ADVERTISEMENT

ಭಯಬೇಡ...ಪಂದ್ಯಕ್ಕೆ ಭಾರಿ ಭದ್ರತಾ ವ್ಯವಸ್ಥೆ ಇದೆ!

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 18:00 IST
Last Updated 25 ಫೆಬ್ರುವರಿ 2011, 18:00 IST

ಬೆಂಗಳೂರು: ‘ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಭಾನುವಾರ (ಫೆ.27) ವಿಶ್ವಕಪ್ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಸೂಕ್ತ ಭದ್ರತೆ ಕಲ್ಪಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ತಿಳಿಸಿದರು.

‘700 ಮಂದಿ ಸಂಚಾರ ಪೊಲೀಸರು ಸೇರಿದಂತೆ ಒಟ್ಟು ಮೂರು ಸಾವಿರ ಸಿಬ್ಬಂದಿಯನ್ನು ಕ್ರೀಡಾಂಗಣದ ಸುತ್ತಮುತ್ತ ನಿಯೋಜಿಸಲಾಗುವುದು. ಪಂದ್ಯ ವೀಕ್ಷಿಸಲು ಬರುವ ವಿದೇಶಿಯರಿಗೆ ವಿಶೇಷ ಭದ್ರತೆ ಕಲ್ಪಿಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ಹೇಳಿದರು.

‘ಪಂದ್ಯಕ್ಕೆ ಯಾವುದೇ ಅಡ್ಡಿ ಆತಂಕವಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗೆ ಅಗತ್ಯ ಬಂದೋಬಸ್ತ್ ಮಾಡಲಾಗಿದೆ.ವಿಧ್ವಂಸಕ ಕೃತ್ಯಗಳನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗುಪ್ತಚರ ಇಲಾಖೆ ಸಿಬ್ಬಂದಿಯು ಸಹ ಕ್ರೀಡಾಂಗಣ ಸೇರಿದಂತೆ ನಗರದೆಲ್ಲೆಡೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಿದ್ದಾರೆ’ ಎಂದು ಬಿದರಿ ಮಾಹಿತಿ ನೀಡಿದರು.

‘ಶ್ವಾನ ದಳ ಮತ್ತು ಬಾಂಬ್ ಪತ್ತೆ ದಳ ಸಿಬ್ಬಂದಿ ಕ್ರೀಡಾಂಗಣ ಸೇರಿದಂತೆ ಎಲ್ಲೆಡೆ ತಪಾಸಣೆ ನಡೆಸಲಿದ್ದಾರೆ. ಅಲ್ಲದೇ ಕ್ರೀಡಾಂಗಣದ ಅಕ್ಕಪಕ್ಕ ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ’ ಎಂದು ಅವರು ಹೇಳಿದರು.‘ಕ್ರೀಡಾಭಿಮಾನಿಗಳು ಕ್ಯಾಮೆರಾ, ಲ್ಯಾಪ್‌ಟಾಪ್, ನೀರಿನ ಬಾಟಲ್, ಬ್ಯಾಗ್‌ಗಳನ್ನು ಕ್ರೀಡಾಂಗಣಕ್ಕೆ ಕೊಂಡೊಯ್ಯುವಂತಿಲ್ಲ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೇ ಕುಡಿಯುವ ನೀರಿನ ವ್ಯವಸ್ಥೆ ಮಾಡಲಿದೆ. ಎಲ್ಲ ಕ್ರೀಡಾಭಿಮಾನಿಗಳು ಶಿಸ್ತಿನಿಂದ ವರ್ತಿಸಿ, ಪಂದ್ಯದ ಸಂತೋಷದ ಕ್ಷಣಗಳನ್ನು ಅನುಭವಿಸಬೇಕು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.