ಲೂಸಾನೆ, ಸ್ವಿಟ್ಜರ್‌ಲೆಂಡ್ (ಪಿಟಿಐ): ಭಾರತದ ಬಾಕ್ಸಿಂಗ್ ವಲಯ ಮತ್ತೊಮ್ಮೆ ಆಘಾತಕ್ಕೆ ಒಳ ಗಾಗಿದೆ. ಪದಾಧಿಕಾರಿಗಳ ವರ್ತನೆಯಿಂದ ಬೇಸತ್ತ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯು (ಎಐಬಿಎ) ಭಾರತ ಬಾಕ್ಸಿಂಗ್ ಫೆಡರೇಷನ್ (ಐಬಿಎಫ್) ಮೇಲೆ ನಿಷೇಧ ಹೇರಿದೆ. ಈ ಮೂಲಕ ಅಂತರರಾಷ್ಟ್ರೀಯ ಬಾಕ್ಸಿಂಗ್ ತೆಕ್ಕೆಯಿಂದ ಭಾರತ ಹೊರಬಿದ್ದಿದೆ.
‘ಭಾರತ ಬಾಕ್ಸಿಂಗ್ ಫೆಡರೇಷನ್‌ನ ಸದ್ಯದ ಪದಾಧಿಕಾರಿಗಳು ಬಾಕ್ಸಿಂಗ್ ಕ್ರೀಡೆಯ ಘನತೆ, ಗೌರವಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಈ ಫೆಡರೇಷನ್‌ನನ್ನು ನಾವು ಹೇಗೆ ಸಂಬಾಳಿಸಬೇಕು ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಎಐಬಿಎ ಹೇಳಿದೆ.
ಈ ಬೆಳವಣಿಗೆಯಿಂದ ಭಾರತದ ಬಾಕ್ಸರ್‌ಗಳು ಹಾಗೂ ಕೋಚ್‌ಗಳು ಅಂತರರಾಷ್ಟ್ರೀಯ ಸ್ಪರ್ಧೆ ಗಳಲ್ಲಿ ಪಾಲ್ಗೊಳ್ಳುವುದಕ್ಕೆ ಯಾವುದೇ ತೊಡಕಾಗದು. ಆದರೆ ಸಮಸ್ಯೆ ಬಗೆಹರಿಯುವವರೆಗೆ ಈ ಬಾಕ್ಸರ್‌ಗಳು ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ ಧ್ವಜದಡಿಯಲ್ಲಿ ಪಾಲ್ಗೊಳ್ಳಬೇಕು.
‘ಅಂತರರಾಷ್ಟ್ರೀಯ ಸಂಸ್ಥೆಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಭಾರತದ ಬಾಕ್ಸಿಂಗ್‌ನೊಂದಿಗೆ ಅಧಿಕೃತ ಸಂಬಂಧ ವನ್ನು ಕಡಿದುಕೊಳ್ಳಲಾಗಿದೆ. ಸೂಕ್ತ ಪರಿಶೀಲನೆಯ ಬಳಿಕ ಈ ಕಠಿಣ ನಿರ್ಧಾರಕ್ಕೆ ಬರಲಾಗಿದೆ’ ಎಂದು ಎಐಬಿಎ ತಿಳಿಸಿದೆ.
ಐಬಿಎಫ್‌್ಗೆ ಹೊಸದಾಗಿ ಚುನಾವಣೆ ನಡೆಯು ವವರೆಗೆ ನಿಷೇಧ ತೆರವುಗೊಳಿಸು ವುದಿಲ್ಲ ಎಂದು ಎಐಬಿಎ ಅಧ್ಯಕ್ಷ ಚಿಂಗ್ ಕುವೊ ವು ತಿಳಿಸಿದ್ದಾರೆ.
‘ನಿಷೇಧ ಹೇರುವ ಕಠಿಣ ನಿರ್ಧಾರ ತೆಗೆದುಕೊಂಡಿ ರುವುದಕ್ಕೆ ಖಂಡಿತವಾಗಿಯೂ ಬೇಸರವಾಗಿದೆ. ಆದರೆ ಬೇರೆ ವಿಧಿ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ಅಂತರರಾಷ್ಟ್ರೀಯ ಬಾಕ್ಸಿಂಗ್ ಫೆಡರೇಷನ್ ಕುಟುಂಬವು ಭಾರತವನ್ನು ಸದಾ ಒಂದು ಗೌರವಯುತ ಹಾಗೂ ಮುಖ್ಯ ದೇಶ ಎಂದು ಪರಿಗಣಿಸಿದೆ. ಆದರೆ ಆ ಫೆಡರೇಷನ್‌ನಲ್ಲಿರುವ ಸಮಸ್ಯೆಗಳನ್ನು ತಡೆದುಕೊಳ್ಳಲು ತುಂಬಾ ಕಷ್ಟವಾಗು ತ್ತಿದೆ. ಬಾಕ್ಸರ್‌ಗಳೂ ಸಮಸ್ಯೆ ಎದುರಿಸುತ್ತಿದ್ದಾರೆ. ಬಾಕ್ಸಿಂಗ್ ಕ್ರೀಡೆಯ ಘನತೆಗೆ ಧಕ್ಕೆಯುಂಟಾಗಿದೆ’ ಎಂದು ಚಿಂಗ್ ಕುವೊ ಅಭಿಪ್ರಾಯಪಟ್ಟಿದ್ದಾರೆ.
ಹಾಲಿ ಪದಾಧಿಕಾರಿಗಳನ್ನು ಒಪ್ಪಿಕೊಳ್ಳುವಂತೆ ಫೆಡರೇಷನ್ ಮನವೊಲಿಸಬೇಕು ಎಂದು ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಪ್ರಧಾನ ಕಾರ್ಯ ದರ್ಶಿ ರಾಜೀವ್ ಮೆಹ್ತಾ ಇತ್ತೀಚೆಗೆ ಎಐಬಿಎಗೆ ಪತ್ರ ಬರೆದಿದ್ದರು ಎನ್ನಲಾಗಿದೆ. ಇದರಿಂದ ಕೆರಳಿದ ಅಂತರರಾಷ್ಟ್ರೀಯ ಸಂಸ್ಥೆ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
2012ರ ಡಿಸೆಂಬರ್‌ನಿಂದಲೇ ಭಾರತ ಬಾಕ್ಸಿಂಗ್ ಫೆಡರೇಷನ್ ಅಮಾನತು ಶಿಕ್ಷೆ ಎದುರಿಸುತ್ತಿತ್ತು. ಕಾನೂನು ಬಾಹಿರ ಚುನಾವಣೆ ಕಾರಣ ಎಐಬಿಎ ಆಗ ಈ ಶಿಕ್ಷೆ ವಿಧಿಸಿತ್ತು. ಹೊಸದಾಗಿ ಚುನಾವಣೆ ನಡೆಸಲು ಆಗಲೇ ಸೂಚಿಸಲಾಗಿತ್ತು. ಅದಕ್ಕೆ ಬದಲಾಗಿ ನೂತನ ಅಧ್ಯಕ್ಷ ಅಭಿಷೇಕ್ ಮತೋರಿಯಾ ಹಾಗೂ ಕಾರ್ಯದರ್ಶಿ ರಾಜೇಶ್ ಭಂಡಾರಿ ಅವರನ್ನು ಒಪ್ಪಿಕೊಳ್ಳುವಂತೆ ಐಬಿಎಫ್ ಒತ್ತಡ ಹೇರಲು ಮುಂದಾಗಿತ್ತು. ಹಿಂದಿನ ಅಧ್ಯಕ್ಷ ಅಭಯ್ ಸಿಂಗ್ ಚೌಟಾಲ ಅವರ ಭಾವ ಅಭಿಷೇಕ್.
ಐಒಎ ಮೇಲಿನ ಅಮಾನತು ಶಿಕ್ಷೆಯನ್ನು ಐಒಸಿ ತೆರವುಗೊಳಿಸಿದಾಗ ಭಾರತ ಬಾಕ್ಸಿಂಗ್ ಫೆಡರೇಷನ್ ನನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವುದಾಗಿ ಅಂತರ ರಾಷ್ಟ್ರೀಯ ಸಂಸ್ಥೆ ಈ ಹಿಂದೆ ಭರವಸೆ ನೀಡಿತ್ತು. ಆದರೆ ಮತ್ತೆ ದೂರುಗಳು ಬಂದ ಕಾರಣ ನಿಷೇಧ ವಿಧಿಸುವ ನಿರ್ಧಾರಕ್ಕೆ ಮುಂದಾಗಿದೆ. ಐಬಿಎಫ್‌ನಲ್ಲೇ ಗುಂಪುಗಾರಿಕೆ ನಡೆಯುತ್ತಿದೆ ಎನ್ನಲಾಗಿದೆ.
ಈ ನಿರ್ಧಾರದ ಕಾರಣ ಐಬಿಎಫ್‌ಗೆ ಮತ್ತೆ ಚುನಾವಣೆ ನಡೆಸುವ ಅನಿವಾರ್ಯತೆ ಎದುರಾಗಿದೆ. ಆದರೆ ಹಾಲಿ ಪದಾಧಿಕಾರಿಗಳು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಚೌಟಾಲ ಬಣದ ವಿರೋಧಿಗಳಿಗೆ ಹೊಸ ಭರವಸೆಗೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.