಯಾದ ನೊವಾಕ್ ಜೊಕೋವಿಕ್ 7-5, 6-7, 6-0, 6-2ರಲ್ಲಿ ಕ್ರೊಯೇಷಿಯಾದ ಇವಾನ್ ದೊಡಿಕ್ ವಿರುದ್ಧವೂ, ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ 4-6, 6-2, 6-3, 6-4 ರಲ್ಲಿ ಜರ್ಮನಿಯ ಪಿಲಿಪ್ ಕೊಲ್‌ಶ್ರೈಬರ್ ವಿರುದ್ಧವೂ, ಜಪಾನ್‌ನ ಕೀ ನಿಷಿಕೊರಿ 6-4, 6-3, 0-6, 6-3 ರಲ್ಲಿ ಜರ್ಮನಿಯ ಫ್ಲೋರಿಯನ್ ಮೇಯರ್ ಮೇಲೂ ಗೆಲುವು ಪಡೆದು ಮೂರನೇ ಸುತ್ತಿಗೆ ಪ್ರವೇಶಿಸಿದರು.

ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಅಮೆರಿಕದ ಬಾಬ್ ಮತ್ತು ಮೈಕ್ ಬ್ರಯನ್ ಜೋಡಿ 6-3, 3-6, 6-4 ರಲ್ಲಿ ತಮ್ಮ ದೇಶದವರೇ ಆದ ಸ್ಕಾಟ್ ಲಿಪ್ಸಿಕಿ -ರಾಜೀವ್ ರಾಮ್ ಜೋಡಿಯನ್ನು ಮಣಿಸಿತು. ಎರಡನೇ ಶ್ರೇಯಾಂಕದ ಬೆಲಾರಸ್‌ನ ಮ್ಯಾಕ್ಸ್ ಮಿರ್ನಿ -ಕೆನಡಾದ ಡೇನಿಯಲ್ ನಿಸ್ಟೋರ್ ಜೋಡಿ 6-3, 6-3 ನೇರ ಸೆಟ್‌ಗಳಿಂದ ಆತಿಥೇಯ ಆಸ್ಟ್ರೇಲಿಯಾದ ಜೇಮ್ಸ್ ಡಕ್ವರ್ಥ್ -ಬೆಂಜಮಿನ್ ಮಿಷೆಲ್ ಜೋಡಿಯನ್ನು ಪರಾಭವಗೊಳಿಸಿತು.

ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಕ್ಯಾರೊಲಿನ್ ವೊಜ್‌ನಿಯಾಕಿ ಅವರು 6-1, 6-0ರಲ್ಲಿ ಅಮೆರಿಕಾದ ವಾನಿಯಾ ಕಿಂಗ್ ಅವರನ್ನು ಸುಲಭವಾಗಿ ಮಣಿಸಿದರು. 58 ನಿಮಿಷ ನಡೆದ ಈ ಹಣಾಹಣಿಯಲ್ಲಿ ವೊಜ್‌ನಿಯಾಕಿ ಅವರಿಗೆ ಯಾವುದೇ ಪ್ರಬಲ ಪೈಪೋಟಿ ಎದುರಾಗಲಿಲ್ಲ. ಏಳು ಸಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಬೆಲ್ಜಿಯಂನ ಜಸ್ಟಿನ್ ಹೆನಿನ್ ಅವರು 6-1, 6-3ರಲ್ಲಿ ಇಂಗ್ಲೆಂಡ್‌ನ ಇಲೆನಾ ಬಾಲ್ಟಚಾ ವಿರುದ್ಧ ಸುಲಭ ಗೆಲುವು ಪಡೆದರು.

ಮಹಿಳೆಯರ ಸಿಂಗಲ್ಸ್‌ನ ಇತರ ಪಂದ್ಯಗಳಲ್ಲಿ ಅಮೆರಿಕದ ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ ವೀನಸ್ ವಿಲಿಯಮ್ಸ್ 6-7, 6-0, 6-4ರಲ್ಲಿ ಜೆಕ್ ಗಣರಾಜ್ಯದ ಸಾಂಡ್ರಾ ಜಾವ್ಲಾವೋವಾ ಮೇಲೂ, ರಷ್ಯಾದ ಮರಿಯಾ ಶರ್ಪೋವಾ 7-6, 6-3ರಲ್ಲಿ ಫ್ರಾನ್ಸ್‌ನ ವರ್ಜೀನಿಯಾ ರಾಜೋನಾ ವಿರುದ್ಧವೂ, ಇಟಲಿಯ ಫ್ರಾನ್ಸಿಸ್ಕಾ ಶಿಯವೋನ್ 6-3, 5-7, 9-5ರಲ್ಲಿ ಕೆನಡಾದ ರೆಬೆಕಾ ಮಾರಿನೊ ಮೇಲೂ, ಚೀನಾದ ನಾ ಲೀ 6-3, 6-2ರಲ್ಲಿ ರಷ್ಯಾದ ಇವ್ಗೆನಿಯಾ ರಾಬಿನ್ ವಿರುದ್ಧವೂ ಗೆಲುವು ಸಾಧಿಸಿದರು.

ರಷ್ಯಾದ ವೆನ್ಸಾ ಮೆನ್ಸೆವಿಯಾ ಅವರು 3-6, 6-3, 6-0 ರಲ್ಲಿ 15ನೇ ಶ್ರೇಯಾಂಕದ ಆಟಗಾರ್ತಿ ಫ್ರಾನ್ಸ್‌ನ ಮೇರಿಯನ್ ಬರ್ಟೊಲಿ ವಿರುದ್ಧ ಅಚ್ಚರಿಯ ಗೆಲುವು ಪಡೆದರು.ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಬೆಥನಿ ಮಟೆಕ್- ಮೇಘನ್ ಶಾಂಗ್ಸೆಸ್ಸಿ ಜೋಡಿ 6-1, 6-1ರಲ್ಲಿ ಬಲ್ಗೇರಿಯಾದ ಕ್ರಿಸ್ಟನ್ ಫ್ಲಿಪ್ಕ್‌ನೆಸ್-ಉಕ್ರೇನ್‌ನ ಮಾರಿಯಾ ಕೊರ್ತಸೇವಾ ವಿರುದ್ಧ ಜಯ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.