ಮನಾಮ, ಬಹರೇನ್ (ಪಿಟಿಐ): ಫೋರ್ಸ್ ಇಂಡಿಯಾ ತಂಡದ ಚಾಲಕ ಪೌಲ್ ಡಿ ರೆಸ್ಟಾ ಭಾನುವಾರ ಇಲ್ಲಿ ನಡೆದ ಬಹರೇನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್‌ನಲ್ಲಿ ಆರನೇ ಸ್ಥಾನ ಪಡೆದರು. ಮಾತ್ರವಲ್ಲ ತಮ್ಮ ತಂಡಕ್ಕೆ ಎಂಟು ಪಾಯಿಂಟ್ ದೊರಕಿಸಿಕೊಟ್ಟರು.
ಪ್ರಸಕ್ತ ಋತುವಿನಲ್ಲಿ ಫೋರ್ಸ್ ಇಂಡಿಯಾ ತೋರಿದ ಅತ್ಯುತ್ತಮ ಪ್ರದರ್ಶನ ಇದಾಗಿದೆ. ಆದರೆ ಈ ತಂಡದ ಇನ್ನೊಬ್ಬ ಚಾಲಕ ನಿಕೊ ಹಕೆನ್‌ಬರ್ಗ್ 12ನೇ ಸ್ಥಾನ ಪಡೆದು ಪಾಯಿಂಟ್ ಗಿಟ್ಟಿಸುವಲ್ಲಿ ವಿಫಲರಾದರು. 9ನೆಯವರಾಗಿ ಸ್ಪರ್ಧೆ ಆರಂಭಿಸಿದ್ದ ರೆಸ್ಟಾ ಅದ್ಭುತ ಚಾಲನಾ ಕೌಶಲ ಮೆರೆದರು.
ಅವರು ಫೆರ್ನಾಂಡೊ ಅಲೊನ್ಸೊ, ಲೂಯಿಸ್ ಹ್ಯಾಮಿಲ್ಟನ್, ಫೆಲಿಪ್ ಮಾಸಾ ಮತ್ತು ಮೈಕಲ್ ಶುಮೇಕರ್ ಅವರಂತಹ ಪ್ರಮುಖರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದರು. ಮಲೇಷ್ಯನ್ ಗ್ರ್ಯಾನ್ ಪ್ರಿನಲ್ಲಿ ರೆಸ್ಟಾ ಏಳನೇ ಸ್ಥಾನ ಪಡೆದಿದ್ದರು.
ರೆಡ್ ಬುಲ್ ತಂಡದ ಸೆಬಾಸ್ಟಿನ್ ವೆಟೆಲ್ ಬಹರೇನ್ ಗ್ರ್ಯಾನ್ ಪ್ರಿ ರೇಸ್ ಗೆದ್ದುಕೊಂಡರು. ಪ್ರಸಕ್ತ ಋತುವಿನಲ್ಲಿ ವೆಟೆಲ್‌ಗೆ ದೊರೆತ ಮೊದಲ ಗೆಲುವು ಇದಾಗಿದೆ. ಲೋಟಸ್ ರೆನಾಲ್ಟ್ ತಂಡದ ಕಿಮಿ ರೈಕೊನೆನ್ ಮತ್ತು ರೋಮನ್ ಗ್ರಾಸ್‌ಜಿನ್ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.