ADVERTISEMENT

ಭಾರತಕ್ಕೆ ಸುಲಭ ತುತ್ತಾಗುವುದೇ ಕೆನಡಾ?

ಹಾಕಿ ವಿಶ್ವ ಲೀಗ್‌ ಸೆಮಿಫೈನಲ್‌ನ ಎರಡನೇ ಪಂದ್ಯ ಇಂದು: ಭರವಸೆಯಲ್ಲಿ ಮನ್‌ಪ್ರೀತ್‌ ಬಳಗ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 19:28 IST
Last Updated 16 ಜೂನ್ 2017, 19:28 IST
ಭಾರತ ತಂಡದ ಆಟಗಾರರು ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌ ಪಂದ್ಯದಲ್ಲಿ ಕೆನಡಾ ತಂಡವನ್ನು ಸುಲಭವಾಗಿ ಮಣಿಸುವ ವಿಶ್ವಾಸದಲ್ಲಿದ್ದಾರೆ
ಭಾರತ ತಂಡದ ಆಟಗಾರರು ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌ ಪಂದ್ಯದಲ್ಲಿ ಕೆನಡಾ ತಂಡವನ್ನು ಸುಲಭವಾಗಿ ಮಣಿಸುವ ವಿಶ್ವಾಸದಲ್ಲಿದ್ದಾರೆ   

ಲಂಡನ್‌: ವಿಶ್ವ ಹಾಕಿ ಲೀಗ್‌ ಸೆಮಿಫೈನಲ್ಸ್‌ನ ಎರಡನೇ ಪಂದ್ಯದಲ್ಲಿ ಭಾರತ ತಂಡ ಶನಿವಾರ ಕೆನಡಾವನ್ನು ಎದುರಿಸಲಿದೆ.
ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ವಿರುದ್ಧ 4–1 ಗೋಲುಗಳಿಂದ ಜಯ ಸಾಧಿಸಿದ ತಂಡ ಈ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ. ಕೆನಡಾ ಅಷ್ಟೊಂದು ಬಲಿಷ್ಠ ತಂಡ ಅಲ್ಲದೇ ಇರುವುದು ‘ಬಿ’ ಗುಂಪಿನ ಈ ಪಂದ್ಯದಲ್ಲಿ ಭಾರತ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ.

ರ್‌್ಯಾಂಕಿಂಗ್‌ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಭಾರತ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ನಂತರ ನಾಲ್ಕನೇ ಕ್ರಮಾಂಕದ ನೆದರ್ಲೆಂಡ್ಸ್‌ ವಿರುದ್ಧ ಸೆಣಸಲಿದೆ. ಆದ್ದರಿಂದ ಶನಿವಾರ ಸುಲಭ ಗೆಲುವು ಸಾಧಿಸಿ ಪೂರ್ಣ ಪಾಯಿಂಟ್ ಕಲೆ ಹಾಕುವ ಉದ್ದೇಶದಿಂದ ಕಣಕ್ಕೆ ಇಳಿಯಲಿದೆ.

ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಇದರ ಸಂಪೂರ್ಣ ಲಾಭ ಪಡೆದು ಕೊಂಡ ಎದುರಾಳಿಗಳು ಮೊದಲ ಅರ್ಧದ ವರೆಗೂ ಮುನ್ನಡೆ ಸಾಧಿಸಿ ದ್ದರು. ಎಚ್ಚೆತ್ತುಕೊಂಡ ಭಾರತ ತಂಡ ದವರು ಎಲ್ಲ ನಾಲ್ಕು ಗೋಲುಗಳನ್ನು ಮೂರನೇ ಕ್ವಾರ್ಟರ್‌ನಲ್ಲೇ ಗಳಿಸಿದ್ದರು.

ADVERTISEMENT

ರಮಣದೀಪ್‌  ಎರಡು, ಆಕಾಶ್‌ ದೀಪ್‌ ಸಿಂಗ್‌ ಮತ್ತು ಹರ್ಮನ್‌ಪ್ರೀತ್‌ ಸಿಂಗ್‌ ತಲಾ ಒಂದೊಂದು ಗೋಲು ಗಳಿಸಿದ್ದರು. ಮೊದಲ ಪಂದ್ಯದಲ್ಲಿ ಮಾಡಿದ ತಪ್ಪನ್ನು ಪುನರಾವರ್ತಿಸದೆ ಶನಿವಾರ ಆಡಿದರೆ ತಂಡ  ಕ್ವಾರ್ಟರ್‌ ಫೈನಲ್‌ ಹಂತಕ್ಕೆ ಏರುವ ಕನಸು ಜೀವಂತವಾಗಿರಿಸಿಕೊಳ್ಳಬಹುದು.
ರೂಪಿಂದರ್ ಪಾಲ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಕೋತಾಜಿತ್ ಸಿಂಗ್‌ ಮತ್ತು ಹರ್ಮನ್‌ಪ್ರೀತ್ ಸಿಂಗ್‌ ಭಾರತದ ರಕ್ಷಣಾ ವಿಭಾಗದ ಹೊಣೆ ಹೊತ್ತಿದ್ದಾರೆ. ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ವಿರು ದ್ಧದ ಪಂದ್ಯಗಳಲ್ಲಿ ಗಮನ ಸೆಳೆ ಯಲು ಶುಕ್ರವಾರದ ಪಂದ್ಯವನ್ನು ಇವರಿಬ್ಬರು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ.

ಸರ್ದಾರ್ ಸಿಂಗ್ ಮತ್ತು ನಾಯಕ ಮನ್‌ಪ್ರೀತ್‌ ಸಿಂಗ್ ಭಾರತದ ಮಿಡ್‌ ಫೀಲ್ಡ್‌ ವಿಭಾಗದ ಚುಕ್ಕಾಣಿ ಹಿಡಿದಿದ್ದು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಕೆನಡಾದವರು ಟೂರ್ನಿಯ ಮೊದಲ ಪಂದ್ಯವನ್ನು ಶನಿವಾರ ಆಡಲಿದ್ದು ಭಾರತದ ಸವಾ ಲನ್ನು ಮೆಟ್ಟಿನಿಲ್ಲಲು ಯಾವ ತಂತ್ರಗಳನ್ನು ಅನುಸರಿಸಲಿದೆ ಎಂಬುದು ಕುತೂ ಹಲದ ಪ್ರಶ್ನೆ.  ದಿನದ ಇತರ ಪಂದ್ಯಗಳಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಸ್ಕಾಟ್ಲೆಂಡ್‌ ಮತ್ತು ಕೊರಿಯಾ ವಿರುದ್ಧ ಚೀನಾ ಸೆಣಸಲಿದೆ. ಇಂಗ್ಲೆಂಡ್‌ ತಂಡ ಮಲೇಷ್ಯಾವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.