ಓಸ್ಲೊ (ಐಎಎನ್‌ಎಸ್/ ಸಿಎಂಸಿ): ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್ ಇಲ್ಲಿ ನಡೆದ ಬಿಸ್ಲೆಟ್ ಡೈಮಂಡ್ ಲೀಗ್ ಅಥ್ಲೆಟಿಕ್ ಕೂಟದ 200 ಮೀ. ಓಟದಲ್ಲಿ ಚಿನ್ನ ಗೆದ್ದರು.
ಗುರುವಾರ ನಡೆದ ಸ್ಪರ್ಧೆಯಲ್ಲಿ ಜಮೈಕದ ವೇಗಿ 19.79 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಪ್ರಸಕ್ತ ಋತುವಿನಲ್ಲಿ 200 ಮೀ. ಓಟದ ಸ್ಪರ್ಧೆಯಲ್ಲಿ ದಾಖಲಾದ ಅತ್ಯುತ್ತಮ ಸಮಯ ಇದಾಗಿದೆ.
ಒಂದು ವಾರದ ಹಿಂದೆ ರೋಮ್‌ನಲ್ಲಿ ನಡೆದ ಕೂಟದ 100 ಮೀ. ಓಟದಲ್ಲಿ ಬೋಲ್ಟ್ ಚಿನ್ನ ಗೆಲ್ಲುವಲ್ಲಿ ವಿಫಲರಾಗಿದ್ದರು. ಇಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಆ ನಿರಾಸೆಯನ್ನು ದೂರ ಮಾಡಿದರು.
`ಇಲ್ಲಿ ತುಂಬಾ ಚಳಿಯಿದೆ. ಆದರೆ ನಾನು ಎಷ್ಟು ಸಾಧ್ಯವೋ, ಅಷ್ಟು ವೇಗವಾಗಿ ಓಡಿದೆ. ಮಾತ್ರವಲ್ಲ, ಕೊಟ್ಟ ಮಾತನ್ನು ಉಳಿಸಿಕೊಂಡೆ' ಎಂದು ಬೋಲ್ಟ್ `ಟ್ವಿಟರ್'ನಲ್ಲಿ ಬರೆದಿದ್ದಾರೆ. `ಬಿಸ್ಲೆಟ್ ಕೂಟದಲ್ಲಿ 20 ಸೆಕೆಂಡ್‌ಗಳ ಒಳಗೆ ಸ್ಪರ್ಧೆ ಕೊನೆಗೊಳಿಸುವೆನು' ಎಂದು ಅವರು ಈ ವಾರದ ಆರಂಭದಲ್ಲಿ ಹೇಳಿದ್ದರು.
ಆತಿಥೇಯ ನಾರ್ವೆಯ ಜಾಸೈಮಾ ಸೈದಿ ಮತ್ತು ಬ್ರಿಟನ್‌ನ ಜೇಮ್ಸ ಎಲಿಂಗ್ಟನ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡರು.
ಈ ಸ್ಪರ್ಧೆಯಲ್ಲಿ ಜಮೈಕದ ಇತರ ಓಟಗಾರರು ಹಾಗೂ ಅಮೆರಿಕದ ಯಾವುದೇ ಅಥ್ಲೀಟ್‌ಗಳು ಪಾಲ್ಗೊಳ್ಳಲಿಲ್ಲ. ಇದರಿಂದ ಬೋಲ್ಟ್ ಗೆಲುವಿನ ಹಾದಿ ಸುಗಮವಾಯಿತು.
ಈ ಕಾರಣ ಯೂರೋಪಿಯನ್ ಚಾಂಪಿಯನ್ ಎನಿಸಿರುವ ಹಾಲೆಂಡ್‌ನ ಚುರಾಂಡಿ ಮಾರ್ಟಿನ್ ಅವರಿಂದ ಮಾತ್ರ ಬೋಲ್ಟ್ ಪೈಪೋಟಿ ನಿರೀಕ್ಷಿಸಿದ್ದರು. ಆದರೆ ಸ್ಪರ್ಧೆಯ ಆರಂಭದ ವೇಳೆ ತಪ್ಪು ಮಾಡಿದ ಮಾರ್ಟಿನ್ ಅನರ್ಹಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.