ADVERTISEMENT

ಬೇಟನ್ ರಿಲೇಯಲ್ಲಿ ಸಂಭ್ರಮದ ಹೊನಲು

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

 ಬೆಂಗಳೂರು: ಮುಂದೊಂದು ದಿನ ಚಾಂಪಿಯನ್ ಆಗುವ ಕನಸು ಹೊತ್ತ ಪುಟಾಣಿಗಳು, ಅವರ ಕಿರು ಬೆರಳು ಹಿಡಿದು ನಡೆದು ಬರುತ್ತಿದ್ದ ಪೋಷಕರು, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಹಾಲಿ ಚಾಂಪಿಯನ್‌ಗಳು, ದೇಶಕ್ಕೆ ಕೀರ್ತಿ ತಂದ ಮಾಜಿ ಚಾಂಪಿಯನ್‌ಗಳ ಸಂಗಮಕ್ಕೆ ಸಾಕ್ಷಿಯಾಗಿದ್ದ ಕ್ಷಣವದು.

ಇದಕ್ಕೆ ಕಾರಣವಾಗಿದ್ದು ಏಷ್ಯಾದಲ್ಲೇ ಪ್ರಸಿದ್ಧಿ ಈಜು ಕೇಂದ್ರ ಎನಿಸಿರುವ ಬಸವನಗುಡಿ ಈಜು ಕೇಂದ್ರವು (ಬಿಎಸಿ) ರಜತಮಹೋತ್ಸವ ಅಂಗವಾಗಿ ಗುರುವಾರ ನಗರದಲ್ಲಿ ಆಯೋಜಿಸಿದ್ದ ಬೇಟನ್ ರಿಲೇ ಕಾರ್ಯಕ್ರಮ.

ಬೆಳಿಗ್ಗೆ ಎಂಟು ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ಆರಂಭವಾದ ಬೇಟನ್ ರಿಲೇ ಬಿಎಸಿಯಲ್ಲಿ ಕೊನೆಗೊಂಡಿತು. ಜ್ಯೋತಿಯನ್ನು ಬಿಎಸಿ ಅಧ್ಯಕ್ಷ ನೀಲಕಂಠರಾವ್ ಆರ್. ಜಗದಾಳೆ ಅವರಿಗೆ ನೀಡುವ ಮೂಲಕ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ನಿರ್ದೇಶಕ ವಿ.ಚಂದ್ರಶೇಖರ್ ಬೇಟನ್ ರಿಲೇಗೆ ಚಾಲನೆ ನೀಡಿದರು. ಬಳಿಕ ಜ್ಯೋತಿಯನ್ನು ರಾಷ್ಟ್ರೀಯ ಪದಕ ವಿಜೇತರಾದ ಈ ಕೇಂದ್ರದ ಮೊದಲ ಈಜುಪಟು ಬಿ.ರಮ್ಯಾಗೆ ಹಸ್ತಾಂತರಿಸಿದರು.

ಬೇಟನ್ ರಿಲೇ ಕಾರ್ಪೊರೇಷನ್ ವೃತ್ತ, ಟೌನ್‌ಹಾಲ್, ಜೆ.ಸಿ.ರಸ್ತೆ, ಮಿನರ್ವ ವೃತ್ತ, ಸಜ್ಜನರಾವ್ ವೃತ್ತ, ನ್ಯಾಷನಲ್ ಕಾಲೇಜ್ ಮೂಲಕ 10 ಗಂಟೆಗೆ ಬಿಎಸಿ ತಲುಪಿತು. ಒಲಿಂಪಿಯನ್ ಈಜುಪಟು ನಿಶಾ ಮಿಲೆಟ್, ರೆಹಾನ್ ಪೂಂಚಾ, ಸೇರಿದಂತೆ ಈ ಕೇಂದ್ರದ ರಾಷ್ಟ್ರೀಯ ಪದಕ ವಿಜೇತ 120 ಹಾಲಿ ಹಾಗೂ ಮಾಜಿ ಈಜುಪಟುಗಳು ಜ್ಯೋತಿ ಹಿಡಿದು ನಡೆದರು. ಈ ಸಂದರ್ಭದಲ್ಲಿ ಮಾಜಿ ಹಾಗೂ ಹಾಲಿ ಅಥ್ಲೀಟ್‌ಗಳು, ಈಜುಪಟುಗಳು, ಪೋಷಕರು ಸೇರಿದಂತಕ್ಕೆ ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ಬಿಎಸಿ ತಲುಪಿದ ಮೇಲೆ ಬೇಟನ್ ರಿಲೇಯನ್ನು ನಿಶಾ ಮಿಲೆಟ್ ಕೇಂದ್ರದ ಕಾರ್ಯದರ್ಶಿ ರಾಜಣ್ಣ ಅವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ, ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸೂರ್, ಬಿಎಸಿ ಪದಾಧಿಕಾರಿಗಳು, ರಾಷ್ಟ್ರೀಯ ಈಜು ಕೋಚ್ ಪ್ರದೀಪ್ ಕುಮಾರ್, ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಅಧ್ಯಕ್ಷ ಕೆ.ಗೋವಿಂದರಾಜ್, ಮಾಜಿ ಹಾಕಿ ಒಲಿಂಪಿಯನ್ ಎಂ.ಪಿ.ಗಣೇಶ್, ಆಶೀಶ್ ಬಲ್ಲಾಳ್, ಮಾಜಿ ಅಥ್ಲೀಟ್‌ಗಳಾದ ರೀತ್ ಅಬ್ರಹಾಂ, ಅಶ್ವಿನಿ ನಾಚಪ್ಪ, ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಕಾರ್ಯದರ್ಶಿ ಸತ್ಯನಾರಾಯಣ, ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ ರತನ್ ಸಿಂಗ್ ಪಾಲ್ಗೊಂಡಿದ್ದರು.

25ನೇ ಹುಟ್ಟು ಹಬ್ಬ ಅಂಗವಾಗಿ ಬಿಎಸಿ ಈ ವರ್ಷಪೂರ್ತಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈಗಿರುವ ಈಜುಕೊಳವನ್ನು ಮೇಲ್ದರ್ಜೆಗೇರಿಸುವುದೂ ಈ ಕಾರ್ಯಕ್ರಮಗಳಲ್ಲಿ ಒಂದು. ಆರು ಕೋಟಿ ರೂ. ವೆಚ್ಚದಲ್ಲಿ ಅಂತರರಾಷ್ಟ್ರೀಯ ದರ್ಜೆಯ 10 ಲೇನ್ ರೇಸಿಂಗ್ ಪೂಲ್ ನಿರ್ಮಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.