ADVERTISEMENT

ಬ್ಯಾಡ್ಮಿಂಟನ್: ಪ್ರಣೀತ್, ಸಯಾಲಿ ಚಾಂಪಿಯನ್ಸ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಮನಮೋಹಕ ಪ್ರದರ್ಶನ ತೋರಿದ ಪಿಎಸ್‌ಪಿಬಿಯ ಸಾಯಿ ಪ್ರಣೀತ್ ಹಾಗೂ ಏರ್ ಇಂಡಿಯಾದ ಸಯಾಲಿ ಗೋಖಲೆ ಅವರು ಸೋಮವಾರ ಇಲ್ಲಿ ಕೊನೆಗೊಂಡ ಐಎಫ್‌ಸಿಐ ಅಖಿಲ ಭಾರತ ಮೇಜರ್ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯ ಕೋರ್ಟ್‌ನಲ್ಲಿ ನಡೆದ ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಪ್ರಣೀತ್ 21-13, 10-21, 21-16ರಲ್ಲಿ ಪಿಎಸ್‌ಪಿಬಿಯ ಸೌರಭ್ ವರ್ಮ ಅವರನ್ನು ಪರಾಭವಗೊಳಿಸಿದರು.
ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಪ್ರಣೀತ್ ಉತ್ತಮ ಆಟ ಪ್ರದರ್ಶಿಸಿದರು.

ಹಾಗಾಗಿ ಮೊದಲ ಶ್ರೇಯಾಂಕದ ಸೌರಭ್ ನಡೆಸಿದ ಪ್ರಯತ್ನ ಸಾಕಾಗಲಿಲ್ಲ. ಈ ಪಂದ್ಯ 54 ನಿಮಿಷ ನಡೆಯಿತು. ಕಳೆದ ತಿಂಗಳು ಮುಂಬೈನಲ್ಲಿ ಸೌರಭ್ ಎದುರು ಪ್ರಣೀತ್ ಫೈನಲ್‌ನಲ್ಲಿ ಸೋಲು ಕಂಡಿದ್ದರು.

`ಫೈನಲ್‌ನಲ್ಲಿ ಇದೇ ಮೊದಲು ನಾನು ಸೌರಭ್ ಅವರನ್ನು ಸೋಲಿಸಿದ್ದೇನೆ~ ಎಂದು ಖುಷಿಯಿಂದ ಪ್ರಣೀತ್ ನುಡಿದರು. ಈ ಪಂದ್ಯದ ಮೊದಲ ಗೇಮ್‌ನಲ್ಲಿ ಪ್ರಣೀತ್ ಸುಲಭವಾಗಿ ಗೆದ್ದರು. ಆದರೆ ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದ ಸೌರಭ್ 21-10 ಪಾಯಿಂಟ್‌ಗಳಿಂದ ಜಯಿಸಿದರು. ಮೂರನೇ ಗೇಮ್‌ನಲ್ಲಿ ತಂತ್ರ ಕೈಕೊಟ್ಟಿತು. ಪ್ರಣೀತ್ ಅವರ ಗೆಲುವಿನಆಸೆ ಕೈಗೂಡಿತು.

ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಸಯಾಲಿ 21-16, 21-17ರಲ್ಲಿ ಏರ್ ಇಂಡಿಯಾದ ತಾನ್ವಿ ಲಾಡ್ ಅವರನ್ನು ಮಣಿಸಿದರು. ಮೂರನೇ ಶ್ರೇಯಾಂಕದ ಸಯಾಲಿ ಭಾನುವಾರ ನಡೆದ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ನೇಹಾ ಪಂಡಿತ್‌ಗೆ ಪೆಟ್ಟು ನೀಡಿದ್ದರು. ಫೈನಲ್‌ನಲ್ಲಿ ತಾನ್ವಿ ತಿರುಗೇಟು ನೀಡಲು ಪ್ರಯತ್ನಿಸಿದರಾದರೂ ಆ ಪ್ರಯತ್ನ ಸಾಕಾಗಲಿಲ್ಲ.

ಪ್ರಣವ್-ಅಕ್ಷಯ್‌ಗೆ ಪ್ರಶಸ್ತಿ: ಪುರುಷರ ವಿಭಾಗದ  ಡಬಲ್ಸ್ ಪ್ರಶಸ್ತಿ ಪ್ರಣವ್ ಚೋಪ್ರಾ- ಅಕ್ಷಯ್ ದಿವಾಕರ್ ಅವರ ಮಡಿಲು ಸೇರಿತು. ಈ ಜೋಡಿ ಸಾಯಿ ಪ್ರಣೀತ್ ಹಾಗೂ ಕೆ.ನಂದಗೋಪಾಲ್ ವಿರುದ್ಧ ಗೆಲುವು ಸಾಧಿಸಿತು.

ಮಹಿಳೆಯರ ವಿಭಾಗದ ಡಬಲ್ಸ್ ಪ್ರಶಸ್ತಿ ಅಪರ್ಣಾ ಬಾಲನ್-ಸಿಕ್ಕಿ ರೆಡ್ಡಿ ಪಾಲಾಯಿತು. ಅಪರ್ಣಾ ಹಾಗೂ ಸಿಕ್ಕಿ ಫೈನಲ್‌ನಲ್ಲಿ 21-16, 16-21, 21-19ರಲ್ಲಿ ಪ್ರದನ್ಯಾ ಗಾಡ್ರೆ ಹಾಗೂ ಪ್ರಜಕ್ತಾ ಸಾವಂತ್ ಎದುರು ಗೆದ್ದರು.
ಮಿಶ್ರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಪ್ರಣವ್ ಚೋಪ್ರಾ ಹಾಗೂ ಪ್ರಜಕ್ತಾ ಸಾವಂತ್ 21-15, 22-20ರಲ್ಲಿ ಅರುಣ್ ವಿಷ್ಣು ಹಾಗೂ ಅಪರ್ಣಾ ಬಾಲನ್ ವಿರುದ್ಧ ಗೆದ್ದು ಚಾಂಪಿಯನ್ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.