ADVERTISEMENT

ಭಾರತಕ್ಕೆ ಇಂದು ಸ್ಕಾಟ್ಲೆಂಡ್ ಸವಾಲು

ವಿಶ್ವ ಹಾಕಿ ಲೀಗ್ ಸೆಮಿಫೈನಲ್‌: ಮಿಡ್‌ಫೀಲ್ಡರ್‌ ಮನ್‌ಪ್ರೀತ್‌ ಸಿಂಗ್‌ಗೆ ಸಾರಥ್ಯ

ಪಿಟಿಐ
Published 14 ಜೂನ್ 2017, 19:30 IST
Last Updated 14 ಜೂನ್ 2017, 19:30 IST
ಭಾರತ ತಂಡದ ಆಟಗಾರರು ವಿಶ್ವ ಹಾಕಿ ಲೀಗ್‌ ಸೆಮಿಫೈನಲ್ಸ್‌ನಲ್ಲಿ ಗೆಲುವಿನ ಆರಂಭ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ
ಭಾರತ ತಂಡದ ಆಟಗಾರರು ವಿಶ್ವ ಹಾಕಿ ಲೀಗ್‌ ಸೆಮಿಫೈನಲ್ಸ್‌ನಲ್ಲಿ ಗೆಲುವಿನ ಆರಂಭ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ   

ಲಂಡನ್‌ : ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಹಂತದ ಪಂದ್ಯದಲ್ಲಿ ಭಾರತ ತಂಡ ಗುರುವಾರ ಸ್ಕಾಟ್ಲೆಂಡ್‌ನ ಸವಾಲನ್ನು ಎದುರಿಸಲಿದೆ.
ಕ್ವೀನ್‌ ಎಲಿಜಬೆತ್‌ ಒಲಿಂಪಿಕ್ ಪಾರ್ಕ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಸುಲಭ ಜಯ ಸಾಧಿಸುವ ಭರವಸೆಯಲ್ಲಿದೆ ಭಾರತ ತಂಡ. ಸ್ಕಾಟ್ಲೆಂಡ್‌ 23ನೇ ರ್‌್ಯಾಂಕಿಂಗ್ ಹೊಂದಿದೆ. ಸೆಮಿಫೈನಲ್‌ನಲ್ಲಿ ಭಾರತ ‘ಬಿ’ ಗುಂಪಿನಲ್ಲಿದೆ.

ನೆದರ್ಲೆಂಡ್ಸ್‌, ಕೆನಡಾ ಮತ್ತು ಪಾಕಿಸ್ತಾನ ಈ ಗುಂಪಿನಲ್ಲಿರುವ ಇತರ ತಂಡಗಳು. ಎ ಗುಂಪಿನಲ್ಲಿ ಅರ್ಜೆಂಟೀನಾ, ಇಂಗ್ಲೆಂಡ್‌, ಕೊರಿಯಾ, ಚೀನಾ ಮತ್ತು ಮಲೇಷ್ಯಾ ತಂಡಗಳು ಇವೆ. ಭಾರತ ತಂಡ ಕೆನಡಾ ವಿರುದ್ಧ ಜೂನ್ 17ರಂದು, ಪಾಕಿಸ್ತಾನ ವಿರುದ್ಧ ಜೂನ್ 18ರಂದು ಮತ್ತು ನೆದರ್ಲೆಂಡ್ಸ್ ವಿರುದ್ಧ ಜೂನ್‌ 20ರಂದು ಸೆಣಸಲಿದೆ.

ರೋಲಂಟ್ ಓಲ್ಟಮನ್ಸ್‌ ಅವರ ಗರಡಿಯಲ್ಲಿ ಪಳಗಿರುವ ತಂಡಕ್ಕೆ ಈಗ ಯಾವುದೇ ದೇಶದ ಸವಾಲು ಎದುರಿಸುವ ಸಾಮರ್ಥ್ಯವಿದೆ. ವಿಶ್ವ ರ್‌್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಭಾರತಕ್ಕೆ ಈಗ ತನ್ನ ಶಕ್ತಿ ಸಾಬೀತು ಮಾಡುವ ಅವಕಾಶ ಹಾಕಿ ಲೀಗ್‌ ಸೆಮಿಫೈನಲ್‌ನಲ್ಲಿದೆ.
ನಾಯಕ ಪಿ.ಆರ್.ಶ್ರೀಜೇಶ್‌ ಅನು ಪಸ್ಥಿತಿಯಲ್ಲಿ ಮಿಡ್‌ಫೀಲ್ಡರ್‌ ಮನ್‌ಪ್ರೀತ್‌ ಸಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ.

ADVERTISEMENT

ಸರ್ದಾರ್ ಸಿಂಗ್‌ ಮತ್ತು ಉಪನಾಯಕ ಚಿಂಗ್ಲೆನ್ಸಾನಾ ಸಿಂಗ್‌ ಭಾರತದ ಮಿಡ್‌ ಫೀಲ್ಡ್ ವಿಭಾಗದ ಶಕ್ತಿ ಎನಿಸಿದ್ದಾರೆ. ಫಾರ್ವರ್ಡ್ ವಿಭಾಗ ಕೂಡ ಬಲಿಷ್ಠವಾಗಿದ್ದು ರಮಣ್‌ದೀಪ್ ಸಿಂಗ್‌, ಎಸ್‌.ವಿ. ಸುನಿಲ್‌, ತಲ್ವಿಂದರ್‌ ಸಿಂಗ್‌, ಮನ್‌ದೀಪ್‌ ಸಿಂಗ್‌ ಮತ್ತು ಆಕಾಶ್‌ ದೀಪ್ ಸಿಂಗ್‌ ಈ ವಿಭಾಗಕ್ಕೆ ಬಲ ತುಂಬ ಲಿದ್ದಾರೆ. ಆದರೆ ರಕ್ಷಣಾ ವಿಭಾಗಕ್ಕೆ ಬಿದ್ದಿರುವ ‘ಪೆಟ್ಟು’ ತಂಡದ ಆತಂಕಕ್ಕೆ ಕಾರಣವಾಗಿದೆ.

ರೂಪಿಂದರ್‌ ಸಿಂಗ್‌ ಗಾಯ ಗೊಂಡು ತಂಡದಿಂದ ಹೊರಗೆ ಉಳಿದಿ ದ್ದರೆ, ಕನ್ನಡಿಗ ಎಸ್‌.ಕೆ. ಉತ್ತಪ್ಪ ಅವರು ತಂದೆಯ ಸಾವಿನ ಕಾರಣ ಭಾರತಕ್ಕೆ ವಾಪಸಾಗಿದ್ದಾರೆ. ರೂಪಿಂದರ್ ಬದಲಿಗೆ ಜಸ್‌ಜೀತ್ ಸಿಂಗ್ ಅವರನ್ನು ತಂಡದಲ್ಲಿ ಸೇರಿಸಲಾಗಿದ್ದು ಉತ್ತಪ್ಪ ಬದಲಿಗೆ ಸುಮಿತ್ ತಂಡದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.