ADVERTISEMENT

ಭರತ್‌, ಚೇತನ್‌ ದಾಖಲೆ

ಬೆಂಗಳೂರು ವಿವಿ ಅಂತರ ಕಾಲೇಜ್‌ ಅಥ್ಲೆಟಿಕ್ಸ್‌

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST
ಬೆಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಹೈಜಂಪ್‌ ಸ್ಪರ್ಧೆಯಲ್ಲಿ ಗುರುವಾರ ಕಂಠೀರವ ಕ್ರೀಡಾಂಗಣದಲ್ಲಿ ದಾಖಲೆ ನಿರ್ಮಿಸಿದ ಕೆ.ಆರ್‌.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಚೇತನ್‌ ಅವರು ಜಿಗಿದ ರೀತಿ  	-ಪ್ರಜಾವಾಣಿ ಚಿತ್ರ
ಬೆಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಹೈಜಂಪ್‌ ಸ್ಪರ್ಧೆಯಲ್ಲಿ ಗುರುವಾರ ಕಂಠೀರವ ಕ್ರೀಡಾಂಗಣದಲ್ಲಿ ದಾಖಲೆ ನಿರ್ಮಿಸಿದ ಕೆ.ಆರ್‌.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಚೇತನ್‌ ಅವರು ಜಿಗಿದ ರೀತಿ -ಪ್ರಜಾವಾಣಿ ಚಿತ್ರ   

ಬೆಂಗಳೂರು: ಗುಪ್ತಾ ಮ್ಯಾನೇಜ್‌ಮೆಂಟ್‌ ಕಾಲೇಜ್‌ನ ಕೆ.ಎ.ಭರತ್‌ ಹಾಗೂ ಕೆ.ಆರ್‌.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಬಿ.ಚೇತನ್‌ ಅವರು ಗುರುವಾರ ಇಲ್ಲಿ ಆರಂಭವಾದ ಬೆಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ನೂತನ ದಾಖಲೆ ನಿರ್ಮಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಪುರುಷರ 800 ಮೀಟರ್‌ ಓಟದ ಸ್ಪರ್ಧೆಯಲ್ಲಿ ಭರತ್‌ ಮೊದಲ ಸ್ಥಾನ ಗಳಿಸಿದರು. ಅವರು ಈ ದೂರ ಕ್ರಮಿಸಲು 1 ನಿಮಿಷ 53.7 ಸೆಕೆಂಡ್‌ ತೆಗೆದುಕೊಂಡರು. ಈ ಮೂಲಕ 2004ರಲ್ಲಿ ಅಲ್‌ ಅಮೀನ್‌ ಕಾಲೇಜ್‌ನ ವಿ.ರೋಹಿತ್‌ (1:54.5 ಸೆ.) ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು.

ಜಯನಗರದ ನ್ಯಾಷನಲ್‌ ಕಾಲೇಜ್‌ನ ಎನ್‌.ವಿನಯ್‌ ಹಾಗೂ ಅಲ್‌ ಅಮೀನ್‌ ಕಾಲೇಜ್‌ನ ಪುಟ್ಟರಾಜ್‌ ನಂತರದ ಸ್ಥಾನ ಗಳಿಸಿದರು.
ಹೈಜಂಪ್‌ ಸ್ಪರ್ಧೆಯಲ್ಲಿ ಚೇತನ್‌ 2.10 ಮೀಟರ್‌ ಎತ್ತರ ಜಿಗಿದರು. ಈ ಮೂಲಕ ಹೋದ ವರ್ಷ ನಿರ್ಮಿಸಿದ್ದ ತಮ್ಮ ದಾಖಲೆಯನ್ನು (2.3 ಮೀ.ಎತ್ತರ) ಅವರು ಅಳಿಸಿ ಹಾಕಿದರು. ನೆಲಮಂಗಲದ ಪ್ರಥಮ ದರ್ಜೆ ಕಾಲೇಜ್‌ನ ಇಮ್ರಾನ್‌ ಪಾಷಾ (1.65 ಮೀ.) ಎರಡನೇ ಸ್ಥಾನ ಪಡೆದರು.

ನೂರು ಮೀಟರ್ಸ್‌ ಓಟದಲ್ಲಿ ಕೋಲಾರದ ಸರ್ಕಾರಿ ಬಾಲಕರ ಕಾಲೇಜ್‌ನ ವಿ.ಅರುಣ್‌ ಕುಮಾರ್‌ (10.8 ಸೆ.) ಮೊದಲ ಸ್ಥಾನ ಗಳಿಸಿದರು. ಅಲ್‌ ಅಮೀನ್‌ ಕಾಲೇಜ್‌ನ ಬಿ.ಆರ್‌.ರಂಗನಾಥ್‌ (11.1 ಸೆ.) ಹಾಗೂ ಸೇಂಟ್‌ ಜೋಸೆಫ್ಸ್‌ ಕಾಮರ್ಸ್ ಕಾಲೇಜ್‌ನ ತನುಜ್‌ ಬಟಾವಿಯಾ (11.3 ಸೆ.) ನಂತರದ ಸ್ಥಾನ ಪಡೆದರು.

ಮಹಿಳೆಯರ ವಿಭಾಗದ ನೂರು ಮೀಟರ್ಸ್‌ ಓಟದಲ್ಲಿ ಸೇಂಟ್‌ ಜೋಸೆಫ್ಸ್‌ ಕಾಮರ್ಸ್ ಕಾಲೇಜ್‌ನ ಮೇಘನಾ ಶೆಟ್ಟಿ (12.3 ಸೆ.) ಪ್ರಥಮ ಸ್ಥಾನ ಗಳಿಸಿದರು. ಐಶ್ವರ್ಯ ಪ್ರಥಮ ದರ್ಜೆ ಕಾಲೇಜ್‌ನ ವೀಣಾ ಎಚ್‌.ಅಡಗಿಮನಿ (12.6 ಸೆ.) ಹಾಗೂ ಬಿ.ಜಿ.ಎಸ್‌.ಇನ್‌ಸ್ಟಿಟ್ಯೂಷನ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನ ಎಸ್‌.ಓಂಪ್ರಿಯಾ ನಂತರದ ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.