ADVERTISEMENT

ಬೆಂಗಳೂರು ಎಫ್‌ಸಿಗೆ ಜೆಮ್‌ಷೆಡ್‌ಪುರ ಸವಾಲು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಇಂದು ಪುಣೆ–ಗೋವಾ ತಂಡಗಳ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 19:30 IST
Last Updated 24 ಫೆಬ್ರುವರಿ 2018, 19:30 IST
ಬೆಂಗಳೂರು ಎಫ್‌ಸಿಗೆ ಜೆಮ್‌ಷೆಡ್‌ಪುರ ಸವಾಲು
ಬೆಂಗಳೂರು ಎಫ್‌ಸಿಗೆ ಜೆಮ್‌ಷೆಡ್‌ಪುರ ಸವಾಲು   

ಪುಣೆ: ಈಗಾಗಲೇ ಪ್ಲೇ ಆಫ್‌ ಹಂತ ತಲುಪಿರುವ ಬೆಂಗಳೂರು ಎಫ್‌ಸಿ ತಂಡ ಭಾನುವಾರ ನಡೆಯುವ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಪಂದ್ಯದಲ್ಲಿ ಜೆಮ್‌ಷೆಡ್‌ಪುರ ಎಫ್‌ಸಿ ಎದುರು ಪೈಪೋಟಿ ನಡೆಸಲಿದೆ.

ಅಗ್ರಸ್ಥಾನ ಉಳಿಸಿಕೊಳ್ಳುವ ಗುರಿಯನ್ನು ಬೆಂಗಳೂರು ತಂಡ ಹೊಂದಿದೆ. ಆಡಿದ 16 ಪಂದ್ಯಗಳಲ್ಲಿ ಈ ತಂಡ 11ರಲ್ಲಿ ಗೆದ್ದಿದೆ. ಕೇವಲ ಒಂದು ಪಂದ್ಯದಲ್ಲಿ ಮಾತ್ರ ಡ್ರಾ ಮಾಡಿಕೊಂಡಿದೆ. ಒಟ್ಟು 34 ಪಾಯಿಂಟ್ಸ್‌ಗಳು ಈ ತಂಡದ ಬಳಿ ಇವೆ.

ಪ್ಲೇ ಆಫ್‌ ತಲುಪಲು ಜೆಮ್‌ ಷೆಡ್‌ಪುರ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. 16 ಪಂದ್ಯಗಳಲ್ಲಿ ಈ ತಂಡ 7ರಲ್ಲಿ ಗೆದ್ದಿದೆ. ಐದು ಪಂದ್ಯ ಡ್ರಾ ಆಗಿದ್ದರೆ, ನಾಲ್ಕು ಪಂದ್ಯ ಸೋತಿದೆ. 26 ಪಾಯಿಂಟ್ಸ್‌ಗಳಿಂದ ನಾಲ್ಕನೇ ಸ್ಥಾನದಲ್ಲಿದೆ.

ADVERTISEMENT

ಪುಣೆಗೆ ಪ್ಲೇ ಆಫ್‌ ಕನಸು: ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಎಫ್‌ಸಿ ಪುಣೆ ಸಿಟಿ ತಂಡಕ್ಕೆ ಪ್ಲೇ ಆಫ್‌ ಹಂತ ತಲುಪಲು ಈ ಪಂದ್ಯದಲ್ಲಿ ಉತ್ತಮ ಅವಕಾಶ ಸಿಕ್ಕಿದೆ. ಎಫ್‌ಸಿ ಗೋವಾ ಎದುರಿನ ಪಂದ್ಯ ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೂ ಪ್ಲೇ ಆಫ್‌ ತಲುಪುವುದು ಖಚಿತವಾಗಿದೆ. ಸೋತರೆ ಉಳಿದ ಪಂದ್ಯಗಳ ಫಲಿತಾಂಶದ ಮೇಲೆ ಮುಂದಿನ ಹಂತ ನಿರ್ಧಾರವಾಗಲಿದೆ.

ಪುಣೆ ಆಡಿದ 16 ಪಂದ್ಯಗಳಲ್ಲಿ 9ರಲ್ಲಿ ಗೆದ್ದಿದೆ. 29 ಪಾಯಿಂಟ್ಸ್‌ಗಳು ಈ ತಂಡದ ಬಳಿ ಇವೆ. ಪುಣೆ ಎದುರು ಗೆದ್ದರೂ ಗೋವಾ ತಂಡದ ಪ್ಲೇ ಆಫ್‌ ತಲುಪುವ ಹಾದಿ ಕಠಿಣವಾಗಿದೆ. ಈ ತಂಡ 21 ಪಾಯಿಂಟ್ಸ್‌ಗಳಿಂದ ಏಳನೇ ಸ್ಥಾನದಲ್ಲಿದೆ. ಭಾನುವಾರದ ಪಂದ್ಯ ಜಯಿಸಿದರೆ ಒಟ್ಟು 24 ಪಾಯಿಂಟ್ಸ್‌ಗೆ ಹೆಚ್ಚಿಸಿಕೊಳ್ಳಲಿದೆ.

ಪುಣೆ ತಂಡ ಇತ್ತೀಚೆಗೆ ತವರಿನಲ್ಲಿ ಆಡಿದ ಪಂದ್ಯದಲ್ಲಿ ಜೆಮ್‌ಷೆಡ್‌ಪುರ ವಿರುದ್ಧ ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿದೆ.

**

ಗೆದ್ದರೆ ಪುಣೆ ತಂಡ ನೇರವಾಗಿ ಪ್ಲೇ ಆಫ್ ತಲುಪಲಿದೆ

ಗೋವಾ ತಂಡದ ಪ್ಲೇ ಆಫ್‌ ಹಾದಿ ಕಠಿಣವಾಗಿದೆ

ಬೆಂಗಳೂರು ಎಫ್‌ಸಿಗೆ ಅಗ್ರಸ್ಥಾನದಲ್ಲಿ ಉಳಿಯುವ ಸವಾಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.