ADVERTISEMENT

ಬ್ಯಾಡ್ಮಿಂಟನ್: ಸೆಮಿಫೈನಲ್‌ನಲ್ಲಿ ಎಡವಿದ ಸೈನಾ ನೆಹ್ವಾಲ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 19:30 IST
Last Updated 3 ಆಗಸ್ಟ್ 2012, 19:30 IST

ಲಂಡನ್ (ಪಿಟಿಐ): `ಸೂಪರ್~ ಸೈನಾ ನೆಹ್ವಾಲ್ ಅವರ ಮಿಂಚಿನ ನಾಗಾಲೋಟಕ್ಕೆ ಸೆಮಿಫೈನಲ್‌ನಲ್ಲಿ ಬ್ರೇಕ್ ಬಿದ್ದಿದೆ. ತಮಗಿಂತ ಹೆಚ್ಚಿನ ರ‌್ಯಾಂಕಿಂಗ್‌ನ ಆಟಗಾರ್ತಿಯ ಸವಾಲನ್ನು ಮೀರಿ ನಿಲ್ಲಲು ನೆಹ್ವಾಲ್‌ಗೆ ಸಾಧ್ಯವಾಗಲಿಲ್ಲ. ಆದರೆ ಕಂಚಿನ ಪದಕ ಗೆಲ್ಲಲು ಭಾರತದ ಈ ಆಟಗಾರ್ತಿಗೆ ಇನ್ನೂ ಒಂದು ಅವಕಾಶವಿದೆ.

ವೆಂಬ್ಲೆ ಅರೆನಾ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸೈನಾ 13-21, 13-21ರಲ್ಲಿ ಚೀನಾದ ಯಿಹಾನ್ ವಾಂಗ್ ಎದುರು ಪರಾಭವಗೊಂಡರು. ಈ ಹಿಂದೆ ಐದು ಹೋರಾಟಗಳಲ್ಲಿ ಅಗ್ರ ರ‌್ಯಾಂಕಿಂಗ್‌ನ ವಾಂಗ್ ಎದುರು ಸೋಲು ಕಂಡಿದ್ದ ನೆಹ್ವಾಲ್‌ಗೆ ಈ ಬಾರಿಯೂ ಗೆಲ್ಲಲು ಸಾಧ್ಯವಾಗಲಿಲ್ಲ.

ಹೈದರಾಬಾದ್‌ನ ಆಟಗಾರ್ತಿ ಸೈನಾ ಶನಿವಾರ ನಡೆಯಲಿರುವ ಕಂಚಿನ ಪದಕಕ್ಕಾಗಿನ ಹೋರಾಟದಲ್ಲಿ ಚೀನಾದ ವಾಂಗ್ ಕ್ಸಿನ್ ಅವರನ್ನು ಎದುರಿಸಲಿದ್ದಾರೆ. ಕ್ಸಿನ್ ಅವರು ಸೆಮಿಫೈನಲ್‌ನಲ್ಲಿ ತಮ್ಮ ದೇಶದವರೇ ಆದ ಲಿ ಕ್ಸುಯೇರಿ ಎದುರು 20-22, 18-21ರಲ್ಲಿ ಸೋಲು ಕಂಡರು. ಎರಡನೇ ರ‌್ಯಾಂಕ್‌ನ ಕ್ಸಿನ್ 4-2ರಲ್ಲಿ ಭಾರತದ ಆಟಗಾರ್ತಿ ಎದುರು ಮೇಲುಗೈ ಹೊಂದಿದ್ದಾರೆ. ಈ ಹಿಂದಿನ ಆರು ಪೈಪೋಟಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆದ್ದಿದ್ದಾರೆ.

42ನೇ ನಿಮಿಷ ನಡೆದ ಸೆಮಿಫೈನಲ್‌ನಲ್ಲಿ ಭಾರತದ ಆಟಗಾರ್ತಿ ಎದುರು ಗೆದ್ದ ವಿಶ್ವ ಚಾಂಪಿಯನ್ ವಾಂಗ್ ಫೈನಲ್ ಪ್ರವೇಶಿಸಿದವರು. ಅವರು ಫೈನಲ್‌ನಲ್ಲಿ ತಮ್ಮ ದೇಶದವರೇ ಆದ ಕ್ಸುಯೇರಿ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯ ಕೂಡ ಶನಿವಾರ ನಡೆಯಲಿದೆ.

ಅಗ್ರ ರ‌್ಯಾಂಕ್‌ನ ಆಟಗಾರ್ತಿಗೆ ಸೈನಾ ಯಾವುದೇ ಹಂತದಲ್ಲಿ ಸವಾಲಾಗಿ ನಿಲ್ಲಲು ಸಾಧ್ಯವಾಗಲಿಲ್ಲ. ಐದನೇ ರ‌್ಯಾಂಕ್‌ನ ಆಟಗಾರ್ತಿ ನೆಹ್ವಾಲ್ ಅವರ ಪಾದಚಲನೆ ಕೂಡ ಅಷ್ಟೊಂದು ಚುರುಕಾಗಿರಲಿಲ್ಲ. ಇದನ್ನು ಅರಿತ ವಾಂಗ್ ಎದುರಾಳಿಯನ್ನು ಕೋರ್ಟ್‌ನ ತುಂಬೆಲ್ಲಾ ಓಡಾಡಿಸಿ ಸುಸ್ತು ಮಾಡಿದರು.

ಆದರೆ ಎರಡನೇ ಗೇಮ್‌ನಲ್ಲಿ ಸೈನಾ ವಿರಾಮದ ವೇಳೆಗೆ 11-10 ಪಾಯಿಂಟ್‌ಗಳಿಂದ ಮುಂದಿದ್ದರು. ಆದರೆ ಮತ್ತಷ್ಟು ಆಕ್ರಮಣಕಾರಿ ಆಟ ತೋರಿದ ವಾಂಗ್ 22 ವರ್ಷ ವಯಸ್ಸಿನ ಸೈನಾ ಅವರನ್ನು ಕೇವಲ 13 ಪಾಯಿಂಟ್‌ಗಳಲ್ಲಿ ನಿಲ್ಲಿಸಿ ಗೇಮ್ ಹಾಗೂ ಪಂದ್ಯ ಗೆದ್ದರು.

`ವಾಂಗ್ ಅವರ ವೇಗದ ಆಟಕ್ಕೆ ಹೊಂದಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ನಾನು ಕೋರ್ಟ್‌ನಲ್ಲಿ ಸರಿಯಾಗಿ ಓಡಾಡಲು ಸಾಧ್ಯವಾಗದ ರೀತಿಯಲ್ಲಿ ಅವರು ಕೆಲವೊಂದು ಹೊಡೆತ ಪ್ರದರ್ಶಿಸಿದರು. ನಾನು ಈ ಪಂದ್ಯದಲ್ಲಿ ಹೆಚ್ಚು ತಪ್ಪೆಸಗಿದೆ~ ಎಂದು ಸೈನಾ ಪ್ರತಿಕ್ರಿಯಿಸಿದರು.

ಆದರೆ ಈ ಒಲಿಂಪಿಕ್ಸ್‌ನಲ್ಲಿ ಸೈನಾ ಐತಿಹಾಸಿಕ ಸಾಧನೆಗೆ ಕಾರಣರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.