ADVERTISEMENT

ಬಾಕ್ಸಿಂಗ್: ಕ್ವಾರ್ಟರ್ ಫೈನಲ್‌ಗೆ ವಿಜೇಂದರ್ ಸಿಂಗ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 19:30 IST
Last Updated 3 ಆಗಸ್ಟ್ 2012, 19:30 IST

ಲಂಡನ್: ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಭಾರತದ ಪದಕದ ಭರವಸೆ ಎನಿಸಿರುವ ವಿಜೇಂದರ್ ಸಿಂಗ್ ಅವರ ಗಮನಾರ್ಹ ಪ್ರದರ್ಶನ ಮುಂದುವರಿದಿದೆ. ಕ್ವಾರ್ಟರ್ ಫೈನಲ್ ತಲುಪಿರುವ ಅವರು ಒಂದು ಯಶಸ್ವಿ ಹೆಜ್ಜೆ ಇಟ್ಟರೆ ಪದಕ ಖಚಿತ.

ಎಕ್ಸ್‌ಸೆಲ್ ಅರೆನಾದಲ್ಲಿ ಗುರುವಾರ ರಾತ್ರಿ ನಡೆದ ಮಿಡ್ಲ್‌ವೇಟ್ (75 ಕೆ.ಜಿ.) ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ವಿಜೇಂದರ್ 16-15 ಪಾಯಿಂಟ್‌ಗಳಿಂದ ಅಮೆರಿಕದ ಟೆರೆಲ್ ಗೌಷಾ ಎದುರು ಗೆದ್ದರು.

ಎದುರಾಳಿಗೆ ಪಾಯಿಂಟ್ ಬಿಟ್ಟುಕೊಡದಂತೆ ಭಾರತದ ಬಾಕ್ಸರ್ ಆರಂಭದಿಂದಲೇ ರಕ್ಷಣೆಗೆ ಹೆಚ್ಚು ಒತ್ತು ನೀಡಿದರು. ಆದರೆ ಅಮೆರಿಕದ ಬಾಕ್ಸರ್ ಕೂಡ ಇಂಥದ್ದೇ ಶೈಲಿಗೆ ಮುಂದಾದರು. ಆಗ ಮೈ ಸಡಿಲಿಸಿದ ವಿಜೇಂದರ್ ಆಕ್ರಮಣಕಾರಿ ಪ್ರದರ್ಶನ ತೋರಿದರು. ಆದರೆ ಈ ಬೌಟ್ ನಿಕಟ ಪೈಪೋಟಿಗೆ ಕಾರಣವಾಯಿತು.

ಮೊದಲ ಬೌಟ್‌ನಲ್ಲಿ ವಿಜೇಂದರ್ 4-3 ಪಾಯಿಂಟ್‌ಗಳಿಂದ ಮುನ್ನಡೆ ಸಾಧಿಸಿದರು. ಇದು ಇಡೀ ಬೌಟ್‌ನಲ್ಲಿಯೇ `ಟರ್ನಿಂಗ್ ಪಾಯಿಂಟ್~ ಎನಿಸಿಕೊಂಡಿತು. ಕಾರಣ ಈ ಬೌಟ್‌ನ ಎರಡು ಹಾಗೂ ಮೂರನೇ ಸುತ್ತು ಸಮಬಲವಾದವು.

ವಿಜೇಂದರ್ ಅವರಿಗಿಂತ ಅಮೆರಿಕದ ಗೌಷಾ ದೈಹಿಕವಾಗಿ ಬಲಿಷ್ಠವಾಗಿದ್ದರು. ಆದರೆ ನೀಳ ಕೈಗಳ ವಿಜೇಂದರ್ ಬಲಿಷ್ಠ ಪಂಚ್‌ಗಳ ಮೂಲಕ ಗೌಷಾ ಅವರ ಸದ್ದಡಗಿಸಿದರು. ಎಕ್ಸ್‌ಸೆಲ್ ಅರೆನಾದಲ್ಲಿ ಬಹಳ ಸಂಖ್ಯೆಯಲ್ಲಿ ಸೇರಿದ್ದ ಭಾರತದ ಅಭಿಮಾನಿಗಳ ಪ್ರೋತ್ಸಾಹದ ನೆರವು ವಿಜೇಂದರ್‌ಗೆ ಲಭಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.