ADVERTISEMENT

ಬ್ಯಾಟಿಂಗ್ ಸ್ನೇಹಿ ಪಿಚ್ ತಯಾರಿಸಲು ಸೂಚನೆ!

ಕೆ.ಓಂಕಾರ ಮೂರ್ತಿ
Published 24 ಜನವರಿ 2012, 19:30 IST
Last Updated 24 ಜನವರಿ 2012, 19:30 IST

ಬೆಂಗಳೂರು: ಆಸ್ಟ್ರೇಲಿಯಾದ ವೇಗದ ಪಿಚ್‌ಗಳಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಪರದಾಡುತ್ತಿದ್ದರೆ, ಇತ್ತ ಐಪಿಎಲ್‌ಗೆ ಹೆಚ್ಚು ಜನರನ್ನು ಸೆಳೆಯುವ ನಿಟ್ಟಿನಲ್ಲಿ ಯಾವ ರೀತಿ ಪಿಚ್ ತಯಾರಿಸಬೇಕು ಎಂಬ ಚರ್ಚೆಯಲ್ಲಿ ಬಿಸಿಸಿಐ ತೊಡಗಿರುವುದು ಅಚ್ಚರಿ ಉಂಟು ಮಾಡಿದೆ.

`ಪ್ರಜಾವಾಣಿ~ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಐಪಿಎಲ್‌ನಲ್ಲಿ ಹೆಚ್ಚು ರನ್ ಗಳಿಸಲು ಸಹಾಯವಾಗುವಂತಹ ಪಿಚ್ ತಯಾರಿಸಲು  ಕ್ಯುರೇಟರ್‌ಗಳಿಗೆ ಸೂಚಿಸಿರುವುದು ತಿಳಿದುಬಂದಿದೆ. ಆದರೆ ದೇಶಿ ಕ್ರಿಕೆಟ್‌ನ ಸುಧಾರಣೆಗೆ ಯಾವ ರೀತಿ ಪಿಚ್ ರೂಪಿಸಬೇಕು ಹಾಗೂ ಆಸ್ಟ್ರೇಲಿಯಾದಲ್ಲಿ ಭಾರತ ತೋರುತ್ತಿರುವ ಹೀನಾಯ ಪ್ರದರ್ಶನದ ಬಗ್ಗೆ ಚರ್ಚೆಯೇ ನಡೆದಿಲ್ಲ.

12 ರಾಜ್ಯಗಳ ಕಾರ್ಯದರ್ಶಿಗಳು ಹಾಗೂ ಪಿಚ್ ಕ್ಯುರೇಟರ್‌ಗಳು ಈ ಸಭೆಯಲ್ಲಿ ಹಾಜರಾಗಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕ್ಯುರೇಟರ್ ನಾರಾಯಣ ರಾಜು ಕೂಡ ಈ ಸಭೆಯಲ್ಲಿದ್ದರು.

`ಸಭೆ ನಡೆದಿದ್ದು ನಿಜ. ಆದರೆ ಈ ಸಭೆಗೂ ದೇಶಿ ಕ್ರಿಕೆಟ್‌ಗೂ ಯಾವುದೇ ಸಂಬಂಧವಿಲ್ಲ. ಮುಂಬರುವ ಐಪಿಎಲ್ ಟೂರ್ನಿಗೆ ಸಂಬಂಧಿಸಿದಂತೆ ಪಿಚ್ ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು~ ಎಂದು  ನಾರಾಯಣ ರಾಜು ಪತ್ರಿಕೆಗೆ ಖಚಿತಪಡಿಸಿದ್ದಾರೆ.

`ಈ ಸಭೆಯಲ್ಲಿ ಐಪಿಎಲ್ ನಡೆಯಲಿರುವ ರಾಜ್ಯಗಳ ಕ್ಯೂರೇಟರ್‌ಗಳು ಮಾತ್ರ ಪಾಲ್ಗೊಂಡಿದ್ದರು. ನಾನು ಕೂಡ ಭಾಗವಹಿಸಿದ್ದೆ. ಹೆಚ್ಚು ರನ್ ಗಳಿಸಲು ಹಾಗೂ ಜನರನ್ನು ಸೆಳೆಯಲು ಯಾವ ರೀತಿ ಪಿಚ್ ರೂಪಿಸಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಸಲಾಯಿತು~ ಎಂದು ಅವರು ತಿಳಿಸಿದರು.

ಆದರೆ ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಆಡಲು ಭಾರತದ ಆಟಗಾರರು ಪರದಾಡುತ್ತಿರುವ ಈ ಸಂದರ್ಭದಲ್ಲೂ ಬಿಸಿಸಿಐ ಅಧಿಕಾರಿಗಳು ಐಪಿಎಲ್ ಬಗ್ಗೆ ಸಮಾಲೋಚನೆಯಲ್ಲಿ ತೊಡಗಿರುವುದು ಟೀಕೆಗೆ ಗುರಿಯಾಗುವ ಸಾಧ್ಯತೆ ಇದೆ.

ಚೆನ್ನೈನಲ್ಲಿ ನಡೆದ ರಣಜಿ ಫೈನಲ್ ಅದಕ್ಕೆ ಉದಾಹರಣೆ. ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲ ಎರಡು ದಿನ ಉರುಳಿದ್ದು ಕೇವಲ 2 ವಿಕೆಟ್. ಆದರೆ ಪರ್ತ್‌ನಲ್ಲಿ ಭಾರತ ತಂಡದ 20 ವಿಕೆಟ್‌ಗಳು ಎರಡೂವರೆ ದಿನದಲ್ಲಿ ಉರುಳಿ ಹೋಗಿದ್ದವು.

ಕಳೆದ ವರ್ಷ ಕಡಿಮೆ ಸ್ಕೋರ್‌ನ ಹೋರಾಟ ಕಂಡುಬಂದಿದ್ದರಿಂದ ಐಪಿಎಲ್ ಆದಾಯಕ್ಕೆ ಕೊಂಚ ಕೊಕ್ಕೆ ಬಿದ್ದಿತ್ತು. ಹಾಗಾಗಿ ಈ ಬಾರಿ ಆ ರೀತಿ ಆಗದಂತೆ ನೋಡಿಕೊಳ್ಳಲು ಬಿಸಿಸಿಐ ಈ ಸಭೆ ಆಯೋಜಿಸಿತ್ತು ಎನ್ನಲಾಗಿದೆ. ಐದನೇ ಅವತರಣಿಕೆ ಏಪ್ರಿಲ್ 4ರಂದು ಆರಂಭವಾಗಲಿದೆ. ಇದಕ್ಕೆ ವೇಳಾಪಟ್ಟಿಯನ್ನು ಬಿಸಿಸಿಐ ಈಗಾಗಲೇ ಬಿಡುಗಡೆ ಮಾಡಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ಜರುಗಲಿವೆ.

ಆದರೆ ದೇಶಿ ಕ್ರಿಕೆಟ್ ಆಯೋಜಿಸುವ ಪಿಚ್‌ಗಳಲ್ಲಿ ಬದಲಾವಣೆ ಮಾಡಲು ಯಾವುದೇ ಚರ್ಚೆ ನಡೆಯಲಿಲ್ಲವೇ ಎಂಬುದಕ್ಕೆ ಪ್ರತಿಕ್ರಿಯಿಸಿದ ರಾಜು, `ಇದು ಐಪಿಎಲ್ ಟೂರ್ನಿಗೆ ಸೀಮಿತವಾಗಿದ್ದ ಸಭೆ. ಹಾಗಾಗಿ ಅದರ ಬಗ್ಗೆ ಚರ್ಚಿಸುವ ಪ್ರಮೇಯವೇ ಬರುವುದಿಲ್ಲ~ ಎಂದರು.

`ಇದಕ್ಕೆ ಎಲ್ಲರ ಒಪ್ಪಿಗೆ ಅಗತ್ಯವಿದೆ. ಆದರೆ ಆಟಗಾರರೇ ಇದಕ್ಕೆ ತಕರಾರು ತೆಗೆಯುತ್ತಾರೆ. ಅವರು ಇಂತಹ ಪಿಚ್‌ಗಳಲ್ಲಿ ಆಡಲು ತಯಾರಿಲ್ಲ. ಆದರೆ ಯಾವುದೇ ರೀತಿಯ ಪಿಚ್ ಸಿದ್ಧಗೊಳಿಸಲು ನಾವು ಸಿದ್ಧ~ ಎಂದು ಅವರು ಸ್ಪಷ್ಟಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.