ಬೆಂಗಳೂರು: ಆರಂಭಿಕ ಬ್ಯಾಟ್ಸ್‌ಮನ್ ಭರತ್ ಚಿಪ್ಲಿ ಮಾರ್ಚ್ 23ರಿಂದ 27ರವರೆಗೆ ಮುಂಬೈನಲ್ಲಿ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಚಿಪ್ಲಿ ಇತ್ತೀಚೆಗೆ ನಡೆದ ವಿಜಯ ಹಜಾರೆ ಟ್ರೋಫಿ ಅಖಿಲ ಭಾರತ ಏಕದಿನ ಟೂರ್ನಿಯಲ್ಲಿ ಆಡಿದ ತಂಡದಲ್ಲಿ ಇರಲಿಲ್ಲ. ನಾಯಕ ರಾಬಿನ್ ಉತ್ತಪ್ಪ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ. ಈ ಟೂರ್ನಿಗೆ ಮಂಗಳವಾರ ಜೆ.ಅಭಿರಾಮ್ ಸಾರಥ್ಯದ ರಾಜ್ಯ ಆಯ್ಕೆ ಸಮಿತಿಯು 15 ಆಟಗಾರರ ತಂಡ ಪ್ರಕಟಿಸಿತು.
ತಂಡದಲ್ಲಿ ಆಲ್‌ರೌಂಡರ್‌ಗಳಿಗೆ ಮಹತ್ವ ನೀಡಲಾಗಿದೆ. ಅನಿರುದ್ಧ ಜೋಶಿ, ಕೆ.ಗೌತಮ್, ಅಬ್ರಾರ್ ಕಾಜಿ, ರಾಜೂ ಭಟ್ಕಳ್ ಹಾಗೂ ಸುನಿಲ್ ರಾಜು ತಂಡದಲ್ಲಿರುವ ಪ್ರಮುಖ ಆಲ್‌ರೌಂಡರ್‌ಗಳು. ಎನ್.ಸಿ.ಅಯ್ಯಪ್ಪ, ಅಭಿಮನ್ಯು ಮಿಥುನ್ ಹಾಗೂ ರೋನಿತ್ ಮೋರೆ ತಂಡದಲ್ಲಿರುವ ವೇಗದ ಬೌಲರ್‌ಗಳು.
ತಂಡ ಇಂತಿದೆ: ರಾಬಿನ್ ಉತ್ತಪ್ಪ (ನಾಯಕ-ವಿಕೆಟ್ ಕೀಪರ್), ಭರತ್ ಚಿಪ್ಲಿ, ಮಾಯಂಕ್ ಅಗರ್‌ವಾಲ್, ಗಣೇಶ್ ಸತೀಶ್, ಮನೀಷ್ ಪಾಂಡೆ, ಸ್ಟುವರ್ಟ್ ಬಿನ್ನಿ (ಉಪನಾಯಕ), ಸುನಿಲ್ ರಾಜು, ಅಭಿಮನ್ಯು ಮಿಥುನ್, ರಾಜೂ ಭಟ್ಕಳ್, ರೋನಿತ್ ಮೋರೆ, ಕೆ.ಪಿ.ಅಪ್ಪಣ್ಣ, ಎನ್.ಸಿ.ಅಯ್ಯಪ್ಪ, ಅಬ್ರಾರ್ ಕಾಜಿ, ಅನಿರುದ್ಧ ಜೋಶಿ ಹಾಗೂ ಕೆ.ಗೌತಮ್. ಕೋಚ್: ಕೆ.ಜೆಸ್ವಂತ್, ಮ್ಯಾನೇಜರ್: ಆರ್.ಸುಧಾಕರ್ ರಾವ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.