ADVERTISEMENT

ಬ್ರಿಟನ್‌ ಎದುರು ಭಾರತಕ್ಕೆ ಸೋಲು

ಮಹಿಳಾ ಹಾಕಿ: ಉಳಿದ ಪಂದ್ಯಗಳಲ್ಲಿ ಗೆಲುವು ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2016, 0:30 IST
Last Updated 10 ಆಗಸ್ಟ್ 2016, 0:30 IST
ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನ  ಮಹಿಳಾ ಹಾಕಿ ಪಂದ್ಯದಲ್ಲಿ ಭಾರತದ ನಮಿತಾ ಟೊಪ್ಪೊ (ಮಧ್ಯ) ಬ್ರಿಟನ್‌ ಆಟಗಾರ್ತಿಯರ ಜೊತೆ ಚೆಂಡಿಗಾಗಿ ಪೈಪೋಟಿ ನಡೆಸಿದ ಕ್ಷಣ    –ಪ್ರಜಾವಾಣಿ ಚಿತ್ರ/ಕೆ.ಎನ್‌. ಶಾಂತಕುಮಾರ್‌
ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನ ಮಹಿಳಾ ಹಾಕಿ ಪಂದ್ಯದಲ್ಲಿ ಭಾರತದ ನಮಿತಾ ಟೊಪ್ಪೊ (ಮಧ್ಯ) ಬ್ರಿಟನ್‌ ಆಟಗಾರ್ತಿಯರ ಜೊತೆ ಚೆಂಡಿಗಾಗಿ ಪೈಪೋಟಿ ನಡೆಸಿದ ಕ್ಷಣ –ಪ್ರಜಾವಾಣಿ ಚಿತ್ರ/ಕೆ.ಎನ್‌. ಶಾಂತಕುಮಾರ್‌   

ರಿಯೊ ಡಿ ಜನೈರೊ (ಪಿಟಿಐ):   ಹಿಂದಿನ ಪಂದ್ಯದಲ್ಲಿ ನೀಡಿದ ಪ್ರದರ್ಶನವನ್ನು ಪುನರಾವರ್ತಿಸಲು ವಿಫಲವಾದ ಭಾರತ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್‌ನ ಬ್ರಿಟನ್‌ ವಿರುದ್ಧದ ಪಂದ್ಯದಲ್ಲಿ 0–3 ಗೋಲುಗಳಿಂದ ಸೋಲು ಕಂಡಿದೆ.

36 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಜಪಾನ್‌ ವಿರುದ್ಧ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರೂ ನಂತರ ಗೋಲು ಕಲೆ ಹಾಕಿ ಪಂದ್ಯ ಡ್ರಾ ಮಾಡಿಕೊಂಡಿತ್ತು. ಆದ್ದರಿಂದ ವಿಶ್ವ ರ್‍ಯಾಂಕ್‌ನಲ್ಲಿ 13ನೇ ಸ್ಥಾನ ಹೊಂದಿರುವ ಭಾರತದ ವನಿತೆಯರು  ಬ್ರಿಟನ್‌ ಎದುರು ಉತ್ತಮ ಸಾಮರ್ಥ್ಯ ತೋರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಟಗಾರ್ತಿಯರಿಗೆ ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಮೊದಲ ಕ್ವಾರ್ಟರ್‌ನಲ್ಲಿ  ಎರಡೂ ತಂಡಗಳಿಂದ ರಕ್ಷಣಾತ್ಮಕ ಆಟ ಕಂಡು ಬಂದಿತು. ಎರಡನೇ ಕ್ವಾರ್ಟರ್‌ನ ಆಟ ಮುಗಿಯಲು ಐದು ನಿಮಿಷಗಳು ಬಾಕಿಯಿದ್ದಾಗ ಬ್ರಿಟನ್‌ ಗೋಲಿನ ಖಾತೆ ತೆರೆಯಿತು. ಗಿಸೆಲ್ಲಾ ಅನ್ಸೆಲಿಯಾ (25ನೇ ನಿಮಿಷ) ಇದಕ್ಕೆ ಕಾರಣರಾದರು.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಬ್ರಿಟನ್‌ ತಂಡದವರು ಆರಂಭಿಕ ಮುನ್ನಡೆಯಿಂದ ವಿಶ್ವಾಸ ಹೆಚ್ಚಿಸಿಕೊಂಡು ಆಡಿದ್ದರಿಂದ ಮೊದಲ ಗೋಲು ಬಂದ ನಂತರದ ಎರಡೇ ನಿಮಿಷಗಳಲ್ಲಿ ಮತ್ತೊಂದು ಗೋಲು ಕಲೆ ಹಾಕಿತು. ನಿಕೊಲಾ  ವೈಟ್‌ 27ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ 2–0ರಲ್ಲಿ ಮುನ್ನಡೆ ಕಾರಣವಾಯಿತು.

ಬ್ರಿಟನ್‌ ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಐದನೇ ಸ್ಥಾನ ಪಡೆದಿತ್ತು. ಒಲಿಂಪಿಕ್ಸ್‌ನಲ್ಲಿ ಎರಡು ಸಲ ಕಂಚು ಜಯಿಸಿದೆ. ಬ್ರಿಟನ್‌ ತಂಡದ ಮುನ್ನಡೆ ಹೆಚ್ಚಿದಂತೆಲ್ಲಾ ಭಾರತದ ಆಟಗಾರ್ತಿಯರ ಮೇಲೆ ಒತ್ತಡವೂ ಹೆಚ್ಚುತ್ತಾ ಹೋಯಿತು. ಇದರಿಂದ ಪದೇ ಪದೇ ಚೆಂಡಿನ ಮೇಲೆ ನಿಯಂತ್ರಣ ಕಳೆದುಕೊಂಡು ಪರದಾಡಿದರು.

ಗೋಲು ಗಳಿಸುವ ಅವಕಾಶಗಳನ್ನು ಕೈಚೆಲ್ಲಿದರು.  ಬ್ರಿಟನ್ ತಂಡ ಡ್ರ್ಯಾಗ್‌ ಫ್ಲಿಕ್ಕಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತು. ಚೆಂಡಿನ ಜೊತೆ ವೇಗವಾಗಿ ಮುನ್ನುಗ್ಗಿ ಗೋಲುಗಳನ್ನು ಕಲೆ ಹಾಕಿತು.  ಎದುರಾಳಿ ಆಟಗಾರ್ತಿಯರ ಸಾಮರ್ಥ್ಯಕ್ಕೆ ತಕ್ಕಂತೆ ಆಡುವಲ್ಲಿ ಭಾರತ ವಿಫಲವಾಯಿತು. ಬ್ರಿಟನ್‌ ತಂಡಕ್ಕೆ ಮೂರನೇ ಗೋಲನ್ನು ಅಲೆಕ್ಸ್‌ ಡಾನ್ಸನ್‌ 33ನೇ ನಿಮಿಷದಲ್ಲಿ ತಂದುಕೊಟ್ಟರು.

ಜಯ ಅನಿವಾರ್ಯ: ಮೊದಲ ಗೆಲುವಿಗಾಗಿ ಕಾಯುತ್ತಿರುವ  ಸುಶೀಲಾ ಚಾನು ನಾಯಕತ್ವದ ಭಾರತ ತಂಡ ನಾಕೌಟ್‌ ಹಂತ ಪ್ರವೇಶಿಸಬೇಕಾದರೆ ಉಳಿದ ಪಂದ್ಯಗಳಲ್ಲಿ ಗೆಲುವು ಪಡೆಯಲೇಬೇಕಿದೆ.

ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಬ್ರಿಟನ್‌ ಆರು ಪಾಯಿಂಟ್ಸ್‌ನಿಂದ ‘ಬಿ’ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದೆ. ಅಮೆರಿಕ (6), ಅರ್ಜೆಂಟೀನಾ (3) ನಂತರದ ಸ್ಥಾನಗಳಲ್ಲಿವೆ. ಒಂದು ಪಾಯಿಂಟ್‌ ಹೊಂದಿರುವ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಸುಶೀಲಾ ಬಳಗ ಇನ್ನು ಮೂರು ಲೀಗ್ ಪಂದ್ಯಗಳಲ್ಲಿ ಆಡಲಿದೆ. ಬುಧವಾರ ನಡೆಯುವ ಹಣಾಹಣಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಎದುರು ಪೈಪೋಟಿ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.