ADVERTISEMENT

ಬಿಸಿಸಿಐ ಪದಚ್ಯುತ ಅಧ್ಯಕ್ಷ ಅನುರಾಗ್ ನಿರಾಳ

ಪಿಟಿಐ
Published 14 ಜುಲೈ 2017, 19:30 IST
Last Updated 14 ಜುಲೈ 2017, 19:30 IST
ಅನುರಾಗ್‌
ಅನುರಾಗ್‌   

ನವದೆಹಲಿ: ಬಿಸಿಸಿಐ ಪದಚ್ಯುತ ಅಧ್ಯಕ್ಷ ಅನುರಾಗ್ ಠಾಕೂರ್ ಅವರ ಮೇಲೆ ಇದ್ದ ನ್ಯಾಯಾಂಗನಿಂದನೆ ಮತ್ತು ಕ್ರಿಮಿನಲ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ಠಾಕೂರ್ ನಿರಾಳ ಗೊಂಡಿದ್ದಾರೆ.

ಠಾಕೂರ್ ಅವರು ಬೇಷರತ್ ಕ್ಷಮೆ ಯಾಚಿಸಿದ್ದರಿಂದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು  ಈ ತೀರ್ಪು ಪ್ರಕಟಿಸಿತು.

ಅವರು ಹೋದ ವರ್ಷ ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದ ಆರೋಪ ಎದುರಿಸುತ್ತಿದ್ದರು. ಹೋದ ಜನವರಿ 2ರಂದು ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೋರ್ಟ್‌ ವಜಾ ಮಾಡಿತ್ತು. ಅವರ ವಿಚಾರಣೆ ನಡೆಸಿದ್ದ ಪೀಠವು ‘ಬೇಷರತ್ ಕ್ಷಮೆ’ ಕೇಳುವಂತೆ ಸೂಚಿಸಿತ್ತು.

ADVERTISEMENT

‘ಹೃದಯಪೂರ್ವಕವಾಗಿ ಕ್ಷಮೆ ಕೇಳುತ್ತಿದ್ದೇನೆ. ಮಾಡಿರುವ ತಪ್ಪನ್ನು ಕ್ಷಮಿಸಬೇಕೆಂದು ನ್ಯಾಯಾಲಯವನ್ನು ವಿನಮ್ರವಾಗಿ ಕೇಳಿಕೊಳ್ಳುತ್ತಿದ್ದೇನೆ’ ಎಂದು ಠಾಕೂರ್ ಪರ ವಕೀಲರಾದ ಪಿ.ಎಸ್. ಪಟವಾಲಿಯಾ ಅವರು ಪ್ರಮಾಣ ಪತ್ರ ಸಲ್ಲಿಸಿದ್ದರು.

‘ಠಾಕೂರ್ ಮೇಲೆ ಇರುವ ನ್ಯಾಯಾಂಗನಿಂದನೆ ಮತ್ತು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ ಆರೋಪಗಳನ್ನು ಕೈಬಿಡಲಾಗಿದೆ. ಸಿಆರ್‌ಪಿಸಿ ಸೆಕ್ಷನ್ 340ರ ಪ್ರಕಾರ ಅವರ ಮೇಲೆ ಕ್ರಮ ಜರುಗಿಸಬೇಕೆಂದು ನೀಡಲಾಗಿದ್ದ ಸೂಚನೆಯನ್ನೂ ಹಿಂತೆಗೆದುಕೊಳ್ಳಲಾಗಿದೆ’ ಎಂದು ಪೀಠವು ಹೇಳಿತು.

‘ಠಾಕೂರ್ ಅವರು ತಮ್ಮ ಪ್ರಮಾಣ ಪತ್ರ ಸಲ್ಲಿಸಿರುವ ಕಾರಣ ಈ ಪ್ರಕರಣದ ಕಡತವನ್ನು ಮುಕ್ತಾಯಗೊಳಿಸಬಹುದು’ ಎಂದು ಇದೇ ಸಂದರ್ಭದಲ್ಲಿ ಹಾಜರಿದ್ದ ಕೋರ್ಟ್ ಪರ ಅಮಿಕಸ್ ಕ್ಯೂರಿ ಗೋಪಾಲ್ ಸುಬ್ರಮಣಿಯಂ ನೀಡಿದ ಹೇಳಿಕೆಯನ್ನೂ ನ್ಯಾಯಪೀಠವು ದಾಖಲಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.