ADVERTISEMENT

ಬಿಸಿಸಿಐನಿಂದ 413 ಕೋಟಿ ರೂ ತೆರಿಗೆ ಬಾಕಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 9:40 IST
Last Updated 19 ಫೆಬ್ರುವರಿ 2012, 9:40 IST

ನವದೆಹಲಿ, (ಪಿಟಿಐ): ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ 413 ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ಇಲಾಖೆಗೆ ಸಂದಾಯಮಾಡಬೇಕಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಮಾಹಿತಿ ಹಕ್ಕು ಕಾಯಿದೆ ಅನ್ವಯ ಕೇಳಿದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ, ಈ ವಿಷಯ ತಿಳಿಸಿರುವ ಆದಾಯ ತೆರಿಗೆ ಇಲಾಖೆಯು,  2009-10 ನೇ ಸಾಲಿನಲ್ಲಿ ಇಲಾಖೆಗೆ ಒಪ್ಪಿಸಿದ ಆದಾಯದ ಲೆಕ್ಕಾಚಾರದ ಪ್ರಕಾರ ಬಿಸಿಸಿಐ   413 ಕೋಟಿ ತೆರಿಗೆಯನ್ನು ಪಾವತಿಸಬೇಕಿತ್ತು, ಆದರೆ ಅದು ಕೇವಲ 41 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಿದೆ ಎಂದು ಸ್ಪಷ್ಟಪಡಿಸಿದೆ.

ಬಿಸಿಸಿಐಯು ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುವ ಉದ್ದೇಶದಿಂದ ತಾನೊಂದು ದತ್ತಿ ಸಂಸ್ಥೆಯೆಂದು ಹೇಳಿಕೊಳ್ಳುತ್ತಿದೆ. ಆದರೆ, ಆ ವಿನಾಯಿತಿಯನ್ನು ಈಗ ರದ್ದುಪಡಿಸಲಾಗಿದೆ. ಏಕೆಂದರೆ, ಬಿಸಿಸಿಐನ ಆದಾಯವೀಗ ವ್ಯವಹಾರಿಕ ಆದಾಯವಾಗಿದೆ. 

 ಕಳೆದ 2009-10ರ ಸಾಲಿನಲ್ಲಿ ಬಿಸಿಸಿಐ 964 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿದೆ. ಅದರ ಪ್ರಕಾರ, ಕ್ರಿಕೆಟ್ ಸಂಸ್ಥೆ ಇಲಾಖೆಗೆ 413 ಕೋಟಿ  ರೂಪಾಯಿ ತೆರಿಗೆ ಪಾವತಿಸಬೇಕು. ಆದರೆ ಇದುವರೆಗೆ ಬಿಸಿಸಿಐನಿಂದ ಕೇವಲ 41.91 ಕೋಟಿ ತೆರಿಗೆ ಇಲಾಖೆಗೆ ಸಂದಾಯವಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಷ್ ಅಗರ್ವಾಲ್ ಅವರಿಗೆ ನೀಡಿದ ಉತ್ತರದಲ್ಲಿ ತಿಳಿಸಲಾಗಿದೆ.

ಬಿಸಿಸಿಐ ನ 2010-11 ಮತ್ತು 2011-12ರ ಅವಧಿಯ ಆದಾಯದ ಲೆಕ್ಕಾಚಾರ ಬಾಕಿ ಉಳಿದಿದೆ ಎನ್ನಲಾಗಿದೆ.

ADVERTISEMENT

ಬಿಸಿಸಿಐ ಬಾಕಿ ಉಳಿಸಿಕೊಂಡಿರುವ  373 ಕೋಟಿ ರೂಪಾಯಿ ತೆರಿಗೆ ವಸೂಲಿಗೆ ಇಲಾಖೆ ಸೂಕ್ತ ಕ್ರಮಗಳನ್ನು  ಜರುಗಿಸಬೇಕೆಂದು ಸುಭಾಷ್ ಅಗರ್ವಾಲ್ ಒತ್ತಾಯಿಸಿದ್ದಾರೆ.  

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.