ADVERTISEMENT

ಫೈನಲ್‌ಗೆ ಎಸ್‌ಎಐ, ಡಿವೈಎಸ್‌ಎಸ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ಬೆಂಗಳೂರು: ಪ್ರಬಲ ಪೈಪೋಟಿ ಎದುರಾದರೂ ಉತ್ತಮ ಪ್ರದರ್ಶನ ನೀಡಿದ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಹಾಗೂ ಡಿವೈಎಸ್‌ಎಸ್ ತಂಡದವರು ಇಲ್ಲಿ ನಡೆಯುತ್ತಿರುವ ಡಿ.ಎಸ್. ಮೂರ್ತಿ ಹಾಗೂ ವಿ. ಕರುಣಾಕರನ್ ಸ್ಮಾರಕ ರಾಜ್ಯ ಮಟ್ಟದ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪೈಪೋಟಿ ನಡೆಸಲಿದ್ದಾರೆ.

ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ (ಕೆಎಸ್‌ಎಚ್‌ಎ) ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಡಿವೈಎಸ್‌ಎಸ್ 2-0ಗೋಲುಗಳಿಂದ ಬಿಇಎಂಎಲ್ ಬೆಂಗಳೂರು ತಂಡವನ್ನು ಸೋಲಿಸಿತು.

 ಏಕಪಕ್ಷೀಯವಾಗಿ ಕೊನೆಗೊಂಡ ಈ ಪಂದ್ಯದಲ್ಲಿ ವಿಜಯಿ ತಂಡದ ವಾಸು ಎಸ್. ಗೋಕಾಕ್ ಹಾಗೂ ಸುಧಾಕರ್ ಕ್ರಮವಾಗಿ 26 ಮತ್ತು 49ನೇ ನಿಮಿಷದಲ್ಲಿ ಗೋಲು ಗಳಿಸಿ ಗೆಲುವಿನ ರೂವಾರಿಗಳೆನಿಸಿದರು.

ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಎಸ್‌ಎಐ 3-2ಗೋಲುಗಳಿಂದ ಎಚ್‌ಎಎಲ್ ತಂಡವನ್ನು ಮಣಿಸಿತು. ವಿಜಯಿ ತಂಡದ ಸೋಮಣ್ಣ 25ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ ಉಮೇಶ್ (28ನೇ ನಿಮಿಷ) ಮತ್ತು ರಫೀಕ್ (47ನೇ ನಿ.) ಗೋಲು ಕಲೆ ಹಾಕಿದರು. ಎಚ್‌ಎಎಲ್ ತಂಡದ ತೇಜ್ ಬಾಬು (42ನೇ ನಿ) ಹಾಗೂ ನಾನಯ್ಯ (49ನೇ ನಿ) ಚೆಂಡನ್ನು ಪೆಟ್ಟಿಗೆ ಸೇರಿಸಿ ಭಾರಿ ಪೈಪೋಟಿ ಒಡ್ಡಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ, ಎಸ್‌ಎಐ ಇದಕ್ಕೆ ಅವಕಾಶ ನೀಡದೇ ಪ್ರಶಸ್ತಿ ಸನಿಹ ಹೆಜ್ಜೆ ಹಾಕಿತು.

ಮೂರನೇ ಸ್ಥಾನಕ್ಕಾಗಿ ಶನಿವಾರ ನಡೆಯುವ ಪಂದ್ಯದಲ್ಲಿ ಎಚ್‌ಎಎಲ್ ಹಾಗೂ ಬಿಇಎಂಎಲ್ ತಂಡಗಳು ಸ್ಪರ್ಧಿಸಲಿವೆ. ಹಾಕಿ ಕ್ರೀಡಾಂಗಣದಲ್ಲಿ ಹೊಸದಾಗಿ ನವೀಕರಣ ಮಾಡಲಾಗಿರುವ ಬೆಳಕಿನ ವ್ಯವಸ್ಥೆಯಲ್ಲಿ 21ರಂದು ಸಂಜೆ ಫೈನಲ್ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.