ಭಿಲ್ವಾರ, ರಾಜಸ್ತಾನ (ಪಿಟಿಐ): ಕರ್ನಾಟಕ ಪುರುಷರ ತಂಡದವರು ಇಲ್ಲಿ ನಡೆಯುತ್ತಿರುವ 65ನೇ ರಾಷ್ಟ್ರೀಯ ಸೀನಿಯರ್ ಬ್ಯಾಸ್ಕೆಟ್ ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ರಾತ್ರಿ ನಡೆದ ‘ಬಿ’ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಕರ್ನಾಟಕ 62–93ರಲ್ಲಿ ಪಂಜಾಬ್ ಎದುರು ಸೋತಿತು. ವಿಜಯೀ ತಂಡದ ಪಲ್‌ಪ್ರೀತ್ ಸಿಂಗ್ 37 ಪಾಯಿಂಟ್ಸ್ ಕಲೆಹಾಕಿದರೆ, ಸತ್ನಮ್ ಸಿಂಗ್ 29 ಪಾಯಿಂಟ್ಸ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಪ್ರಮುಖ ಆಟಗಾರ ಎ.ಅರವಿಂದ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ರಾಜ್ಯ ತಂಡದ ಪರ ಧೀರಜ್ ಶೆಟ್ಟಿ 13 ಹಾಗೂ ಅನಿಲ್ ಕುಮಾರ್ ಮತ್ತು ಶಶಿ ಕುಮಾರ್ ತಲಾ 8 ಪಾಯಿಂಟ್ಸ್ ಕಲೆಹಾಕಿ ಸೋಲಿನ ನಡುವೆಯೂ ಗಮನ ಸೆಳೆದರು.
ಈ ಪಂದ್ಯದಲ್ಲಿ ಎದುರಾದ ಸೋಲಿನ ಹೊರತಾಗಿಯೂ ರಾಜ್ಯ ತಂಡ ‘ಬಿ’ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದಿದ್ದರಿಂದ ಎಂಟರ ಘಟ್ಟಕ್ಕೆ ಪ್ರವೇಶ ತನ್ನದಾಗಿಸಿಕೊಂಡಿತು.
ಮಹಿಳಾ ತಂಡಕ್ಕೆ ನಿರಾಸೆ: ಮಹಿಳಾ ವಿಭಾಗದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕರ್ನಾಟಕ 69–94ರಲ್ಲಿ ಛತ್ತೀಸಗಡದ ಎದುರು ಸೋಲು ಅನುಭವಿಸಿತು.
ಛತ್ತೀಸಗಡ ತಂಡದ ಪೂನಂ ಚತುರ್ವೇದಿ 37 ಪಾಯಿಂಟ್ಸ್ ಕಲೆಹಾಕಿದರೆ, ಸಂಗೀತಾ ಕೌರ್ ಹಾಗೂ ಎಲ್.ದೀಪಾ ಕ್ರಮವಾಗಿ 29 ಮತ್ತು 12 ಪಾಯಿಂಟ್ಸ್ ಸಂಗ್ರಹಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.
ರಾಜ್ಯ ತಂಡದ ಎಲ್.ಎಸ್.ಸವಿತಾ 25, ಪಿ.ಯು.ನವನೀತಾ 14 ಹಾಗೂ ಎಚ್.ಎಂ.ಬಾಂಧವ್ಯ 12 ಪಾಯಿಂಟ್ಸ್ ಗಳಿಸಿ ಪ್ರಬಲ ಪೈಪೋಟಿ ಒಡ್ಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.