ಢಾಕಾ (ಪಿಟಿಐ): ವಿಶ್ವ ಕಪ್ ಕ್ರಿಕೆಟ್ ಪಂದ್ಯದ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದರಿಂದ ಬೇಸರ ವ್ಯಕ್ತಪಡಿಸಿರುವ ಬಾಂಗ್ಲಾದೇಶ ತಂಡದ ನಾಯಕ ಶಕೀಬ್-ಅಲ್-ಹಸನ್ ತಮ್ಮ ದೇಶದ ಕ್ರಿಕೆಟ್ ಪ್ರೇಮಿಗಳ ಕ್ಷವೆು ಯಾಚಿಸಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 28 ಓವರ್‌ಗಳಲ್ಲಿ ಕೇವಲ 78 ರನ್‌ಗಳಿಗೆ ಬಾಂಗ್ಲಾ ಆಲ್‌ಔಟ್ ಆಗಿ ಸೋಲು ಅನುಭವಿಸಿದೆ.
‘ಶನಿವಾರದ ಪಂದ್ಯದಲ್ಲಿ ನಾವು ಉತ್ತಮ ಆಟವಾಡಲಿಲ್ಲ. ತವರು ನೆಲದ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಿದೆವು. ಕಳೆದ 12 ತಿಂಗಳಿನಿಂದ ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ ಮತ್ತೆ ಈಗ ಹೀನಾಯ ಸೋಲು ಉಂಟಾಗಿದೆ. ಇದು ಕ್ರಿಕೆಟ್ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ. ಆದ್ದರಿಂದ ಅವರ ಕ್ಷವೆು ಕೋರುತ್ತೇನೆ’ ಎಂದು ಶಕೀಬ್ ಹೇಳಿದ್ದಾರೆ.
‘ಕ್ವಾರ್ಟರ್‌ಫೈನಲ್ ಹಂತಕ್ಕೆ ಪ್ರವೇಶ ಪಡೆಯಲು ಯಾವುದೇ ಅವಕಾಶಗಳಿಲ್ಲ. ರನ್ ಸರಾಸರಿಯು ಅತ್ಯಂತ ಕಡಿಮೆಯಿದೆ. ಆದ್ದರಿಂದ ಆ ಹಂತಕ್ಕೆ ಪ್ರವೇಶಿಸುವ ದಾರಿಯೂ ಇಲ್ಲದಂತಾಗಿದೆ. ತಂಡದ ಕಳಪೆ ಪ್ರದರ್ಶನಕ್ಕೆ ಬ್ಯಾಟಿಂಗ್ ವಿಭಾಗದಲ್ಲಿನ ಸೋಲು ಹೊರತು ಪಡೆಸಿದರೆ ಮತ್ಯಾವ ಕಾರಣವು ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
ಈ ಸೋಲಿನ ಮೂಲಕ ಬಾಂಗ್ಲಾ ವಿಶ್ವ ಕಪ್ ಕ್ರಿಕೆಟ್‌ನಲ್ಲಿ ಹೊರಬಿದ್ದ ಮೊದಲ ಆತಿಥೇಯ ತಂಡವಾಗಿದೆ. ವಿಶ್ವ ಕಪ್‌ನಲ್ಲಿ ಶಕೀಬ್ ಪಡೆ ತನ್ನ ಅಭಿಯಾನವನ್ನು ಅಂತ್ಯಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.