ADVERTISEMENT

ಬಾಕ್ಸಿಂಗ್: ವಿಜೇಂದರ್ ಕನಸು ಭಗ್ನ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2012, 19:30 IST
Last Updated 7 ಆಗಸ್ಟ್ 2012, 19:30 IST

ಲಂಡನ್: ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಪದಕ ಗೆಲ್ಲುವ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಅವರ ಕನಸು ಭಗ್ನಗೊಂಡಿದೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕದ ಭರವಸೆ ಮೂಡಿಸಿದ್ದ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಂಡು ನಿರ್ಗಮಿಸಿದರು.

ಎಕ್ಸ್‌ಸೆಲ್ ಅರೆನಾದಲ್ಲಿ ಸೋಮವಾರ ರಾತ್ರಿ ನಡೆದ ಮಿಡ್ಲ್‌ವೇಟ್ (75 ಕೆ.ಜಿ.) ವಿಭಾಗದ ಎಂಟರ ಘಟ್ಟದ ಸ್ಪರ್ಧೆಯಲ್ಲಿ ವಿಜೇಂದರ್ 13-17 ಪಾಯಿಂಟ್‌ಗಳಿಂದ ಉಜ್ಬೆಕಿಸ್ತಾನದ ಅಬ್ಬೊಸ್ ಅತೊಯೇವ್ ಎದುರು ಪರಾಭವಗೊಂಡರು. 2010ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸರ್ 7-0ರಲ್ಲಿ ಅತೊಯೇವ್ ಎದುರು ಗೆದ್ದಿದ್ದರು. ಆದರೆ ದೊಡ್ಡ ವೇದಿಕೆಯನ್ನು ಉಜ್ಬೆಕಿಸ್ತಾನದ ಬಾಕ್ಸರ್ ಆ ಸೇಡು ತೀರಿಸಿಕೊಂಡರು.

81 ಕೆ.ಜಿ. ವಿಭಾಗದಲ್ಲಿ ಈ ಮೊದಲು ಚಾಂಪಿಯನ್ ಆಗಿದ್ದ ಅತೊಯೇವ್ ಅಮೋಘ ಪ್ರದರ್ಶನದ ಮೂಲಕ ಭಾರತದ ಬಾಕ್ಸರ್ ಮೇಲೆ ಪಾರಮ್ಯ ಮೆರೆದರು. ಆರಂಭದ ಸುತ್ತಿನಲ್ಲಿ ಮಾತ್ರ ವಿಜೇಂದರ್ ಸಮಬಲದ ಪೈಪೋಟಿ ತೋರಿದರು. ಈ ಸುತ್ತು 3-3ರಲ್ಲಿ ಸಮಬಲವಾಯಿತು.

ADVERTISEMENT

ಆದರೆ ಎರಡನೇ ಸುತ್ತಿನ ಪೈಪೋಟಿಯಲ್ಲಿ ವಿಜೇಂದರ್ 5-7ರಲ್ಲಿ ಹಿನ್ನಡೆ ಕಂಡಿದ್ದು ಮಾರಕವಾಗಿ ಪರಿಣಮಿಸಿತು. ವಿಜೇಂದರ್ ಅವರಿಗಿಂತ ದೈಹಿಕವಾಗಿ ಬಲಿಷ್ಠವಾಗಿದ್ದ ಉಜ್ಬೆಕಿಸ್ತಾನದ ಬಾಕ್ಸರ್ ನಿಖರ ಮುಷ್ಟಿ ಪ್ರಹಾರದ ಮೂಲಕ ಗಮನ ಸೆಳೆದರು. ಮೂರನೇ ಹಾಗೂ ನಿರ್ಣಾಯಕ ಸುತ್ತಿನಲ್ಲೂ 7-5ರಲ್ಲಿ ಅತೊಯೇವ್ ಮುನ್ನಡೆ ಕಾಯ್ದುಕೊಂಡರು. ಈ ಕಾರಣ ಅವರು ಸೆಮಿಫೈನಲ್‌ಗೆ ಮುನ್ನಡೆದರು.

ವಿಜೇಂದರ್ ಕ್ವಾರ್ಟರ್ ಫೈನಲ್‌ನಲ್ಲಿ ಜಯಿಸಿದ್ದರೆ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗುತಿತ್ತು. ಆಗ ಒಲಿಂಪಿಕ್ಸ್‌ನಲ್ಲಿ ಸತತ ಎರಡು ಪದಕ ಜಯಿಸಿದ ಖ್ಯಾತಿ ವಿಜೇಂದರ್ ಅವರದಾಗುತಿತ್ತು. ಆದರೆ 26 ವರ್ಷ ವಯಸ್ಸಿನ ವಿಜೇಂದರ್ ಅವರ ಅದೃಷ್ಟ ಕೈಕೊಟ್ಟಿತು. `ಬಾಕ್ಸಿಂಗ್ ತೊಟ್ಟಿಲು~ ಎನಿಸಿರುವ ಭಿವಾನಿಯ ವಿಜೇಂದರ್ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ 16-15 ಪಾಯಿಂಟ್‌ಗಳಿಂದ ಅಮೆರಿಕದ ಟೆರೆಲ್ ಗೌಷಾ ಎದುರು ಗ್ದ್ದೆದಿದ್ದರು.

ಇಂದು ಮೇರಿ, ದೇವೇಂದ್ರೂ ಕಣಕ್ಕೆ: ಈಗಾಗಲೇ ಪದಕ ಖಚಿತ ಪಡಿಸಿಕೊಂಡಿರುವ ಭಾರತದ ಮೇರಿ ಕೋಮ್ ಬುಧವಾರ ನಡೆಯಲಿರುವ ಮಹಿಳೆಯರ 51 ಕೆ.ಜಿ. ವಿಭಾಗದ ಬಾಕ್ಸಿಂಗ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ನಿಕೋಲಾ ಆ್ಯಡಮ್ಸ ಅವರನ್ನು ಎದುರಿಸಲಿದ್ದಾರೆ.

ಪುರುಷರ ಫ್ಲೈವೇಟ್ (49 ಕೆ.ಜಿ.) ವಿಭಾಗದ ಕ್ವಾರ್ಟರ್ ಫೈನಲ್ ಬೌಟ್‌ನಲ್ಲಿ ಎಲ್.ದೇವೇಂದ್ರೂ ಸಿಂಗ್ ಅವರು ಐರ್ಲೆಂಡ್‌ನ ಪ್ಯಾಡಿ ಬೇರ್ನ್ಸ್ ಎದುರು ಪೈಪೋಟಿ ನಡೆಸಲಿದ್ದಾರೆ. ಈ ಹೋರಾಟದಲ್ಲಿ ದೇವೇಂದ್ರೂ ಗೆದ್ದರೆ ಒಂದು ಪದಕ ಖಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.