ADVERTISEMENT

ಫೈನಲ್ ಪ್ರವೇಶದ ಕನಸಲ್ಲಿ ಭಾರತ ತಂಡ

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್: ಎರಡನೇ ಸೆಮಿಫೈನಲ್‌ನಲ್ಲಿ ಇಂದು ಲಂಕಾ ಜೊತೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 19:59 IST
Last Updated 19 ಜೂನ್ 2013, 19:59 IST

ಕಾರ್ಡಿಫ್: ಲೀಗ್ ಹಂತದಲ್ಲಿ ಅಜೇಯ ಓಟ ನಡೆಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡ ಒಂದೆಡೆಯಾದರೆ, ಕಳಪೆ ಆರಂಭದ ಬಳಿಕ ಫಾರ್ಮ್‌ಗೆ ಮರಳಿರುವ ಶ್ರೀಲಂಕಾ ತಂಡ ಮತ್ತೊಂದೆಡೆ.ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಇವೆರಡು ತಂಡಗಳು ಗುರುವಾರ ಪರಸ್ಪರ ಎದುರಾಗಲಿದ್ದು, ರೋಚಕ ಹಣಾಹಣಿಯನ್ನು ನಿರೀಕ್ಷಿಸಲಾಗಿದೆ. ಸೋಫಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೆಲುವು ಪಡೆದು ಫೈನಲ್ ಪ್ರವೇಶಿಸುವುದು ಮಹೇಂದ್ರ ಸಿಂಗ್ ದೋನಿ ಬಳಗದ ಗುರಿ.

ಆಟಗಾರರ ಬಲಾಬಲ ನೋಡುವಾಗ ಈ ಪಂದ್ಯದಲ್ಲಿ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸುತ್ತದೆ. ಆದರೆ ಕೊನೆಯ ಎರಡು ಲೀಗ್ ಪಂದ್ಯಗಳಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಮಣಿಸಿರುವ ಏಂಜೆಲೊ ಮ್ಯಾಥ್ಯೂಸ್ ಬಳಗವನ್ನು ಕಡೆಗಣಿಸಲು ಸಾಧ್ಯವಿಲ್ಲ.

ಭಾರತ ಲೀಗ್ ಹಂತದಲ್ಲಿ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳನ್ನು ಸೋಲಿಸಿತ್ತು. ಪ್ರಮುಖ ಬ್ಯಾಟ್ಸ್‌ಮನ್‌ಗಳು ಉತ್ತಮ ಲಯದಲ್ಲಿ ಆಡುತ್ತಿರುವುದು ಭಾರತದ ಪಾಲಿಗೆ ಸಕಾರಾತ್ಮಕ ಅಂಶ ಎನಿಸಿದೆ. ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ತಂಡದ ಬ್ಯಾಟಿಂಗ್‌ಗೆ ಬಲ ನೀಡಲಿದ್ದಾರೆ. ದೋನಿ ಹಾಗೂ ಆಲ್‌ರೌಂಡರ್ ಜಡೇಜ ಕೂಡಾ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ಇಂಗ್ಲೆಂಡ್ ನೆಲದಲ್ಲಿ ಆಡಿರುವ ಐದು ಪಂದ್ಯಗಳಲ್ಲಿ (ಅಭ್ಯಾಸ ಪಂದ್ಯಗಳು ಸೇರಿ) ಭಾರತ ಮೂರರಲ್ಲಿ 300ಕ್ಕೂ ಅಧಿಕ ರನ್ ಪೇರಿಸಿದೆ. ತಂಡದ ಬ್ಯಾಟಿಂಗ್ ಶಕ್ತಿ ಏನೆಂಬುದು ಇದರಿಂದ ತಿಳಿಯಬಹುದು. ಲಸಿತ್ ಮಾಲಿಂಗ ಒಳಗೊಂಡಂತೆ ಲಂಕಾ ಬೌಲರ್‌ಗಳು ಭಾರತದ ಬ್ಯಾಟ್ಸಮನ್‌ಗಳಿಗೆ ತಡೆಯೊಡ್ಡಲು ಯಶಸ್ವಿಯಾಗುವರೇ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಲಂಕಾ ತಂಡ ಲೀಗ್ ಹಂತದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಸೋಲು ಅನುಭವಿಸಿತ್ತು. ಆದರೆ ಈ ಹಿನ್ನಡೆಯಿಂದ ಅದ್ಭುತ ರೀತಿಯಲ್ಲಿ ಪುಟಿದೆದ್ದು ನಿಂತಿತ್ತು. ಮುಂದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಏಳು ವಿಕೆಟ್‌ಗಳ ಜಯ ಸಾಧಿಸಿತ್ತು. ಅದೇ ರೀತಿ `ಮಾಡು ಇಲ್ಲವೇ ಮಡಿ' ಎನಿಸಿದ ಕೊನೆಯ ಪಂದ್ಯದಲ್ಲಿ ಆಸೀಸ್‌ಗೆ 20 ರನ್‌ಗಳ ಸೋಲುಣಿಸಿತ್ತು.

ಅನುಭವಿ ಆಟಗಾರರಾದ   ಕುಮಾರ ಸಂಗಕ್ಕಾರ, ಮಾಹೇಲ ಜಯವರ್ಧನೆ ಮತ್ತು ತಿಲಕರತ್ನೆ ದಿಲ್ಶಾನ್ ಅವರಿಂದ ತಂಡ ಉತ್ತಮ ಆಟ ನಿರೀಕ್ಷಿಸುತ್ತಿದೆ.
ಸೆಮಿಫೈನಲ್ ಪಂದ್ಯಕ್ಕಾಗಿ ಸೋಫಿಯಾ ಗಾರ್ಡನ್ ಕ್ರೀಡಾಂಗಣದ ಪಿಚ್‌ನ ಮೇಲಿನ ಹಾಸನ್ನು ಹೊಸದಾಗಿ ಹಾಸಲಾಗಿದೆ. ಮೊದಲು ಬ್ಯಾಟ್ ಮಾಡಿದರೆ 280- 300 ರನ್ ಪೇರಿಸುವುದು `ಸುರಕ್ಷಿತ' ಎಂಬುದು ಕ್ಯುರೇಟರ್ ಹೇಳಿಕೆ. ಗುರುವಾರ ಇಡೀ ದಿನ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದೆ.

ಹಾಗಾದಲ್ಲಿ ಉಭಯ ತಂಡಗಳ ವೇಗದ ಬೌಲರ್‌ಳ ಪ್ರದರ್ಶನ ಪಂದ್ಯದ ಫಲಿತಾಂಶದ ಮೇಲೆ ಹೆಚ್ಚಿನ ಪ್ರಭಾವ ಬೀರುವುದು ಖಚಿತ. ಟೂರ್ನಿಯ ಆರಂಭಕ್ಕೆ ಮುನ್ನ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ದೋನಿ ಬಳಗ ಲಂಕಾ ಎದುರು ಜಯ ಸಾಧಿಸಿತ್ತು. ಮ್ಯಾಥ್ಯೂಸ್ ಬಳಗ ನೀಡಿದ್ದ 334 ರನ್‌ಗಳ ಗುರಿಯನ್ನು ಬೆನ್ನಟ್ಟಿ ಗೆಲುವು ಪಡೆಯುವಲ್ಲಿ ಯಶಸ್ವಿಯಾಗಿತ್ತು.

2002 ರಲ್ಲಿ ಕೊಲಂಬೊದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಹಾಗೂ ಲಂಕಾ ಎದುರಾಗಿದ್ದವು. ಆದರೆ ಪಂದ್ಯದ ದಿನ ಮತ್ತು ಹೆಚ್ಚುವರಿ ದಿನದಲ್ಲಿ ಮಳೆ ಸುರಿದಿತ್ತು. ಇದರಿಂದ ಉಭಯ ತಂಡಗಳನ್ನು `ಜಂಟಿ ವಿಜೇತರು' ಎಂದು ಘೋಷಿಸಲಾಗಿತ್ತು. ಗುರುವಾರ ನಡೆಯುವ ಪಂದ್ಯ ಒಂದು ರೀತಿಯಲ್ಲಿ 2011ರ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವನ್ನು ನೆನಪಿಸಿದೆ.

ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಲಂಕಾ ತಂಡವನ್ನು ಮಣಿಸಿದ್ದ ದೋನಿ ಬಳಗ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತ್ತು. ಅಂದು ಎದುರಾದ ಸೋಲಿಗೆ ಮುಯ್ಯಿ ತೀರಿಸುವ ಅವಕಾಶವೂ ಲಂಕಾ ತಂಡಕ್ಕೆ ಲಭಿಸಿದೆ.

ತಂಡಗಳು ಇಂತಿವೆ
ಮಹೇಂದ್ರ ಸಿಂಗ್ ದೋನಿ (ನಾಯಕ), ರವಿಚಂದ್ರನ್ ಅಶ್ವಿನ್, ಶಿಖರ್ ಧವನ್, ರವೀಂದ್ರ ಜಡೇಜ, ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಅಮಿತ್ ಮಿಶ್ರಾ, ಇರ್ಫಾನ್ ಪಠಾಣ್, ಸುರೇಶ್ ರೈನಾ, ಇಶಾಂತ್ ಶರ್ಮ, ರೋಹಿತ್ ಶರ್ಮ, ಮುರಳಿ ವಿಜಯ್, ವಿನಯ್ ಕುಮಾರ್, ಉಮೇಶ್ ಯಾದವ್

ADVERTISEMENT

ಏಂಜೆಲೊ ಮ್ಯಾಥ್ಯೂಸ್ (ನಾಯಕ) ದಿನೇಶ್ ಚಂಡಿಮಾಲ್, ದಿಲ್ಹಾರ ಲೋಕುಹೆಟ್ಟಿಗೆ, ತಿಲಕರತ್ನೆ ದಿಲ್ಶಾನ್, ಶಾಮಿಂದ ಎರಂಗಾ, ರಂಗನಾ ಹೆರಾತ್, ಮಾಹೇಲ ಜಯವರ್ಧನೆ, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ಜೀವನ್ ಮೆಂಡಿಸ್, ಕುಸಾಲ್ ಪೆರೇರಾ, ತಿಸಾರ ಪೆರೇರಾ, ಕುಮಾರ ಸಂಗಕ್ಕಾರ, ಸಚಿತ್ರ ಸೇನನಾಯಕೆ, ಲಾಹಿರು ತಿರಿಮನ್ನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.