ADVERTISEMENT

ಬಲಿಷ್ಠ ಮುಂಬೈ ಇಂಡಿಯನ್ಸ್‌ಗೆ ಇಂದು ಡೆವಿಲ್ಸ್ ಸವಾಲು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ಮುಂಬೈ (ಪಿಟಿಐ): ಕೈಬೆರಳಿನ ಗಾಯದ ಕಾರಣ ಕಳೆದ ಮೂರು ಪಂದ್ಯಗಳಲ್ಲಿ ಆಡದ ಸಚಿನ್ ತೆಂಡೂಲ್ಕರ್ ತಂಡಕ್ಕೆ ಹಿಂದಿರುಗುವ ಸಾಧ್ಯತೆ ಇದೆ. ಈ ಕಾರಣ ಮುಂಬೈ ಇಂಡಿಯನ್ಸ್‌ಗೆ ಈಗ ಮತ್ತಷ್ಟು ಶಕ್ತಿ ಬಂದಂತಾಗಿದೆ.
ಈ ತಂಡದವರು ವಾಂಖೇಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ಎದುರಿಸಲಿದ್ದಾರೆ. ಅದಕ್ಕಾಗಿ ಸಚಿನ್ ತುಂಬಾ ಹೊತ್ತು ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು. ಅವರು ಉದ್ಘಾಟನಾ ಪಂದ್ಯದಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ಎದುರು ಕೈಗೆ ಪೆಟ್ಟು ಮಾಡಿಕೊಂಡಿದ್ದರು.

ಮುಂಬೈ ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಸೋತಿದ್ದು ಆರು ಪಾಯಿಂಟ್ಸ್ ಹೊಂದಿದೆ. ಆದರೆ ಕೊನೆಯ ಪಂದ್ಯದಲ್ಲಿ ಈ ತಂಡದವರು ಆಡಿದ ರೀತಿ ಅಮೋಘ. ಪ್ರಮುಖವಾಗಿ ಕೀರನ್ ಪೊಲಾರ್ಡ್ ಫಾರ್ಮ್ ಕಂಡುಕೊಂಡಿರುವುದು ಈ ತಂಡದ ನಾಯಕ ಹರಭಜನ್ ಸಿಂಗ್ ಅವರಲ್ಲಿ ಖುಷಿಗೆ ಕಾರಣವಾಗಿದೆ. ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮ ೂನೆಯ ಎಸೆತದಲ್ಲಿ ಸಿಕ್ಸರ್ ಎತ್ತಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದನ್ನು ಮರೆಯುವಂತಿಲ್ಲ.

ಇವೆಲ್ಲಾ ಮುಂಬೈ ಇಂಡಿಯನ್ಸ್‌ನ ಆತ್ಮವಿಶ್ವಾಸ ಹೆಚ್ಚಿಸಿವೆ. ಜೊತೆಗೆ ಬೌಲಿಂಗ್‌ನಲ್ಲೂ ಈ ತಂಡ ಮಿಂಚುತ್ತಿದೆ. ಈ ಬಾರಿಯ ಐಪಿಎಲ್‌ನಲ್ಲಿ ಇದುವರೆಗೆ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿ ಈ ತಂಡದವರಿದ್ದಾರೆ. ಮುನಾಫ್ ಪಟೇಲ್ (10 ವಿಕೆಟ್), ಲಸಿತ್ ಮಾಲಿಂಗ (9) ಹಾಗೂ ಪೊಲಾರ್ಡ್ (9) ಎದುರಾಳಿ ತಂಡಕ್ಕೆ ಆರಂಭದಲ್ಲಿಯೇ ಪೆಟ್ಟು ನೀಡುವ ಸಾಮರ್ಥ್ಯ ಹೊಂದಿದ್ದಾರೆ.

ಆದರೆ ಸಚಿನ್ ಇಲ್ಲದ ಕಾರಣ ಈ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಮೊದಲ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ್ದ ರಿಚರ್ಡ್ ಲೆವಿಗೆ ಉತ್ತಮ ಜೊತೆಗಾರರು ಲಭಿಸಿರಲಿಲ್ಲ. ಆದರೆ ತೆಂಡೂಲ್ಕರ್ ಕಣಕ್ಕಿಳಿದರೆ ಆ ಸಮಸ್ಯೆ ದೂರವಾಗಬಹುದು.

ವೀರೇಂದ್ರ ಸೆಹ್ವಾಗ್ ಸಾರಥ್ಯದ ಡೇರ್‌ಡೆವಿಲ್ಸ್ ಕೂಡ ಉತ್ತಮ ಫಾರ್ಮ್‌ನಲ್ಲಿದೆ. ಈ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಸೋಲು ಕಂಡಿದೆ. ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರು ಬಂದ ಗೆಲುವು ಈ ಆಟಗಾರರಲ್ಲಿ ಮತ್ತಷ್ಟು ಸ್ಫೂರ್ತಿ ತುಂಬಿದೆ. ಹಾಗಾಗಿ ಬಲಿಷ್ಠ ಮುಂಬೈ ಡೆವಿಲ್ಸ್ ಸವಾಲು ನೀಡಲು ಸಜ್ಜಾಗಿದೆ.

ಪಂದ್ಯ ಆರಂಭ: ರಾತ್ರಿ 8.00ಕ್ಕೆ ನೇರ ಪ್ರಸಾರ: ಸೆಟ್ ಮ್ಯಾಕ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.