ADVERTISEMENT

ಬೆಳ್ಳಿಯ ಹೊಂಗಿರಣ ಮೂಡಿಸಿದ ಯೋಧ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 19:30 IST
Last Updated 3 ಆಗಸ್ಟ್ 2012, 19:30 IST
ಬೆಳ್ಳಿಯ ಹೊಂಗಿರಣ ಮೂಡಿಸಿದ ಯೋಧ
ಬೆಳ್ಳಿಯ ಹೊಂಗಿರಣ ಮೂಡಿಸಿದ ಯೋಧ   

ಲಂಡನ್ (ಪಿಟಿಐ): ನಿರೀಕ್ಷೆಗಳು ಕೆಲವೊಮ್ಮೆ ಯಾವುದೇ ಊಹೆಗೂ ನಿಲುಕುವುದಿಲ್ಲ. ಲಂಡನ್ ಒಲಿಂಪಿಕ್ಸ್‌ನ ವಿಜಯ ವೇದಿಕೆ ಮೇಲೆ ಶುಕ್ರವಾರ ವಿಜಯ್ ಕುಮಾರ್ ರಜತ ಪದಕದೊಂದಿಗೆ ರಾರಾಜಿಸುತ್ತಿದ್ದಾಗ ಅದು ನಿಜವಾಯಿತು. ಏಕೆಂದರೆ ಅದೊಂದು ನಿರೀಕ್ಷೆಗೂ ಮೀರಿದ ಸಾಧನೆ. 

ಕೋಟಿ ಕೋಟಿ ಕ್ರೀಡಾ ಪ್ರೇಮಿಗಳ ಚಿತ್ತವನ್ನು ತಮ್ಮತ್ತ ಹರಿಯುವಂತೆ ಮಾಡಿದ್ದು ಸೇನಾಪಡೆಯ ಯೋಧ ವಿಜಯ್. ಶೂಟಿಂಗ್‌ನಲ್ಲಿ ಪದಕದ ನಿರೀಕ್ಷೆ ಇತ್ತಾದರೂ ಒಲಿಂಪಿಕ್ಸ್‌ಗೆ  ಮುನ್ನ ಅವರು ಅಷ್ಟೊಂದು ಸುದ್ದಿಯಲ್ಲಿರಲಿಲ್ಲ. ಏಕೆಂದರೆ ಅಭಿನವ್ ಬಿಂದ್ರಾ, ಗಗನ್ ನಾರಂಗ್ ಹಾಗೂ ರೊಂಜನ್ ಸೋಧಿ ಅವರತ್ತ ಎಲ್ಲರ ಚಿತ್ತ ಹರಿದಿತ್ತು.

ಆದರೆ ಲಂಡನ್ ಒಲಿಂಪಿಕ್ಸ್‌ನ ರಾಯಲ್ ಆರ್ಟಿಲರಿ ಬ್ಯಾರಕ್ಸ್ ಶೂಟಿಂಗ್ ರೇಂಜ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟರು. ಪುರುಷರ 25 ಮೀ. ರ‌್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಹಿಮಾಚಲ ಪ್ರದೇಶದ ಈ ಶೂಟರ್ ಎರಡನೇ ಸ್ಥಾನದೊಂದಿಗೆ ಈ ಸಾಧನೆ ಮಾಡಿದರು.


ಈ ಹಾದಿಯಲ್ಲಿ ಅವರು ಅಗ್ರಮಾನ್ಯ ಶೂಟರ್‌ಗಳಿಗೆ ಆಘಾತ ನೀಡಿದರು. ಆರು ಮಂದಿ ಘಟಾನುಘಟಿ ಶೂಟರ್‌ಗಳು ಫೈನಲ್ ಪ್ರವೇಶಿಸಿದ್ದರು. ಫೈನಲ್‌ನಲ್ಲಿ ವಿಜಯ್ ಲಭ್ಯವಿದ್ದ 40ರಲ್ಲಿ 34 ಪಾಯಿಂಟ್ ಗಳಿಸಿ ಈ ಸಾಧನೆ ಮಾಡಿದರು. ಅರ್ಹತಾ ಸುತ್ತಿನಲ್ಲಿ ಭಾರತದ ಶೂಟರ್ ಒಟ್ಟು 585 ಪಾಯಿಂಟ್ ಗಳಿಸಿದ್ದರು. ವಿಶ್ವ ಚಾಂಪಿಯನ್ ಶೂಟರ್ ರಷ್ಯಾದ ಅಲೆಕ್ಸಿ ಕ್ಲಿಮೋವ್ ಅವರನ್ನು ಹಿಂದಿಕ್ಕಿದರು.


ರಾಯಲ್ ಆರ್ಟಿಲರಿ ಬ್ಯಾರಕ್ಸ್ ಶೂಟಿಂಗ್ ರೇಂಜ್‌ನಲ್ಲಿ ಸೇರಿದ್ದ ಸಾಕಷ್ಟು ಸಂಖ್ಯೆ ಭಾರತದ ಪ್ರೇಕ್ಷಕರ ಪ್ರೋತ್ಸಾಹ ಕೂಡ ವಿಜಯ್ ನೆರವಿಗೆ ಬಂತು. ವಿಜಯ್ ವಿಜಯ ವೇದಿಕೆ ಮೇಲೆ ನಿಂತಿದ್ದಾಗ `ಸ್ಮೈಲ್ ವಿಜಯ್ ಸ್ಮೈಲ್~ ಎಂದು ಪ್ರೇಕ್ಷಕರು ಖುಷಿ ವ್ಯಕ್ತಪಡಿಸಿದರು.

ಇದು ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಎರಡನೇ ಪದಕ. ಸೋಮವಾರ 10 ಮೀಟರ್ಸ್‌ ಏರ್ ರೈಫಲ್ ಶೂಟಿಂಗ್‌ನಲ್ಲಿ ಗಗನ್ ನಾರಂಗ್ ಕಂಚಿನ ಪದಕ ಗೆದ್ದಿದ್ದರು.

ವಿಜಯ್ ಗುರುವಾರ ನಡೆದಿದ್ದ ಮೊದಲ ಸುತ್ತಿನ ಅರ್ಹತಾ ಸ್ಪರ್ಧೆಯಲ್ಲಿ ಒಟ್ಟು 293 ಪಾಯಿಂಟ್ಸ್ ಗಳಿಸಿ ಐದನೇ ಸ್ಥಾನ ಪಡೆದಿದ್ದರು. ಶುಕ್ರವಾರ ಬೆಳಿಗ್ಗೆ ನಡೆದ ಎರಡನೇ ಸುತ್ತಿನ ಅರ್ಹತಾ ಸ್ಪರ್ಧೆಯಲ್ಲಿ ಅವರು ಕ್ರಮವಾಗಿ 98, 97 ಹಾಗೂ 97 ಪಾಯಿಂಟ್ ಗಳಿಸಿದರು.

ಆದರೆ ಶೂಟಿಂಗ್‌ನ ಉಳಿದ ವಿಭಾಗಗಳಂತೆ ಇಲ್ಲಿ ಅರ್ಹತಾ ಸುತ್ತಿನಲ್ಲಿ ಗಳಿಸಿದ ಪಾಯಿಂಟ್ ಫೈನಲ್‌ನಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಫೈನಲ್‌ನಲ್ಲಿ ಅರ್ಹತೆ ಗಿಟ್ಟಿಸಲು ಮಾತ್ರ ಈ ಪಾಯಿಂಟ್‌ಗಳನ್ನು ಪರಿಗಣಿಸಲಾಗುತ್ತದೆ.

25 ಮೀ. ರ‌್ಯಾಪಿಡ್ ಫೈರ್ ಪಿಸ್ತೂಲ್‌ನಲ್ಲಿ 25 ಮೀ. ಅಂತರದಿಂದ ಗುರಿ ಇಡಲಾಗುತ್ತದೆ. ಎರಡು ದಿನ ಅರ್ಹತಾ ಸುತ್ತು ನಡೆಯುತ್ತದೆ. ಆರು ಮಂದಿ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ಫೈನಲ್‌ನಲ್ಲಿ ನಾಲ್ಕು ಸೆಕೆಂಡ್‌ಗಳಲ್ಲಿ ಐದು ಟಾರ್ಗೆಟ್ ವೃತ್ತಕ್ಕೆ ಗುರಿ ಇಡಬೇಕು.

ಒಲಿಂಪಿಕ್ ಕ್ರೀಡಾಕೂಟಗಳ ಶೂಟಿಂಗ್‌ನಲ್ಲಿ ಭಾರತಕ್ಕೆ ಲಭಿಸಿದ ನಾಲ್ಕನೇ ಪದಕವಿದು. ಈ ಮೊದಲು 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ರಾಜ್ಯವರ್ಧನ್ ಸಿಂಗ್ ರಾಥೋಡ್ (ಬೆಳ್ಳಿ; ಡಬಲ್ ಟ್ರಾಪ್), 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ (ಚಿನ್ನ; 10 ಮೀ. ಏರ್ ರೈಫಲ್) ಹಾಗೂ ಈಗ ನಡೆಯುತ್ತಿರುವ ಲಂನ್ ಒಲಿಂಪಿಕ್ಸ್‌ನಲ್ಲಿ ಗಗನ್ ನಾರಂಗ್ (ಕಂಚು;  10 ಮೀ. ಏರ್ ರೈಫಲ್) ಪದಕ ಜಯಿಸಿದ್ದರು.  

ಲಿಯುರಿಸ್‌ಗೆ ಚಿನ್ನ: ಕ್ಯೂಬಾದ ಲಿಯುರಿಸ್ ಪುಪೊ ಈ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು. ಅವರು ಫೈನಲ್‌ನಲ್ಲಿ ಲಭ್ಯವಿದ್ದ 40ಕ್ಕೆ 34 ಪಾಯಿಂಟ್ಸ್ ಗಳಿಸಿದರು. ಈ ಮೂಲಕ ಅವರು ವಿಶ್ವ ದಾಖಲೆ ಸರಿಗಟ್ಟಿದರು. ಚೀನಾದ ಫೆಂಗ್ ಡಿಂಗ್ 27 ಪಾಯಿಂಟ್‌ಗಳೊಂದಿಗೆ ಕಂಚು ಜಯಿಸಿದರು.

ಯೋಧನ ಸಾಧನೆಗೆ ಪ್ರಧಾನಿ ಶ್ಲಾಘನೆ
ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ಸ್ ಶೂಟಿಂಗ್‌ನ 25 ಮೀಟರ್ಸ್‌ ರ‌್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಗೌರವಕ್ಕೆ ಕಾರಣವಾಗಿರುವ ಯೋಧ ವಿಜಯ್ ಕುಮಾರ್ ಅವರ ಸಾಧನೆಯನ್ನು ಪ್ರಧಾನಿ ಡಾ.ಮನಮೋಹನ್ ಸಿಂಗ್ ಶ್ಲಾಘಿಸಿದ್ದಾರೆ.

`ಅಮೋಘ ಸಾಧನೆ ಮಾಡಿರುವ ವಿಜಯ್‌ಗೆ ಅಭಿನಂದನೆ~ ಎಂದು ಪ್ರಧಾನಿ ತಿಳಿಸಿದ್ದಾರೆ. ಶೂಟರ್‌ನ ಸಾಧನೆಗೆ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. `ಸುಬೇದಾರ್ ವಿಜಯ್ ಕುಮಾರ್‌ಗೆ ನನ್ನ ಅಭಿನಂದನೆಗಳು~ ಎಂದು ಅವರು ನುಡಿದಿದ್ದಾರೆ.

ADVERTISEMENT

`ಸೇನಾಪಡೆಗೆ ಈ ಶ್ರೇಯ ಸಲ್ಲಬೇಕು~
ಶಿಮ್ಲಾ (ಪಿಟಿಐ): `ನನ್ನ ಮಗನ ಸಾಧನೆಯನ್ನು ಬಣ್ಣಿಸಲು ನನಗೆ ಪದಗಳೇ ಸಿಗುತ್ತಿಲ್ಲ. ಸೇನಾಪಡೆಗೆ ಈ ಕ್ರೆಡಿಟ್ ಸಲ್ಲಬೇಕು. ಏಕೆಂದರೆ ನನ್ನ ಪುತ್ರನಿಗೆ ಅವರು ಎಲ್ಲಾ ರೀತಿಯ ನೆರವು ನೀಡಿದರು. ಭಾರತಕ್ಕೆ, ಸೇನಾಪಡೆಗೆ, ಹಿಮಾಚಲ ಪ್ರದೇಶಕ್ಕೆ ಹಾಗೂ ನನಗೆ ಹೆಮ್ಮೆ ತಂದಿದ್ದಾರೆ~

-ಖುಷಿಯ ಅಲೆಯಲ್ಲಿ ಮಿಂದು ಎದ್ದವರಂತಿದ್ದ ವಿಜಯ್ ಕುಮಾರ್ ಅವರ ತಂದೆ ಬಂಕುರಾಮ್ ಸಿಂಗ್ ನುಡಿದ ಮಾತುಗಳಿವು. `ಫೈನಲ್ ಸ್ಪರ್ಧೆಗೆ ಮುನ್ನ ವಿಜಯ್ ಜೊತೆ ನಾನು ಮಾತನಾಡಿದ್ದೆ. ಪದಕದ ಭರವಸೆ ನೀಡಿದ್ದೆ~ ಎಂದರು.

ಆದರೆ ತಮ್ಮ ಪುತ್ರ ಈ ಸಾಧನೆ ಮಾಡುತ್ತಾರೆ ಎಂದು ಅವರು ನಿರೀಕ್ಷಿಸಿರಲಿಲ್ಲವಂತೆ. `ಈ ಮಟ್ಟದ ಸಾಧನೆ ಹೊರಹೊಮ್ಮಬಹುದು ಎಂದು ನಾನು ಯಾವತ್ತೂ ಯೋಚಿಸಿರಲಿಲ್ಲ. ಆದರೆ ಈಗ ನನ್ನ ಖುಷಿಯ ಕುರಿತು ಹೇಳಲು ಪದಗಳೇ ಸಿಗುತ್ತಿಲ್ಲ~ ಎಂದು ನುಡಿದರು. `ನಮ್ಮದು ಮಧ್ಯಮ ವರ್ಗದ ಕುಟುಂಬ. ಸೇನಾಪಡೆಯಲ್ಲಿ ಶೂಟಿಂಗ್ ಅಭ್ಯಾಸ ನಡೆಸುವುದು ಸಹಜ. ಆದರೆ ವಿಜಯ್ ಪಿಸ್ತೂಲ್‌ನಲ್ಲಿ ಆಸಕ್ತಿ ಬೆಳೆಸಿಕೊಂಡ. 2003ರಲ್ಲಿ ಆತ ರಾಷ್ಟ್ರೀಯ ಚಾಂಪಿಯನ್ ಆಗಿದ್ದ~ ಎಂದರು. ಬಂಕುರಾಮ್ ಕೂಡ ಸೇನಾಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.