ADVERTISEMENT

ಬುದ್ಧಟ್ರ್ಯಾಕ್‌ನಲ್ಲಿ ವೆಟೆಲ್ ಗೆದ್ದ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2011, 19:30 IST
Last Updated 30 ಅಕ್ಟೋಬರ್ 2011, 19:30 IST

ಗ್ರೇಟರ್ ನೊಯಿಡಾ: ಅಬ್ಬಬ್ಬಾ ಎಂದು ಹುಬ್ಬೇರಿಸಿದವರೇ ಹೆಚ್ಚು. ಗುರುಗುಡುವ ಕಾರುಗಳ ಅಬ್ಬರದ ಸದ್ದಿಗೆ `ಅಯ್ಯೋ...!~ ಎನ್ನುತ್ತಲೇ ಕೈಗಳನ್ನು ಕಿವಿಗೊತ್ತಿಕೊಂಡವರ ಸಂಖ್ಯೆಯೂ ಅಪಾರ. `ರುಮ್...ರುಮ್...~ ರೇಸಿಂಗ್ ವೇಗಕ್ಕೆ ತಮ್ಮ ಧ್ವನಿಗೂಡಿಸುವ ಸಾಹಸ ಮಾಡಿದವರು ಸಾವಿರಾರು. ಹುಲ್ಲು ಹಾಸಿನ ದಿಬ್ಬದ ಮೇಲೆ, ಎತ್ತರದ ಗ್ಯಾಲರಿಯಲ್ಲಿ, ಮೈಲಿ ಮೈಲಿ ದೂರದ ಟ್ರ್ಯಾಕ್ ಸುತ್ತ ನೋಡಿದತ್ತ ಎಲ್ಲೆಡೆ ಕಣ್ಣರಳಿಸಿದ ಬೆರಗು ಮುಖಗಳು.

ಹೌದು; ಭಾರತೀಯರಿಗೆಲ್ಲಾ ಬುದ್ಧ ಇಂಟರ್‌ನ್ಯಾಷನಲ್ ಟ್ರ್ಯಾಕ್‌ನಲ್ಲಿ ಕಾಣಿಸಿದ್ದೆಲ್ಲಾ ಅದ್ಭುತ. ದೇಶದಲ್ಲಿಯೇ ಎಫ್-1 ನೋಡಿದ ಸಂಭ್ರಮ. ಮೊಟ್ಟ ಮೊದಲ ಬಾರಿಗೆ ನಡೆದ ಇಂಡಿಯನ್ ಗ್ರ್ಯಾನ್ ಪ್ರಿ ರ‌್ಯಾಲಿಗೆ ಸಾಕ್ಷಿಯಾದ ಸಂತಸ. ಗೆದ್ದಿದ್ದು ರೆಡ್‌ಬುಲ್ ರೆನಾಲ್ಟ್ ತಂಡದ ಚಾಲಕನಾದ ಜರ್ಮನಿಯ ಸೆಬಾಸ್ಟಿಯನ್ ವೆಟೆಲ್. ಆದರೂ ವಿಜಯ ಸಾಧಿಸಿದ್ದು ಭಾರತ! ಕಾರಣ ವಿಶ್ವವೇ ಈ ದೇಶದ ಕಡೆಗೆ ಅಚ್ಚರಿಯಿಂದ ನೋಡಿತು. ಜಗತ್ತೇ ಮೆಚ್ಚುವ ರೀತಿಯಲ್ಲಿ ಫಾರ್ಮುಲಾ ಒನ್ ಆಯೋಜಿಸಿದ ಶ್ರೇಯ ನಮ್ಮ ನಾಡಿನದ್ದಾಯಿತು.



ಐತಿಹಾಸಿಕ ಘಟನೆ ಎನ್ನುವಂತೆ ನಿರೀ ಕ್ಷಿಸಲಾಗಿದ್ದ ಕ್ಷಣವದು. ಆದ್ದರಿಂದಲೇ  ಗ್ಲಾಮರ್ ಲೋಕದ ಜನರು ಅಲ್ಲಿದ್ದರು. ಅಷ್ಟೇ ಏಕೆ;  ಕ್ರಿಕೆಟ್ ದಿಗ್ಗಜರೂ ಹಾಜರ್. ಸಚಿನ್ ತೆಂಡೂಲ್ಕರ್ ಅವರಿಗಂತೂ ರೇಸ್ ಮುಕ್ತಾಯದಲ್ಲಿ ಧ್ವಜ ಬೀಸುವ ಗೌರವ. ಶಾರೂಖ್ ಖಾನ್  ಫೋರ್ಸ್ ಇಂಡಿಯಾ ಬೆಂಬಲಕ್ಕೆ ನಿಂತರು.  ಬುದ್ಧ ಟ್ರ್ಯಾಕ್‌ನಲ್ಲಿ ಗೆದ್ದ ವೆಟೆಲ್ ತಮ್ಮ ಕಾರ್‌ನಿಂದ ಎದ್ದು ಬಂದಾಗ ಮೈಲಿಗಳ ದೂರದವರೆಗೆ ಚಪ್ಪಾಳೆ ಸದ್ದಿನ ಮಾರ್ದನಿ. 1:30:35.002 ಸೆ. ನೊಂದಿಗೆ ರೇಸ್ ಪೂರ್ಣಗೊಳಿಸುವ ಮೂಲಕ ಗಮನ ಸೆಳೆದ ಜರ್ಮನಿಯ ಈ ಚಾಲಕನಿಗೆ ವಿಶೇಷ ಸಾಧನೆಯ ಸಂಭ್ರಮ. 

ಭಾರತದಲ್ಲಿ ನಡೆದ ಮೊಟ್ಟ ಮೊದಲ ಗ್ರ್ಯಾನ್ ಪ್ರಿ ಗೆದ್ದ ಹಿರಿಮೆಯ ಗರಿ. ಜೊತೆಗೆ ಅತ್ಯಂತ ವೇಗದ ಚಾಲಕ ಎನ್ನುವ ದಾಖಲೆ ಕಿರೀಟ. ಅದಕ್ಕಿಂತ ಮುಖ್ಯವಾಗಿ ವಿಶ್ವದ ಯಶಸ್ವಿ ರೇಸರ್‌ಗಳ ಪಟ್ಟಿಯಲ್ಲಿ ಮೈಕಲ್ ಶೂಮ್ಯಾಕರ್‌ಗೆ ಪೈಪೋಟಿ ನೀಡುವಷ್ಟು ಹತ್ತಿರಕ್ಕೆ ಸರಿದು ನಿಂತ ಸಂತಸ. 2011ರ ರೇಸಿಂಗ್ ಋತುವಿನಲ್ಲಿ ಹನ್ನೊಂದನೇ ಬಾರಿ ಅಗ್ರಸ್ಥಾನ ಪಡೆದ ಹೆಮ್ಮೆಯೊಂದಿಗೆ ಸೆಬಾಸ್ಟಿಯನ್ ಬೀಗಿದರು.

ಇಲ್ಲಿ ಅವರಿಗೆ ನಿಕಟ ಪೈಪೋಟಿಯೇನೂ ಎದುರಾಗಲಿಲ್ಲ. ಮೆಕ್‌ಲಾರೆನ್ ಮರ್ಸಿಡಿಸ್‌ನ ಜೆನ್ಸನ್ ಬಟನ್ ಹಾಗೂ ಫೆರಾರಿ ತಂಡದ ಫೆರ್ನಾಂಡೊ ಅಲೊನ್ಸೊ ಕ್ರಮವಾಗಿ ಎರಡನೇ ಸ್ಥಾನ ಪಡೆದರೂ +8.4 ಸೆ. ಹಾಗೂ +24.3 ಸೆ. ನಿಂದ ಹಿಂದೆ ಉಳಿದರು. ಭಾರತದ ತಂಡವಾದ ಸಹಾರಾ ಫೋರ್ಸ್ ಇಂಡಿಯಾದ ಅಡ್ರಿಯಾನ್ ಸುಟಿಲ್ ಒಂದು ಲ್ಯಾಪ್ ಹಿಂದುಳಿದು ಒಂಬತ್ತನೇ ಸ್ಥಾನಕ್ಕೆ ಸಮಾಧಾನಪಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT