ADVERTISEMENT

ಬ್ಯಾಡ್ಮಿಂಟನ್‌: ಜ್ವಾಲಾ– ಅಶ್ವಿನಿ ಜೋಡಿಗೆ ಸೋಲು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 19:30 IST
Last Updated 5 ಮಾರ್ಚ್ 2014, 19:30 IST

ಬರ್ಮಿಂಗ್‌ ಹ್ಯಾಮ್‌ (ಪಿಟಿಐ):  ಭಾರತದ ಡಬಲ್ಸ್‌ ತಾರೆಯರಾದ ಅಶ್ವಿನಿ ಪೊನ್ನಪ್ಪ ಹಾಗೂ ಜ್ವಾಲಾ ಗುಟ್ಟಾ ಜೋಡಿ ಇಲ್ಲಿ ನಡೆಯುತ್ತಿ ರುವ ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ ಷಿಪ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ.

ನ್ಯಾಷನಲ್‌ ಇಂಡೋರ್‌ ಅರೆನಾದಲ್ಲಿ ಮಂಗಳವಾರ ರಾತ್ರಿ ನಡೆದ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಕಾಮನ್‌ವೆಲ್ತ್‌  ಚಿನ್ನದ ಪದಕ ವಿಜೇತ ಭಾರತದ ಜೋಡಿ 21–14, 15–21, 17–21ರಲ್ಲಿ ಚೀನಾದ ಜಿನ್‌ ಮಾ ಹಾಗೂ ಯುಆಂಟಿಂಗ್‌ ಟಾಂಗ್‌ ಜೋಡಿಯ ಎದುರು ಸೋಲು ಕಂಡಿತು.

54 ನಿಮಿಷಗಳ ಪೈಪೋಟಿಯಲ್ಲಿ ಭಾರತದ ಆಟಗಾರ್ತಿಯರು ಮೊದಲ ಗೇಮ್‌ ಗೆದ್ದು ಬೀಗಿದ್ದರು. ಆದರೆ  ನಂತರದ ಎರಡೂ ಗೇಮ್‌ಗಳಲ್ಲಿ ನಿರೀಕ್ಷಿತ ಆಟ ತೋರದೆ ನಿರಾಸೆ ಅನುಭವಿಸಿದರು. ಭಾರತದ ಆಟಗಾರ್ತಿ ಯರು ‘ಬೈ’ ಪಡೆದು ಎರಡನೇ ಸುತ್ತು ಪ್ರವೇಶಿದ್ದರು.

ನಿರಾಸೆ ಕಂಡ ಸೈಲಿ ರಾಣೆ: ಟೂರ್ನಿಯ ಮಹಿಳಾ ವಿಭಾಗದ ಅರ್ಹತಾ ಸುತ್ತಿನ ಸಿಂಗಲ್ಸ್‌ನಲ್ಲಿ ಸೈಲಿ ರಾಣೆ 21–23, 20–22 ನೇರ ಗೇಮ್‌ಗಳಿಂದ ಐರ್ಲೆಂಡ್‌ನ ಚ್ಲೊಯೆ ಮಾಗೀ ಅವರಿಗೆ ಸುಲಭವಾಗಿ ಶರಣಾದರು.

ಪವಾರ್‌ಗೆ ಸೋಲು: ಟೂರ್ನಿಯ ಪುರುಷರ ವಿಭಾಗದ ಅರ್ಹತಾ ಸುತ್ತಿನ ಸಿಂಗಲ್ಸ್‌ನಲ್ಲಿ ಭಾರತದ ಆನಂದ್‌ ಪವಾರ್‌ 21–18, 13–21, 19–21ರಲ್ಲಿ ಇಂಡೊನೇಷ್ಯಾದ ಆ್ಯಂಡ್ರೆ ಕುರ್ನಿಯಾವಾನ್‌ ಟೆಡ್‌ಜೊನೊ ವಿರುದ್ಧ ಪರಾಭವಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.