ADVERTISEMENT

ಬೆಂಗಳೂರಿನಲ್ಲಿ ಇಂದು ಏಷ್ಯಾ ಕಪ್‌ ಅರ್ಹತಾ ಪಂದ್ಯ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 19:31 IST
Last Updated 10 ಅಕ್ಟೋಬರ್ 2017, 19:31 IST
ಏಷ್ಯಾ ಕಪ್ ಫುಟ್‌ಬಾಲ್‌ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬುಧವಾರ ಮಕಾವ್ ಎದುರು ಸೆಣಸಲಿರುವ ಭಾರತ ಫುಟ್‌ಬಾಲ್ ತಂಡದ ಆಟಗಾರರು ಮಂಗಳವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು –ಪ್ರಜಾವಾಣಿ ಚಿತ್ರ/ಬಿ.ಎಚ್‌.ಶಿವಕುಮಾರ್‌
ಏಷ್ಯಾ ಕಪ್ ಫುಟ್‌ಬಾಲ್‌ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬುಧವಾರ ಮಕಾವ್ ಎದುರು ಸೆಣಸಲಿರುವ ಭಾರತ ಫುಟ್‌ಬಾಲ್ ತಂಡದ ಆಟಗಾರರು ಮಂಗಳವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು –ಪ್ರಜಾವಾಣಿ ಚಿತ್ರ/ಬಿ.ಎಚ್‌.ಶಿವಕುಮಾರ್‌   

ಬೆಂಗಳೂರು: ಮೂರು ಪಂದ್ಯಗಳಲ್ಲಿ ಜಯದ ತೋರಣ ಕಟ್ಟಿದ ಭಾರತ ಫುಟ್‌ಬಾಲ್ ತಂಡ ಅಜೇಯ ಓಟವನ್ನು ಮುಂದುವರಿಸಲು ಸಜ್ಜಾಗಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಏಷ್ಯಾ ಕಪ್ ಫುಟ್‌ಬಾಲ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ತಂಡ ಮಕಾವ್‌ ಎದುರು ಸೆಣಸಲಿದೆ.

’ಎ’ ಗುಂಪಿನ ಕಳೆದ ಮೂರು ಪಂದ್ಯಗಳಲ್ಲೂ ಗೆದ್ದು ಬೀಗುತ್ತಿರುವ ಭಾರತ ಬುಧವಾರ ಗೆದ್ದರೆ 2019ರ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಮ್ಯಾನ್ಮಾರ್ ಎದುರು 1–0ಯಿಂದ ಗೆದ್ದಿದ್ದ ಭಾರತ ನಂತರ ಕಿರ್ಗಿಸ್ ಗಣರಾಜ್ಯವನ್ನು ಕೂಡ ಇದೇ ಅಂತರದಲ್ಲಿ ಮಣಿಸಿತ್ತು.

ಸೆಪ್ಟೆಂಬರ್ ಐದರಂದು ಮಕಾವ್ ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯರನ್ನು 2–0ಯಿಂದ ಸೋಲಿಸಿತ್ತು. ಈ ವರೆಗೆ ಯಾವುದೇ ತಂಡಕ್ಕೆ ಗೋಲು ಬಿಟ್ಟುಕೊಡದ ಭಾರತ ಉದ್ಯಾನ ನಗರಿಯಲ್ಲಿ ಸುಲಭ ಗೆಲುವಿನ ವಿಶ್ವಾಸದಲ್ಲಿದೆ.

ADVERTISEMENT

ಸುನಿಲ್‌ ಚೆಟ್ರಿ, ಜೆಜೆ ಲಾಲ್‌ಪೆಖ್ಲುವಾ, ಹೋಲಿಚರಣ್‌ ನರ್ಜರಿ ಮತ್ತು ಉದಾಂತ ಸಿಂಗ್ ಎದುರಾಳಿಗಳ ಡಿಫೆಂಡರ್‌ಗಳನ್ನು ಎದುರಿಸಲು ಸಜ್ಜಾಗಿದ್ದಾರೆ.

ಫುಲ್‌ಬ್ಯಾಕ್‌ ಆಟಗಾರರಾದ ನಾರಾಯಣ್‌ ದಾಸ್‌ ಮತ್ತು ಪ್ರೀತಮ್‌ ಕೊತಾಲ್‌ ಚುರುಕಿನ ಕ್ರಾಸ್‌ಗಳ ಮೂಲಕ ಮಕಾವ್‌ ತಂಡದ ಆಟಗಾರರನ್ನು ಗೊಂದಲಕ್ಕೆ ಸಿಲುಕಿಸಲು ಸಮರ್ಥರಾಗಿದ್ದಾರೆ.ಕಳೆದ ಪಂದ್ಯದಲ್ಲಿ ಬೆಂಚು ಕಾದಿದ್ದ ರಾಬಿನ್ ಸಿಂಗ್ ಮತ್ತು ನಾರಾಯಣ್ ದಾಸ್‌ ಈ ಪಂದ್ಯದಲ್ಲಿ ಅವಕಾಶ ಗಳಿಸುವ ಸಾಧ್ಯತೆ ಇದ್ದು ಸ್ಟ್ರೈಕರ್‌ ಬಲ್ವಂತ್‌ ಸಿಂಗ್‌ ಅವರನ್ನು ತಂಡ ಕಣಕ್ಕೆ ಇಳಿಸುವುದೇ ಇಲ್ಲವೇ ಎಂಬುದು ಕುತೂಹಲ ಕೆರಳಿಸಿದೆ.

ಮತ್ತೆ ಫುಟ್‌ಬಾಲ್‌–ಅಥ್ಲೆಟಿಕ್ಸ್‌ ಗೊಂದಲ : ಕಂಠೀರವ
ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಫುಟ್‌ಬಾಲ್ ಮತ್ತು ಅಥ್ಲೆಟಿಕ್ಸ್‌ ನಡುವೆ ಗೊಂದಲ ಉಂಟಾಗಿದೆ. ಏಷ್ಯಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ಪಂದ್ಯ ಬುಧವಾರ ನಡೆಯಲಿದೆ. ಮಂಗಳವಾರದಿಂದ ಇಲ್ಲಿ ಬೆಂಗಳೂರು ವಿ.ವಿ ಕ್ರೀಡಾಕೂಟ ನಡೆಯುತ್ತಿದೆ. ಭಾರತ ತಂಡದ ಆಟಗಾರರಿಗೆ ಮಂಗಳವಾರ ಅಭ್ಯಾಸ ಮಾಡಲು ತೊಂದರೆಯಾಯಿತು. ಬುಧವಾರ ಸಂಜೆಯವರೆಗೂ ಕ್ರೀಡಾಕೂಟ ಇರುವುದರಿಂದ ರಾತ್ರಿ 7.30ರ ಫುಟ್‌ಬಾಲ್‌ ಪಂದ್ಯದ ಸಿದ್ಧತೆಗಳಿಗೆ ಅಡ್ಡಿಯಾಗುವ ಆತಂಕ ಕಾಡಿದೆ.

ಪಂದ್ಯ ಆರಂಭ: ರಾತ್ರಿ 7.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.